ಸಾದಾಸೀದಾ ಹುಡುಗ ಆತ. ಸಂಗೀತ ನಿರ್ದೇಶಕನಾಗುವ ಕನಸು. ಜೊತೆಗೆ ತನ್ನ ಹೃದಯದೊಳಗಿರುವ ರಾಗಕ್ಕೆ ಹೊಂದಿಕೆಯಾಗುವ ಧ್ವನಿಯೇ ಜೀವನ ಸಂಗಾತಿಯಾಗಬೇಕೆಂಬ ಅಭಿಲಾಷೆ. ಹೀಗಿರುವಾಗ ದೂರದಿಂದ ಧ್ವನಿಯೊಂದು ಕೇಳಿಬರುತ್ತದೆ.. ಇವನ ಹೃದಯದ ಟ್ಯೂನ್‌ಗೆ ಚೆನ್ನಾಗಿಯೇ ಆ ಧ್ವನಿ ಹೊಂದಿಕೆಯಾಗುತ್ತದೆ. ಹಾಗಾದರೆ ಆಕೆ ಯಾರು? ಹುಡುಕಾಟ ಶುರು? ಸಿಕ್ಕವಳ ಧ್ವನಿಗೂ ಈತನ ಹೃದಯದ ಟ್ಯೂನ್‌ಗೂ “ಮೀಟರ್’ ಕೂರುತ್ತಾ? ಪ್ರಶ್ನೆಗಳು ಹಲವು… ಆದರೆ, ಹಾದಿ ಸರಳ, ಅಲ್ಲಲ್ಲಿ ವಿರಳ…
ಸಿಂಪಲ್ ಸುನಿ ನಿರ್ದೇಶನದ ಸಿನಿಮಾ ಎಂದರೆ ಅಲ್ಲೊಂದು ಹ್ಯೂಮರ್ ಇರುತ್ತದೆ, ಸಣ್ಣ ಸಣ್ಣ ಸನ್ನಿವೇಶ, ಸಂಭಾಷಣೆಗಳಲ್ಲಿ ನಗು ಉಕ್ಕಿಸುತ್ತಾ, ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಾ ಸಾಗುತ್ತದೆ. ಈ ವಾರ ತೆರೆಕಂಡಿರುವ “ಒಂದು ಸರಳ ಪ್ರೇಮಕಥೆ’ ಕೂಡಾ ಅದೇ ಹಾದಿಯಲ್ಲಿ ಸಾಗಿ, ಕೊನೆಗೊಂದು ಸಮಾಧಾನದ ನಿಟ್ಟುಸಿರುನೊಂದಿಗೆ ಥಿಯೇಟರ್ ನಿಂದ ಕಳುಹಿಸುವ ಸಿನಿಮಾ. ಆ ಮಟ್ಟಿಗೆ ಸುನಿ ಒಂದಷ್ಟು ಹೊಸದನ್ನು ಕಟ್ಟಿಕೊಟ್ಟಿದ್ದಾರೆ. ರೆಗ್ಯುಲರ್ ಶೈಲಿಯ ನಿರೂಪಣೆಯಿಂದ ಹೊರತಾಗಿರುವುದು “ಸರಳ ಪ್ರೇಮ’ದ ಪ್ಲಸ್‌ಗಳಲ್ಲಿ ಒಂದು.
ಆರಂಭದಿಂದ ಇಂಟರ್‌ವಲ್‌ವರೆಗೆ ಸುನಿ ಒಂದಷ್ಟು ಸನ್ನಿವೇಶಗಳ ಮೂಲಕ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಮುಖ್ಯಕಥೆ ತೆರೆದುಕೊಳ್ಳಲು ಬೇಕಾದ ಭೂಮಿಕೆಯನ್ನು ಸಿದ್ಧಪಡಿಸಿದ್ದಾರೆಂದರೆ ತಪ್ಪಲ್ಲ. ಇಡೀ ಸಿನಿಮಾ ನಿಂತಿರೋದು ದ್ವಿತೀಯಾರ್ಧದಲ್ಲಿ. ಅದರಲ್ಲೂ ಕ್ಲೈಮ್ಯಾಕ್ಸ್ ಸಿನಿಮಾಕ್ಕೆ ಬಹುದೊಡ್ಡ ಶಕ್ತಿ. ಇಲ್ಲಿ ಕಥೆ ನಾನಾ ಆಯಾಮಗಳನ್ನು ಪಡೆಯುತ್ತದೆ. ಪ್ರೇಕ್ಷಕರಿಗೆ ಅಚ್ಚರಿ ಮೇಲೆ ಅಚ್ಚರಿ ನೀಡುತ್ತಾ ಸಾಗುವ ಸಿನಿಮಾ ಅಲ್ಲಲ್ಲಿ ನಗಿಸುವಲ್ಲಿಯೂ ಸಫಲವಾಗಿದೆ. ಮೊದಲ ಹೇಳಿದಂತೆ ಇದೊಂದು ಸಾದಾಸೀದಾ ಹುಡುಗನ ಕಥೆಯಾಗಿರುವುದರಿಂದ ಸಿನಿಮಾ ಬಿಲ್ಡಪ್‌ಗ್ಳಿಂದ ಮುಕ್ತ.
ನಾಯಕ ವಿನಯ್ ರಾಜ್ ಕುಮಾರ್ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಸಂಗೀತ ನಿರ್ದೇಶಕನಾಗಬೇಕೆಂಬ ಹಂಬಲ ಒಂದು ಕಡೆಯಾದರೆ ಹೃದಯದ ಮಾತಿಗೆ ನಿಲ್ಲುವ “ಶುದ್ಧ ಪ್ರೇಮಿ’ಯಾಗಿಯೂ ಕಾಣಿಸಿಕೊಂಡಿದ್ದಾರೆ. ನಾಯಕಿಯರಾದ
ಮಲ್ಲಿಕಾ ಸಿಂಗ್, ಸ್ವಾದಿಷ್ಟ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಸ್ವಾದಿಷ್ಟ ತಮ್ಮ ಪಾತ್ರದಲ್ಲಿ ಗಮನ ಸೆಳೆಯು ತ್ತಾರೆ. ಉಳಿದಂತೆ ರಾಜೇಶ್ ನಟರಂಗ, ಸಾಧುಕೋಕಿಲ, ರಾಘವೇಂದ್ರ ರಾಜ್‌ಕುಮಾರ್ ನಟಿಸಿ ದ್ದಾರೆ. ವೀರ್‌ಸಮರ್ಥ್ ಹಾಡುಗಳು ಗುನುಗುವಂತಿದೆ.
ರವಿಪ್ರಕಾಶ್ ರೈ