ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದಲ್ಲಿ ಇತ್ತೀಚೆಗೆ ಬಂದ ‘ಒಂದು ಸರಳ ಪ್ರೇಮಕಥೆ’ ದಿಢೀರ್ ಆಗಿ ಓಟಿಟಿಗೆ ಲಗ್ಗೆಯಿಟ್ಟಿದೆ.
ವಿನಯ್ ರಾಜ್ ಕುಮಾರ್ ನಟನೆಯ ʼಒಂದು ಸರಳ ಪ್ರೇಮಕಥೆʼ ಫೆ.8 ರಂದು ರಿಲೀಸ್ ಆಗಿತ್ತು. ಥಿಯೇಟರ್ ನಲ್ಲಿ ಉತ್ತಮ ಅಭಿಪ್ರಾಯವನ್ನು ಚಿತ್ರ ಪಡೆದುಕೊಂಡಿತ್ತು. ಯಶಸ್ವಿಯಾಗಿ 25 ದಿನಗಳನ್ನು ಪೂರೈಕೆ ಮಾಡಿತ್ತು. ಆ ಮೂಲಕ ಒಂದು ಬ್ರೇಕ್ ಗಾಗಿ ಕಾಯುತ್ತಿದ್ದ ವಿನಯ್ ಗೆ ʼಒಂದು ಸರಳ ಪ್ರೇಮಕಥೆʼ ಬ್ರೇಕ್ ನೀಡಿತು.
ಕಡಿಮೆ ಬಜೆಟ್ ನಲ್ಲಿ ಬಂದ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಸಂಗೀತ ಲೋಕದಲ್ಲಿ ಮಿಂಚಬೇಕೆನ್ನುವ ಕನಸು ಕಾಣುವ ಮಿಡಲ್ ಕ್ಲಾಸ್ ನಾಯಕ, ಗಾಯಕಿ ಆಗುವ ಕನಸು ಹೊತ್ತ ನಾಯಕಿಯ ನಡುವೆ ಸಾಗುವ ಕಥೆಯನ್ನು ಚಿತ್ರ ಒಳಗೊಂಡಿದೆ. ಫೀಲ್ ಗುಡ್ ಸಿನಿಮಾವಾಗಿ ಸಿನಿಮಂದಿಗೆ ಮನರಂಜನೆ ನೀಡಿದೆ.
ಇದೀಗ ದಿಢೀರ್ ಓಟಿಟಿಗೆ ಲಗ್ಗೆಯಿಟ್ಟಿದೆ. ಯಾವುದೇ ಮುನ್ಸೂಚನೆ ಪೋಸ್ಟ್ ಗಳಿಲ್ಲದೆ, ಸಿನಿಮಾ ನೇರವಾಗಿ ಅಮೇಜಾನ್ ಪ್ರೈಮ್ ನಲ್ಲಿ ಸಿನಿಮಾ ಸ್ಟ್ರೀಮ್ ಆಗಿದೆ. ಒಮ್ಮೆಲೇ ಸಿನಿಮಾ ಓಟಿಟಿ ಬಂದ ಕಾರಣಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.
ವಿನಯ್ ಜೊತೆ ನಾಯಕಿಯರಾಗಿ ಮಲ್ಲಿಕಾ ಸಿಂಗ್ ಹಾಗೂ ಸ್ವಾತಿಷ್ಟ ಸಾಥ್ ಕಾಣಿಸಿಕೊಂಡಿದ್ದಾರೆ. ರಾಜೇಶ್ ನಟರಂಗ ಸಾಧುಕೋಕಿಲ, ರಾಘವೇಂದ್ರ ರಾಜ್ಕುಮಾರ್, ಶ್ವೇತಾ ಶ್ರೀವಾಸ್ತವ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.