“ರಾಮ ರಾಮಾ ರೇ’ ನಂತರ ಸತ್ಯಪ್ರಕಾಶ್ ನಿರ್ದೇಶಿಸಿರುವ “ಒಂದಲ್ಲಾ ಎರಡಲ್ಲಾ’ ಚಿತ್ರವು ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಬಾರಿ ಮಕ್ಕಳ ದೊಡ್ಡ ಕಥೆಯೊಂದಿಗೆ ಬಂದಿರುವ ಸತ್ಯ, ಇದು ಪುಣ್ಯಕೋಟಿಯ ಮುಂದುವರೆದ ಭಾಗ ಎನ್ನುತ್ತಾರೆ. ಚಿತ್ರದ ಕುರಿತು ಮಾತನಾಡುವ ಸತ್ಯ, “ಇದು “ಪುಣ್ಯಕೋಟಿ’ಯ ಮುಂದುವರೆದ ಭಾಗ ಎನ್ನಬಹುದು. ಅದರಲ್ಲಿ ನಿಜವಾದ ಕಾಡು, ಪ್ರಾಣಿಗಳು ಇದ್ದವು. ಆದರೆ, ಕಾಡೆಲ್ಲಾ ನಾಡಾಗಿ ಪರಿವರ್ತನೆಯಾಗಿವೆ.
ಹಾಗೆಯೇ ಪ್ರಾಣಿಗಳೂ ಇವೆ. ಹುಲಿ, ತೋಳ ತರಹದ ಪ್ರಾಣಿಗಳಿವೆ. ಹಾಗೆಯೇ ಹಸು ತರಹದ ಮುಗಧರೂ ಇದ್ದಾರೆ. “ಪುಣ್ಯಕೋಟಿ’ ಕಥೆಯಲ್ಲಿ ಸತ್ಯ ಗೆಲ್ಲುತ್ತದೆ. ಇಲ್ಲಿ ಮುಗ್ಧತೆ ಗೆಲ್ಲುತ್ತದೆ’ ಎನ್ನುತ್ತಾರೆ ಸತ್ಯ.
ಮುಗ್ಧತೆ ಎನ್ನುವುದು ಎಲ್ಲರಲ್ಲೂ ಇರುವ ಮೂಲಭೂತ ಗುಣ ಎನ್ನುವ ಸತ್ಯ, “ಎಲ್ಲರಿಗೂ ಇನ್ನೊಬ್ಬರಿಗೆ ನೋವು ಮಾಡಬಾರದು ಎಂಬ ಮನಸ್ಸಿರುತ್ತದೆ. ಆದರೆ, ಕೆಲವೊಮ್ಮೆ ಪರಿಸ್ಥಿತಿಗನುಗುಣವಾಗಿ ಅದನ್ನು ದೂರ ತಳ್ಳಿರುತ್ತೇವೆ. ಆದರೂ ಅದು ನಮ್ಮಲ್ಲೇ ಇರುತ್ತದೆ. ಅದನ್ನು ಟಚ್ ಮಾಡುವ ಪ್ರಯತ್ನ ಇದು. ಇದು ಮಕ್ಕಳು ನೋಡಲೇಬೇಕಾದ ಚಿತ್ರ. ಏಕೆಂದರೆ, ಮನುಷ್ಯನಿಗೆ ಕಷ್ಟ ನೋವು ಆದಾಗ ಸ್ಪಂದಿಸುವುದು ಮನುಷ್ಯ ಮಾತ್ರ ಅಂತ ಗೊತ್ತಾಗಬೇಕು. ಅಂತಹ ಅಂಶಗಳು ಈ ಚಿತ್ರದಲ್ಲಿದೆ. ಇಲ್ಲಿ ಯಾವುದೇ ಕೆಟ್ಟ ಪಾತ್ರಗಳಿಲ್ಲ. ಎಲ್ಲವರೂ ಒಳ್ಳೆಯವರೇ. ತಮ¤ಮ್ಮ ಪರಿಧಿಯಲ್ಲಿ ಎಲ್ಲರೂ ಹೇಗೆ ಸ್ಪಂದಿಸುತ್ತಾರೆ ಎನ್ನುವುದೇ ಚಿತ್ರದ ಕಥೆ. ಹಾಗಾಗಿ ಮಕ್ಕಳಿಗೆ ಅದು ಗೊತ್ತಾಗಬೇಕು. ಬರೀ ಕೆಟ್ಟವರೇ ಇದ್ದಾರೆ, ಕೆಟ್ಟದ್ದೇ ಆಗುತ್ತದೆ ಎಂಬುದು ಅವರ ಮನಸ್ಸಿನಿಂದ ಹೋಗಬೇಕು. ಗೊತ್ತಾಗುವುದಕ್ಕೆ ಈ ಚಿತ್ರ ನೋಡಬೇಕು’ ಎನ್ನುತ್ತಾರೆ ಸತ್ಯ.
ಇನ್ನು ಚಿತ್ರಕ್ಕೆ “ಒಂದಲ್ಲಾ ಎರಡಲ್ಲಾ’ ಎಂದು ಹೆಸರಿಟ್ಟಿರುವ ಬಗ್ಗೆ ಮಾತನಾಡುವ ಅವರು, “ಈ ಹೆಸರು ಚಿತ್ರಕ್ಕೆ ಸೂಕ್ತವಾಗಿದೆ. ಇಲ್ಲಿ ಪಾತ್ರಗಳು, ವಿಷಯಗಳು, ಸನ್ನಿವೇಶಗಳು ಎಲ್ಲವೂ ಜಾಸ್ತಿಯೇ. ಖುಷಿ, ದುಃಖ, ಭಾವನೆ ಎಲ್ಲವೂ ಎರಡಕ್ಕಿಂತ ಜಾಸ್ತಿ ಇರುವುದರಿಂದ ಈ ಹೆಸರು ಚಿತ್ರಕ್ಕೆ ಸೂಕ್ತವಾಗಿದೆ’ ಎನ್ನುತ್ತಾರೆ.
“ಒಂದಲ್ಲಾ ಎರಡಲ್ಲಾ’ ಚಿತ್ರದಲ್ಲಿ ಮಾಸ್ಟರ್ ರೋಹಿತ್, ಸಾಯಿಕೃಷ್ಣ ಕುಡ್ಲ, ಎಂ.ಕೆ. ಮಠ, ಆನಂದ ನೀನಾಸಂ, ಪ್ರಭುದೇವ ಹೊಸದುರ್ಗ ಮುಂತಾದವರು ನಟಿಸಿದ್ದು, ಲವಿತ್ ಅವರ ಛಾಯಾಗ್ರಹಣ ಮತ್ತು ವಾಸುಕಿ ವೈಭವ್ ಅವರ ಸಂಗೀತ ಈ ಚಿತ್ರಕ್ಕಿದೆ. ಚಿತ್ರವನ್ನು “ಹೆಬ್ಬುಲಿ’ ನಿರ್ಮಿಸಿದ್ದ ಉಮಾಪತಿ ನಿರ್ಮಿಸಿದ್ದಾರೆ.