Advertisement

ಒಮ್ಮೆ ನಗು ರೊಹಿಂಗ್ಯಾ!

01:51 PM Dec 09, 2017 | |

ನಾವು ಜಗತ್ತನ್ನು ನೋಡುವ ದೃಷ್ಟಿಯನ್ನು ಒಂದು ಪ್ರವಾಸ, ಒಬ್ಬ ವ್ಯಕ್ತಿ, ಒಂದು ಘಟನೆ ಬದಲಿಸಿಬಿಡಬಲ್ಲದು. ಅಂಥದ್ದೊಂದು ಪ್ರವಾಸ ಪ್ರಸಂಗವಿದು. ಫೋಟೊಗ್ರಫಿಯಲ್ಲಿ ಅಪಾರ ಆಸಕ್ತಿ ಹೊಂದಿರುವ ಹುಡುಗನೊಬ್ಬ ರೋಹಿಂಗ್ಯಾ ಕ್ಯಾಂಪ್‌ಗೆ ಭೇಟಿ ನೀಡಿ ಅಲ್ಲಿನ ದಾರುಣ ಚಿತ್ರಣವನ್ನು ಬಿಚ್ಚಿಟ್ಟಿದ್ದಾನೆ. ಆತನ ಕ್ಯಾಮೆರಾದಲ್ಲಿ ಮನುಷ್ಯನ ಕರಾಳ ಮುಖ ಸೆರೆಯಾದರೆ, ಆತ ಹೇಳುವ ಕಥೆಗಳು ಮನುಷ್ಯರಲ್ಲಿ ಮತ್ತೆ ಮತ್ತೆ ನಂಬಿಕೆ ಹುಟ್ಟಿಸುವಂತೆ ಮಾಡುತ್ತವೆ. ಆಸಕ್ತಿಯಿದ್ದರೆ ಅಂದುಕೊಂಡಿದ್ದನ್ನು ಮಾಡಬಹುದು ಎಂಬುದಕ್ಕೂ ಈತ ಉದಾಹರಣೆ…  

Advertisement

ಅಮ್ಮಾ, ಹಸಿವು!
ಬಾಂಗ್ಲಾದೇಶದ ಕಾಕ್ಸ್‌ ಬಜಾರ್‌ನಲ್ಲಿ ರೊಹಿಂಗ್ಯಗಳಿಗಾಗಿ 5-6 ನಿರಾಶ್ರಿತ ಶಿಬಿರಗಳನ್ನು ನಡೆಸಲಾಗುತ್ತಿದೆ. ಬಾಂಗ್ಲಾದೇಶವೇನೋ ಲಕ್ಷಾಂತರ ಜನರಿಗೆ ನೆಲೆ ಒದಗಿಸುತ್ತಿದೆ. ಆದರೆ, ಅದು ಅಷ್ಟು ಸುಲಭದ ಕೆಲಸವಲ್ಲ. ನಿರಾಶ್ರಿತರು ಅನುಭವಿಸುತ್ತಿರುವ ಸಮಸ್ಯೆಗಳು ಮೇಲ್ನೋಟಕ್ಕೇ ಢಾಳಾಗಿ ಕಾಣಿಸುತ್ತವೆ. ಮೊದಲ ದಿನ ನವೀನ್‌ ಅಲ್ಲಿಗೆ ಹೋದಾಗ ದಂಗಾಗಿ ಹೋದರು. ಎಲ್ಲಿ ನೋಡಿದರೂ ಮಕ್ಕಳೇ. ಅದೂ ನರಪೇತಲ ಶರೀರ, ಸಣ್ಣ ಕೈ ಕಾಲು, ದಪ್ಪ ಹೊಟ್ಟೆಯ ಮಕ್ಕಳು. ಹಸಿವಿಗಾಗಿ ಕೈ ಚಾಚಿ ಹಿಂದೆ ಹಿಂದೆ ಓಡಿ ಬರುವ ದೃಶ್ಯವೇ ಅವರನ್ನು ದಿಕ್ಕೆಡಿಸಿತು. ನಿರಾಶ್ರಿತರಲ್ಲಿ ಶೇ.64 ಮಕ್ಕಳೇ ಇದ್ದಾರೆ. ಅಲ್ಲಿನ ಪ್ರತಿ ನಾಲ್ಕು ಮಕ್ಕಳಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ಬಳಲುತ್ತದೆ. ಎನ್‌ಜಿಓಗಳು ಊಟದ ವ್ಯವಸ್ಥೆ ಮಾಡುತ್ತಿದ್ದರೂ, ಅವುಗಳಿಗೆ ಸಾಕಾಗುತ್ತಿಲ್ಲ. ಅಲ್ಲಿರುವ ಸಣ್ಣಪುಟ್ಟ ಅಂಗಡಿಗಳ ಮುಂದೆ ಮಕ್ಕಳು ನಿಂತಿರುವುದು, ಅವರನ್ನು ಮಾಲೀಕರು ಕೋಲು ತೆಗೆದುಕೊಂಡು ಓಡಿಸುವ ದೃಶ್ಯಗಳು ನವೀನ್‌ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ರೊಹಿಂಗ್ಯಾ ಸಮಸ್ಯೆ ಇಡೀ ಜಗತ್ತಿಗೇ ಗೊತ್ತಿದೆ. ಕಳೆದ ಸೆಪ್ಟೆಂಬರ್‌- ಅಕ್ಟೋಬರ್‌ನಲ್ಲಿ ವಿಶ್ವಾದ್ಯಂತ ಮಾಧ್ಯಮಗಳು ಈ ಸುದ್ದಿಯನ್ನು ಬಿತ್ತರಿಸಿದ್ದವು. ಸುದ್ದಿ ನೋಡಿದ ಜನರು ಒಂದೆರಡು ಕ್ಷಣ ಮರುಗಿ ಮತ್ತೆ ಸುಮ್ಮನಾದರು. ಆದರೆ, ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ವಿದ್ಯಾರ್ಥಿ ನವೀನ್‌ ತೇಜಸ್ವಿಗೆ ಇದು ಹತ್ತರಲ್ಲಿ ಹನ್ನೊಂದನೆಯ ಸುದ್ದಿ ಅನ್ನಿಸಲಿಲ್ಲ. ಜಗತ್ತಿನೆಡೆಗೆ ವಿಭಿನ್ನ ದೃಷ್ಟಿಕೋನ ಹೊಂದಿರುವ ಈತನಿಗೆ ಫೋಟೊಗ್ರಫಿಯಲ್ಲಿ ಅಪಾರ ಆಸಕ್ತಿ ಇದೆ. ಸ್ವಂತ ದೇಶದಿಂದ ಹೊರದಬ್ಬಲ್ಪಟ್ಟು, ಬಾಂಗ್ಲಾದ ನಿರಾಶ್ರಿತ ಶಿಬಿರಗಳಲ್ಲಿ ಅನ್ನ- ನೀರಿಗೂ ತತ್ವಾರ ಪಡುತ್ತಿರುವವರ ಕಥೆಯನ್ನು ಜಗತ್ತಿಗೆ ಹೇಳಬೇಕೆನಿಸಿತು. ಆದರೆ, ಬಾಂಗ್ಲಾಕ್ಕೆ ಹೋಗುವುದು ಅಷ್ಟು ಸುಲಭದ ವಿಷಯವಲ್ಲ. ಕೈಯಲ್ಲಿ ಹಣವಿಲ್ಲ, ತಲೆಯಲ್ಲಿ ಮೊಳೆತ ಕನಸು ಸರಿಯಾಗಿ ನಿದ್ರಿಸಲೂ ಬಿಡುತ್ತಿಲ್ಲ. 

ಅದೇ ಯೋಚನೆಯಲ್ಲಿದ್ದ ನವೀನ್‌ಗೆ, ಒಂದು ದಿನ ಅವೆನ್ಯೂ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಸೆಕೆಂಡ್‌ ಹ್ಯಾಂಡ್‌ ಪುಸ್ತಕದಂಗಡಿಯಲ್ಲಿ ಹಳೆಯ ನ್ಯಾಷನಲ್‌ ಜಿಯಾಗ್ರಫಿಕ್‌ ಮ್ಯಾಗಜಿನ್‌ಗಳನ್ನು ನೇತು ಹಾಕಿದ್ದು ಕಾಣಿಸಿತು. ಅದರಲ್ಲಿ ಅವರ ಮೆಚ್ಚಿನ ಅಮೆರಿಕನ್‌ ಫೋಟೊ ಜರ್ನಲಿಸ್ಟ್‌ ಸ್ಟೀವ್‌ ಮೆಕ್ಕರಿ ತೆಗೆದ “ಅಫ‌^ನ್‌ ಗರ್ಲ್’ ಮುಖಪುಟದ 1985 ಜೂನ್‌ ಸಂಚಿಕೆಯೂ ಇತ್ತು. ಸ್ಟೀವ್‌ ಮೆಕ್ಕರಿ ಆಫ‌^ನ್‌ ನಿರಾಶ್ರಿತ ಶಿಬಿರದಲ್ಲಿ ತೆಗೆದ ಆ ಹುಡುಗಿಯ ಫೋಟೋ “ದಿ ಮೋಸ್ಟ್‌ ರೆಕಗ್ನೆ„ಸ್ಡ್ ಫೋಟೊಗ್ರಾಫ್’ ಎಂದೇ ಖ್ಯಾತಿ ಪಡೆದಿದೆ. ಅವೆನ್ಯೂ ರೋಡಿನಲ್ಲಿ ಸಿಕ್ಕ “ಅಫ‌^ನ್‌ ಗರ್ಲ್’ ಬಾಂಗ್ಲಾದ ಕನಸನ್ನು ನವೀನ್‌ಗೆ ಮತ್ತೂಮ್ಮೆ ನೆನಪಿಸಿದಳು.

Advertisement

ಬಾಂಗ್ಲಾಗೆ ಹೋಗಬೇಕು ಅಂತ ಕನಸು ಕಂಡಿದ್ದೇನೋ ಸರಿ. ಆದರೆ, ಪ್ರಯಾಣದ ಖರ್ಚನ್ನು ಭರಿಸುವುದು ಹೇಗೆ? ನವೀನ್‌ ಬಳಿ ಅಷ್ಟೊಂದು ಹಣವಿರಲಿಲ್ಲ, ಪಾಸ್‌ಪೋರ್ಟ್‌ ಕೂಡ ಇರಲಿಲ್ಲ. ಅದರ ಹಿಂದಿನ ವಾರವಷ್ಟೇ ಹೊಸ ಕ್ಯಾಮೆರಾ ಬೇರೆ ತೆಗೆದುಕೊಂಡಿದ್ದರು. ಅವರ ಬ್ಯಾಂಕ್‌ ಅಕೌಂಟ್‌ನಲ್ಲಿದ್ದದ್ದು ನೂರೋ, ಇನ್ನೂರೋ ರೂಪಾಯಿ ಅಷ್ಟೇ. ಯಾರಾದರೂ ಸ್ಪಾನ್ಸರ್ ಸಿಗಬಹುದೇ ಎಂದು ಹುಡುಕಾಡಿದರು. ಬಿಬಿಸಿ ಚಾನೆಲ್‌ ಸೇರಿದಂತೆ, ಹಲವರನ್ನು ಮೇಲ್‌ ಮೂಲಕ ಕೇಳಿಕೊಂಡರು. ಆದರೆ, ಯಾರೂ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಒಂದು ಕಡೆ ನಿರಾಶ್ರಿತರ ಕಥೆಯನ್ನು ಹೇಳುವ ಆಸೆ, ಇನ್ನೊಂದೆಡೆ ಹಣಕಾಸಿನ ಸಮಸ್ಯೆ, ಆಗ ಹೊಳೆದದ್ದೇ ಕ್ರೌಡ್‌ ಫ‌ಂಡಿಂಗ್‌ನ ಯೋಚನೆ.

ಅದೃಷ್ಟಕ್ಕೆ ಹತ್ತಾರು ಮಂದಿ ಇವರ ಪ್ರಯಾಣದ ಖರ್ಚನ್ನು ಒದಗಿಸಲು ಮುಂದಾದರು. ಸೆಪ್ಟೆಂಬರ್‌ನಲ್ಲೇ ಪಾಸ್‌ಪೋರ್ಟ್‌ಗೆ ಕೂಡ ಅರ್ಜಿ ಹಾಕಿದರು ನವೀನ್‌. ಸೇಂಟ್‌ ಜೋಸೆಫ್ ಕಾಲೇಜಿನವರೂ ತನ್ನ ಹಳೆಯ ವಿದ್ಯಾರ್ಥಿಗೆ ಹಣದ ಸಹಾಯ ಮಾಡಿದ್ದಾರೆ. ಕೊನೆಗೂ ಅವರು ನವೆಂಬರ್‌ ಮೊದಲ ವಾರದಲ್ಲಿ, ಸಂಗಾತಿಯಾದ ಕ್ಯಾಮೆರಾ ಜೊತೆಗೆ ಬಾಂಗ್ಲಾಗೆ ಹೋದರು.

ನಿರಾಶ್ರಿತರ ಕ್ಯಾಂಪ್‌ಗ್ಳು ಇದ್ದದ್ದು ಬಾಂಗ್ಲಾದ ದಕ್ಷಿಣ ಭಾಗದ ಕಾಕ್ಸ್‌ ಬಜಾರ್‌ನಲ್ಲಿ. ಅದು ಢಾಕಾದಿಂದ ಎರಡೂವರೆ ತಾಸಿನ ಪ್ರಯಾಣ. ಪ್ರತಿನಿತ್ಯವೂ ನವೀನ್‌ ಅಲ್ಲಿಗೆ ಟಂ ಟಂ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಅಲ್ಲಿನವರಿಗೆ ಹಿಂದಿ, ಇಂಗ್ಲಿಷ್‌ ಅರ್ಥವಾಗುವುದಿಲ್ಲ. ರೊಹಿಂಗ್ಯಾ ಎಂಬ ಸ್ಥಳೀಯ ಭಾಷೆ ಮಾತಾಡುತ್ತಾರೆ. ಅದೂ ಕಾಕ್ಸ್‌ ಬಜಾರ್‌ನವರಿಗೆ ಮಾತ್ರ ಅರ್ಥವಾಗುವ ಭಾಷೆ. ಅಲ್ಲಿ ಜನರ ಯಾತನೆಯನ್ನು ನೋಡಿದ ನವೀನ್‌ಗೆ ಮನುಷ್ಯರ ಮೇಲೆ ನಂಬಿಕೆಯೇ ಹೊರಟು ಹೋಗಿತ್ತು. ಆದರೆ, ಅವರ ಯೋಚನೆಯನ್ನು ಬದಲಿಸುವಂಥ ಘಟನೆಗಳೂ ಅದೇ ಜಾಗದಲ್ಲಿ ನಡೆದವು.

ಮರೆಯಲಾರದ ವ್ಯಕ್ತಿತ್ವ
ನವೀನ್‌ ಬಾಂಗ್ಲಾಗೆ ಹೊರಟಾಗ ಎಲ್ಲರೂ ಹೇಳಿದ್ದೊಂದೇ, “ಬಾಂಗ್ಲಾದವರಿಗೆ ಹಿಂದೂಗಳೆಂದರೆ, ಭಾರತೀಯರೆಂದರೆ ಆಗುವುದಿಲ್ಲ. ಅಲ್ಲಿ ಕಳ್ಳತನ, ದರೋಡೆ ಜಾಸ್ತಿ. ಹುಷಾರಾಗಿರು’ ಅಂತ. ಆದರೆ, ನವೀನ್‌ಗೆ ಪ್ರವಾಸದುದ್ದಕ್ಕೂ ಒಳ್ಳೆಯವರೇ ಸಿಕ್ಕಿದರು. ಒಮ್ಮೆ ಅವರು ಟಂ ಟಂನಲ್ಲಿ ಪ್ರಯಾಣಿಸುತ್ತಿದ್ದಾಗ, ಡ್ರೈವರ್‌ಗೆ ಕೊಡಲು ಚಿಲ್ಲರೆ ಸಮಸ್ಯೆ ಎದುರಾಯ್ತು. 

ಇಬ್ಬರ ಬಳಿಯೂ ಚಿಲ್ಲರೆ ಇರಲಿಲ್ಲ. ಆಗ ಹಿಂದಿಯಲ್ಲಿ ಇವರು ಡ್ರೈವರ್‌ಗೆ ಅರ್ಥ ಮಾಡಿಸಲೆತ್ನಿಸಿದರೂ ಪ್ರಯೋಜನವಾಗಲಿಲ್ಲ. ಆಗ ಯಾರೋ ಒಬ್ಬರು ಹೆಗಲು ತಟ್ಟಿ, “ಹಿಂದಿಯವರಾ ನೀವು?’ ಎಂದು ಕೇಳಿ, ತಾವೇ ಟಂ ಟಂನವನಿಗೆ ದುಡ್ಡು ಕೊಟ್ಟರಂತೆ. ತನ್ನ ಹೆಸರು ಅಬ್ದುಲ್ಲಾ ಎಂದು ಪರಿಚಯಿಸಿಕೊಂಡ ಅವರು, “ನಾನು 3 ವರ್ಷ ರಾಜಸ್ಥಾನದಲ್ಲಿದ್ದೆ. ನಿಮಗೆ ಏನು ಸಹಾಯ ಬೇಕಾದರೂ ಕೇಳಿ ಮಾಡುತ್ತೇನೆ’ ಅಂದರಂತೆ. ನವೀನ್‌ಗೆ ಅಪರಿಚಿತರು ಎಂದು ಕೊಂಚ ಅಳುಕಾಯ್ತು. ಕೊನೆಗೂ ಇವರಿಗೆ ಬೇಕಾಗಿದ್ದ ಬ್ರೆಡ್‌, ಹಣ್ಣು ಕೊಡಿಸಿ, ಹೋಟೆಲ್‌ವರೆಗೆ ಜೊತೆಗೆ ಬಂದರು. ಇವರ ಫೋನ್‌ ನಂಬರ್‌ ತೆಗೆದುಕೊಂಡು, “ಸಂಜೆ ನಿಮ್ಮನ್ನು ಒಳ್ಳೇ ಹೋಟೆಲ್‌ಗೆ ಕರೆದುಕೊಂಡು ಹೋಗ್ತಿàನಿ’ ಅಂದರಂತೆ. 

ಆದರೆ, ಅಬ್ದುಲ್ಲಾ ಕಾಲ್‌ ಮಾಡಿದರೂ ಇವರು ರಿಸೀವ್‌ ಮಾಡಿರಲಿಲ್ಲ. ಫೇಸ್‌ಬುಕ್‌ನಲ್ಲಿಯೂ “ಭಾಯ್‌ ಎಲ್ಲಿದ್ದೀರ?’ ಎಂದು ಅವರು ಮೆಸೇಜ್‌ ಹಾಕಿದ್ದರು. ಅದಕ್ಕೂ ಇವರು ಉತ್ತರಿಸಲಿಲ್ಲ. ಕೊನೆಗೆ ಹೊರಡುವ ಹಿಂದಿನ ದಿನ ಕಾಲ್‌ ಮಾಡಿ, “ಎಲ್ಲಿದ್ದೀರ ಭಾಯ್‌? ನಾನು ನಾಳೆ ವಾಪಸ್‌ ಹೋಗ್ತಿàನಿ’ ಅಂದಾಗ ಅವರು ಬಂದು, ಹೋಟೆಲ್‌ನಲ್ಲಿ ಊಟ ಹಾಕಿಸಿದರಂತೆ. ಬೀಚ್‌ಗೆ ಕರೆದುಕೊಂಡು ಹೋದರಂತೆ. ಆಗ ಅವರು ಹೇಳಿದ ಮಾತು ಯಾವತ್ತಿಗೂ ನೆನಪಿರುವಂಥದ್ದು. “ಯಾರೋ ಹೆಲ್ಪ್ ಮಾಡ್ತಾರೆ ಅಂದರೂ ಈಗ ಜನ ನಂಬುವುದಿಲ್ಲ. ನೀವೂ ನನ್ನನ್ನು ತಪ್ಪು ತಿಳಿದ್ರಿ ಅಂತ ಕಾಣುತ್ತೆ. ನಾನು ಫೋನ್‌, ಮೆಸೇಜ್‌ ಮಾಡಿದರೂ ರಿಪ್ಲೆ„ ಮಾಡ್ಲಿಲ್ಲ. ನನಗೆ ಯಾವ ಕೆಟ್ಟ ಉದ್ದೇಶವೂ ಇರಲಿಲ್ಲ. ನೀವು ಹಾಗೆ ಮಾಡಿದ್ದು ಬೇಜಾರಾಯ್ತು. ದೇವರು ನಮ್ಮನ್ನು ಹುಟ್ಟಿಸಿರುವುದೇ ಇನ್ನೊಬ್ಬರಿಗೆ ಸಹಾಯ ಮಾಡಲು. ನಮ್ಮ ಜನ್ಮದ ಉದ್ದೇಶವೇ ಪರೋಪಕಾರ. ಇತ್ತೀಚೆಗೆ ಜನರು ಪರಸ್ಪರ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ’ ಎಂದು ಅಬ್ದುಲ್ಲಾ ಬೇಸರಪಟ್ಟುಕೊಂಡರು. ರಾತ್ರಿ 10-11 ಗಂಟೆಯವರೆಗೆ ಮಾತಾಡಿ, ನಂತರ ಅವರನ್ನು ಬೀಳ್ಕೊಡುವಾಗ ಸ್ವಂತದ್ದನ್ನೇನೋ ಕಳೆದುಕೊಂಡಂತೆ ಮನಸ್ಸು ಭಾರವಾಗಿತ್ತು. ಈ ರೀತಿಯ ಹಲವಾರು ಮರೆಯದ ವ್ಯಕ್ತಿತ್ವಗಳು ಆಟೋದಲ್ಲಿ, ಬಸ್‌ನಲ್ಲಿ, ವಿಮಾನದಲ್ಲಿ ಸಿಕ್ಕಿವೆ ಎನ್ನುತ್ತಾರೆ ನವೀನ್‌.

ರೊಹಿಂಗ್ಯ ಸಮಸ್ಯೆ ಅತೀ ದೊಡ್ಡ ಮಟ್ಟದ ಮಾನವ ಹಕ್ಕುಗಳ ಉಲ್ಲಂಘನೆ. ಅದಕ್ಕಿಂತಲೂ ಮಿಗಿಲಾಗಿ, ಇದು ಮಾನವೀಯತೆಯ ಅಸ್ತಿತ್ವದ ಕುರಿತಾದ ಪ್ರಶ್ನೆ. ಅಲ್ಲಿನ ಜನರ ಕಥೆಯನ್ನು ನನ್ನ ಕ್ಯಾಮೆರಾ ಕಣ್ಣಿನ ಮೂಲಕ ಜಗತ್ತಿಗೆ ಹೇಳಬೇಕಿತ್ತು. ಅಲ್ಲಿಗೆ ಭೇಟಿ ನೀಡಿದ ನಂತರ ಪರಿಸ್ಥಿತಿಯ ಗಂಭೀರತೆ ಇನ್ನಷ್ಟು ಅರ್ಥವಾಯ್ತು. ರೊಹಿಂಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕನಸಿನ ಮಾತೇ ಸರಿ. ನಿರಾಶ್ರಿತರು ನಾಲ್ಕೈದು ತಿಂಗಳಿನಿಂದ ಬಾಂಗ್ಲಾದಲ್ಲಿ ನೆಲೆಸಿದ್ದಾರೆ. ವಿಶ್ವಸಂಸ್ಥೆ ಕೂಡ ಅವರ ಸಹಾಯಕ್ಕೆ ನಿಂತಿದೆ. ಆದರೆ, ಈ ಕ್ಯಾಂಪ್‌ಗ್ಳು ಎಷ್ಟು ದಿನ ನಡೆಯುತ್ತವೆ? ಅವರು ವಾಪಸ್‌ ಮ್ಯಾನ್ಮಾರ್‌ಗೆ ಹೋದರೂ ಸಹಾಯದ ಭರವಸೆ ಇಲ್ಲ. ಅವರೆಲ್ಲ ತುಂಬಾ ಮುಗ್ಧರು. ಅವರಲ್ಲಿ ಸಾಕ್ಷರತೆ, ಆತ್ಮವಿಶ್ವಾಸ, ನಾಯಕತ್ವದ ಕೊರತೆ ಇದೆ. ಕ್ಯಾಂಪ್‌ಗ್ಳಿಂದ ಜನರನ್ನು ಹೊರಗಡೆ ಬಿಡುತ್ತಿಲ್ಲ. ಯಾವುದಾದರೂ ರೋಗ ಹರಡಿಬಿಟ್ಟರಂತೂ, ಪರಿಸ್ಥಿತಿ ಇನ್ನೂ ಭೀಕರವಾಗುತ್ತದೆ.


 ನವೀನ್‌ ತೇಜಸ್ವಿ, 
ಛಾಯಾಚಿತ್ರಕಾರ

 ಪ್ರಿಯಾಂಕಾ ನಟಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next