Advertisement

ಮಳೆಗೆ ಇನ್ನೊಮ್ಮೆ ತತ್ತರಿಸಿದ ರಾಜಧಾನಿ

12:28 PM Aug 24, 2017 | Team Udayavani |

ಬೆಂಗಳೂರು: ವಾರದ ಅಂತರದಲ್ಲೇ ಸುರಿದ ಮತ್ತೂಂದು ದೊಡ್ಡ ಮಳೆಗೆ ನಗರ ತತ್ತರಿಸಿತು. ಪೂರ್ವಭಾಗದ ಹತ್ತಾರು ಮನೆಗಳು, ರಸ್ತೆಗಳು ಜಲಾವೃತಗೊಂಡು, ನಾಲ್ಕೈದು ಮರಗಳು ನೆಲಕಚ್ಚಿದವು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಕಳೆದ ವಾರ ದಾಖಲೆ ಮಳೆಗೆ ನಗರದ,
ದಕ್ಷಿಣ ಭಾಗ ಬಹುತೇಕ ಜಲಾವೃತಗೊಂಡಿತ್ತು. ಬುಧ ವಾರದ ಮಳೆಯ ಆಟಾಟೋಪಕ್ಕೆ ಬೆಂಗಳೂರು ಸ್ತಬ್ಧಗೊಂಡಿತು. ಆದರೆ, ಈ ವಾರ ನಗರದ ಪೂರ್ವ ಭಾಗದ ಸರದಿ. ಅಬ್ಬರದ ಮಳೆಗೆ ಹತ್ತಾರು ಮನೆಗಳಿಗೆ ನೀರು ನುಗ್ಗಿತು. ಈ ಭಾಗದ ರಸ್ತೆಗಳು, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಇದರಿಂದ ವಾಹನಸವಾರರು ಪರದಾಡಿದರು. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ನಗರದಿಂದ ಊರಿಗೆ ಹೊರಡಲು ರಸ್ತೆಗಿಳಿದರು. ಹಾಗಾಗಿ, ಬೇರೆ ಬೇರೆ ಭಾಗಗಳಿಂದ ಹೃದಯಭಾಗಕ್ಕೆ ಬರುವವರ ಸಂಖ್ಯೆ ಎಂದಿಗಿಂತ ಹೆಚ್ಚಿತ್ತು. ಹಾಗಾಗಿ, ಸಂಚಾರದಟ್ಟಣೆ ಹೆಚ್ಚಿತ್ತು. ಈ ನಡುವೆ ಪ್ರಯಾಣಿಕರನ್ನು ಮಳೆ ಕಾಡಿತು. ಮೆಜೆಸ್ಟಿಕ್‌, ಮೈಸೂರು ರಸ್ತೆ, ಮಾರುಕಟ್ಟೆ- ಮಾಗಡಿ ರಸ್ತೆಗಳು, ರಾಮಮೂರ್ತಿನಗರ, ಸಿ.ವಿ. ರಾಮನ್‌ ನಗರ ಒಳಗೊಂಡಂತೆ ಸುತ್ತಲಿನ ಪ್ರದೇಶ ಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿತು. ಎಚ್‌ಬಿಆರ್‌ ಲೇಔಟ್‌ ಕಲ್ಯಾಣ ನಗರ,
ಕಗ್ಗದಾಸಪುರ, ಮಲ್ಲೇಶಪಾಳ್ಯದಲ್ಲಿ ಮೋರಿಗಳಲ್ಲಿ ನೀರು ತುಂಬಿ ರಸ್ತೆಗಳಿಗೆ ನುಗ್ಗಿತು. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಿತು. ಜನ ಬಿಬಿಎಂಪಿಗೆ ಹಿಡಿಶಾಪ ಹಾಕಿದರು. ಬೃಂದಾವನ ಲೇಔಟ್‌ 6ನೇ ಕ್ರಾಸ್‌, ಕಲಕೇರಿ ಲೇಔಟ್‌, ಗೋವಿಂದರಾಜ ಲೇಔಟ್‌ ಸುತ್ತ ಮುತ್ತ ಮನೆಗಳಿಗೆ ನೀರು ನುಗ್ಗಿದೆ. ಕಲ್ಯಾಣ ನಗರದ ಕಲ್ಯಾಣ ಗಣಪತಿ ದೇವಾಲಯ ಬಳಿ, ಮಲ್ಲೇಶಪಾಳ್ಯ, ಕಗ್ಗದಾಸ ಪುರದಲ್ಲಿ ಮೋರಿ ನೀರು ರಸ್ತೆಗಳಿಗೆ ಆವರಿಸಿತ್ತು. ರಾಮಮೂರ್ತಿ ನಗರ-ಕಾಡುಬೀಸನಹಳ್ಳಿ ಅಂಡರ್‌ಪಾಸ್‌, ಹೊರಮಾವು ರಸ್ತೆ ಜಲಾವೃತ ಗೊಂಡಿದ್ದವು. ಪ್ರಮುಖ ಜಂಕ್ಷನ್‌ಗಳಲ್ಲಿ ನೀರು ತುಂಬಿದ್ದರಿಂದ ವಾಹನಗಳು ಮಂದಗತಿಯಲ್ಲಿ ಸಾಗಿದವು. ಮಳೆ ಎಷ್ಟೆಷ್ಟು? ದೊಡ್ಡನೆಕ್ಕುಂದಿಯಲ್ಲಿ 87 ಮಿ.ಮೀ., ಹಳೇ ವಿಮಾನ ನಿಲ್ದಾಣ 56.5 ಮಿ.ಮೀ., ಮಾರತ್‌ಹಳ್ಳಿ 44, ಹುಣಸಮಾರನಹಳ್ಳಿ 59, ಮಹದೇವಪುರ-ಹೂಡಿ 40.5, ಬೊಮ್ಮನಹಳ್ಳಿ-ಬೇಗೂರು 35, ಗೊಟ್ಟಿಗೆರೆ 20.5, ನಂದಿನಿ ಲೇಔಟ್‌ 22, ರಾಜಮಹಲ್‌ ಗುಟ್ಟಹಳ್ಳಿ 24.5, ಶಿವನಗರ 20.5, ಕುಶಾಲನಗರ 26.5, ಪುಲಕೇಶಿನಗರ 20 ಮಿ.ಮೀ. ಮಳೆಯಾಗಿದೆ. ಇಂದೂ ಮಳೆ? ನಗರದಲ್ಲಿ ಗುರುವಾರ ಕೂಡ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next