Advertisement

ಮತ್ತೆ ಬೇಡಿಕೆ ಗಳಿಸುತ್ತಿದೆ ಕುಂಬಾರಿಕೆ: ಮಾಡಾಳ್‌

06:11 AM Feb 26, 2019 | |

ಚನ್ನಗಿರಿ: ಆಧುನಿಕತೆ ಭರಾಟೆಗೆ ನಶಿಸಿಹೋಗಿದ್ದ ಕುಂಬಾರಿಕೆ ಮತ್ತೆ ಬೇಡಿಕೆ ಗಳಿಸುತ್ತಿದ್ದು, ವೃತ್ತಿಯಲ್ಲಿ ಆರ್ಥಿಕ ಲಾಭಗಳಿಸಲು ಸಿಕ್ಕ ಅವಕಾಶದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಹೇಳಿದರು. ರಾಘವೇಂದ್ರ ಸಮುದಾಯ ಭವನದಲ್ಲಿ ಸೋಮವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಕುಂಬಾರ ಸಮಾಜ ಏರ್ಪಡಿಸಿದ್ದ ತ್ರಿಪದಿ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ತಜ್ಞರ, ವಿಜ್ಞಾನಿಗಳ ಪ್ರಕಾರ ಮಡಿಕೆಯಲ್ಲಿ ಮಾಡಿದ ಆಹಾರ ಆರೋಗ್ಯಕ್ಕೆ ಅತ್ಯುತ್ತಮ. ಇದರಿಂದ ಮತ್ತೆ ಕುಂಬಾರರ ಕುಲ ಕಸುಬು ಬೆಳೆಯುತ್ತಿದೆ. ಆದ್ದರಿಂದ ವೃತ್ತಿಯನ್ನು ದೃತಿಗೆಡದೆ ಮುನ್ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಕುಂಬಾರರು 2ಎ ಪ್ರಮಾಣ ಪತ್ರಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ಪ್ರಮಾಣಪತ್ರ ನೀಡುತ್ತಿದ್ದರೂ ನಮ್ಮ ತಾಲೂಕಿನಲ್ಲಿ ನೀಡುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿತ್ತು. ಅದನ್ನು ಮನಗಂಡು ತಹಶೀಲ್ದಾರ್‌ ಜತೆ ಚರ್ಚಿಸಿದ್ದು, ಅದರಂತೆ ತಮಗೆ ಸಿಗಬೇಕಾದ 2ಎ ಪ್ರಮಾಣಪತ್ರವನ್ನು ಈಗಾಗಲೇ ತಾಲೂಕು ಕಚೇರಿಯಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕುಂಬಾರ ಸಮುದಾಯವು ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದೆ. ಆದ್ದರಿಂದ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು, ಮಕ್ಕಳಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ಬರಬೇಕು ಎಂದರು. ಜಿಪಂ ಸದಸ್ಯೆ ಮಂಜುಳಾ ಮಾತನಾಡಿ, ಜಗತ್ತಿಗೆ ಮಾರ್ಗದರ್ಶಕನಾಗಿ ಹೊರಹೊಮ್ಮಿದ ತ್ರಿಪದಿ ಕವಿ
ಸರ್ವಜ್ಞ ತನ್ನದೇ ಆದ ಭಾಷೆಯಲ್ಲಿ ಸಾಮಾನ್ಯ ಜನರ ಜೀವನದ ಅನುಭವಗಳನ್ನು ಎಲ್ಲರಿಗೂ ಅರ್ಥೈಸಿಕೊಟ್ಟ ಸರ್ವಶ್ರೇಷ್ಠ ಕವಿ. ಅವರು ರಚಿಸಿದ ವಚನಗಳು ಸರ್ವರ ಬಾಳಿನ ಭವಿಷ್ಯದ ದಿಕ್ಸೂಚಿಯಂತೆ ಸಾರ್ವಕಾಲಿಕ ಸತ್ಯವಾಗಿ ಉಳಿದಿವೆ ಎಂದು ಬಣ್ಣಿಸಿದರು.

ತಾಪಂ ಸದಸ್ಯೆ ರೂಪಾ ಮಾತನಾಡಿ. ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಕುರಿತು ಸರ್ವಜ್ಞ ವಚನಗಳಲ್ಲಿ ಸರಳವಾಗಿ ಹೇಳಿರುವಂತೆ ಮತ್ತೂಬ್ಬ ಕವಿ ಹೇಳಿಲ್ಲ. ಈತ ಸರ್ವಶ್ರೇಷ್ಠ ಎಂದು ಹೇಳಿದರು.

Advertisement

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್‌.ಡಿ. ನಾಗರಾಜ್‌ ಮಾತನಾಡಿದರು. ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮಹಾಂತೇಶ್‌ ಶಾಸ್ತ್ರಿ, ಪುರಸಭೆ ಸದಸ್ಯೆ ಯಶೋಧಮ್ಮ, ಪರಮೇಶ್ವರಪ್ಪ, ತಹಶೀಲ್ದಾರ್‌ ನಾಗರಾಜ್‌, ಸೋಮಲಿಂಗ ಕುಂಬಾರ, ಪರ್ಟಿ ನಾಗರಾಜ್‌, ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next