ಕಾಸರಗೋಡು: ಸಾಮರಸ್ಯದ ರಾಷ್ಟ್ರೀಯ ಭಾವೈಕ್ಯತೆಯ ಓಣಂ ಹಬ್ಬದ ಅಂಗವಾಗಿ ನಿರಂತರ ಒಂದು ವಾರಗಳ ರಜೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ದಟ್ಟಣೆ ಕಂಡು ಬಂತು.
ಕಾಸರಗೋಡು ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿರುವ ತೂವಲ್ಪ್ಪಾರ, ಅಚ್ಚನ್‌ಕಲ್ಲ್, ಪನ್ನಿಯಾರ್ಮನಿ ಮೊದಲಾದ ಪ್ರಕೃತಿ ಸೌಂದರ್ಯದ ಸ್ಥಳಗಳನ್ನು ಜಿಲ್ಲೆಯ ಹಾಗು ಅನ್ಯ ಜಿಲ್ಲೆಯ ಪ್ರವಾಸಿಗರು ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಬಂದಿದ್ದರು. ರಾಜ್ಯದ ಹೊರಗಿರುವ ಮತ್ತು ವಿದೇಶಗಳಲ್ಲಿರುವ ಕೇರಳದ ಕುಟುಂಬ ಸದಸ್ಯರು ಓಣಂ ಹಬ್ಬದ ಅಂಗವಾಗಿ ಊರಿಗೆ ಬರುವುದು ಸಾಮಾನ್ಯವಾಗಿದೆ. ಅಲ್ಲದೆ ಸರಕಾರಿ ನೌಕರರಿಗೂ, ವಿದ್ಯಾರ್ಥಿಗಳಿಗೂ ನಿರಂತರವಾಗಿ ಒಂದು ವಾರ ರಜೆ ಲಭಿಸಿರುವುದರಿಂದ ಕುಟುಂಬ ಸದಸ್ಯರೊಂದಿಗೆ ಜಿಲ್ಲೆಯ ವಿವಿಧ ಪ್ರವಾಸಿ ಕೇಂದ್ರಗಳಿಗೆ ತೆರಳಿ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ.
ತಿರುವೋಣಂ ದಿನದ ವರೆಗೆ ಓಣಂ ಹಬ್ಬದ ಸಿದ್ಧತೆಯಲ್ಲಿದ್ದ ಕೇರಳೀಯರು ಬಳಿಕ ಹಬ್ಬದ ವಾತಾವರಣದಿಂದ ಹೊರ ಬಂದು ಸಿಕ್ಕ ಅವಕಾಶವನ್ನು ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಿ ದಿನಗಳನ್ನು ಕಳೆಯುವ ಯೋಚನೆಯನ್ನು ಮಾಡಿಕೊಂಡಿದ್ದಾರೆ. ಮಳೆ ದೂರವಾಗಿರುವುದರಿಂದ ಪ್ರವಾಸಿ ಕೇಂದ್ರಗಳಿಗೆ ತೆರಳಲು ನೆರವಾಗಿದೆ.
ಹಿಂದಿನಂತೆ ಇಂದು ಓಣಂ ದಿನಗಳಲ್ಲಿ ಕುಟುಂಬ ಸಮೇತ ಆರಾಧನಾಲಯಗಳಿಗೆ ಭೇಟಿಗೆ ಮಾತ್ರವೇ ಸೀಮಿತವಾಗಿಲ್ಲ. ಇಂದು ಆರಾಧನಾಲಯಗಳಿಗೆ ಭೇಟಿ ನೀಡುವ ಜೊತೆಯಲ್ಲಿ ಪ್ರವಾಸಿ ಕೇಂದ್ರಗಳಿಗೂ ಭೇಟಿ ನೀಡುತ್ತಿದ್ದಾರೆ. ಬಹುತೇಕ ಕುಟುಂಬಗಳಿಗೆ ವಾಹನಗಳಿರುವುದರಿಂದ ಪ್ರವಾಸಿ ಕೇಂದ್ರಗಳಿಗೆ ತೆರಳಲು ಬಹಳಷ್ಟು ಅನುಕೂಲವಾಗಿದೆ. ನಗರ ಪ್ರದೇಶಗಳಲ್ಲಿರುವಂತೆ ಜನ ದಟ್ಟಣೆ ಇಲ್ಲದ ಹಾಗು ಸ್ವಚ್ಛವಾಗಿರುವ ಮಲೆನಾಡು ಪ್ರದೇಶಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೃಹತ್ ನಗರಗಳಲ್ಲಿ ಮತ್ತು ವಿದೇಶಗಳಲ್ಲಿರುವವರು ಅರಣ್ಯ ಪ್ರದೇಶ, ಬನಗಳು, ಮಲೆನಾಡಿನ ಸೌಂದರ್ಯ ಆಸ್ವಾದಿಸಲು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈಗ ಮಳೆಗಾಲವಾಗಿರುವುದರಿಂದ ಅಲ್ಲಲ್ಲಿ ತಾತ್ಕಾಲಿಕ ಜಲಪಾತಗಳು ಸೃಷ್ಟಿಯಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕೊನ್ನಕ್ಕಾಡು ಪೇಟೆಯಿಂದ ಮಂಞಚ್ಚಾಲ್ ರಸ್ತೆಯಿಂದ ಮೂರು ಕಿ.ಮೀ. ದೂರದಲ್ಲಿ ಬಹಳಷ್ಟು ಆಕರ್ಷಿಸುವ ಅಚ್ಚನ್‌ಕಲ್ ಜಲಪಾತವಿದೆ. ಇಲ್ಲಿಂದ ನಾಲ್ಕು ಕಿ.ಮೀ. ದೂರಕ್ಕೆ ಸಾಗಿದರೆ ಮಂಞಚ್ಚಾಲ್ಗೆ ತಲುಪಲಿದ್ದು ಅಲ್ಲಿಯೂ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಅಲ್ಲಿಂದ ಕೇವಲ ಅರ್ಧ ಕಿಲೋ ಮೀಟರ್ ದೂರಕ್ಕೆ ಸರಿದರೆ ತೂವಲ್ಪ್ಪಾರ ಜಲಪಾತವಿದೆ. ಕೊನ್ನಕ್ಕಾಡ್‌ನಿಂದ ಕೋಟಂಚೇರಿ ಅರಣ್ಯದಲ್ಲಿ ಅರ್ಧ ಕಿ.ಮೀ. ದೂರಕ್ಕೆ ಸಾಗಿದರೆ ಮಂಜು ಮುಸುಕಿರುವ ಅತ್ಯಾಕರ್ಷಕ ಪ್ರದೇಶವಾದ ಪನ್ನಿಯಾರ್ಮನಿಗೆ ತಲುಪಬಹುದು.
Advertisement
ಸಾಮಾನ್ಯವಾಗಿ ಇತಿಹಾಸ ಪ್ರಸಿದ್ಧ ಬೇಕಲ ಕೋಟೆ ಮತ್ತು ಚಾರಣಿಗರ ಸ್ವರ್ಗವೆಂದೇ ಗುರುತಿಸಿಕೊಂಡಿರುವ ರಾಣಿಪುರ ಪ್ರವಾಸಿ ಕೇಂದ್ರದಲ್ಲಿ ಬಹಳಷ್ಟು ಪ್ರವಾಸಿಗರ ದಟ್ಟಣೆಯಿದ್ದರೂ, ಈ ಬಾರಿ ಇತರ ಪ್ರವಾಸಿ ಕೇಂದ್ರಗಳಿಗೂ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳಿ ಆಸ್ವಾದಿಸಿದರು.
Related Articles
Advertisement
ಕಾಡನ್ನು ಸೀಳಿ ಹಚ್ಚ ಹಸುರಿನ ಬೆಟ್ಟಗಳ ನಡುವೆ ಹರಿಯುವ ತೊರೆಗಳನ್ನು ಕ್ರಮಿಸಿ ವೆಳ್ಳರಿಕುಂಡು ಪೇಟೆ ಸೇರಿದರೆ ಅಲ್ಲಿಂದ ಕೆಲವೇ ನಿಮಿಷಗಳಲ್ಲಿ ಕೊನ್ನಕ್ಕಾಡು ತಲುಪಬಹುದು. ಇಲ್ಲಿನ ಪ್ರಧಾನ ಜಲಪಾತವೆಂದರೆ ಅಚ್ಚಂಗಲ್ಲು ಜಲಪಾತ. ಇಲ್ಲಿಂದ ಹರಿದು ಮುಂದೆ ಸಾಗಿದ ಜಲರಾಶಿ ಮಂಞಚ್ಚಾಲ್ ಜಲಪಾತ. ಇದಲ್ಲದೆ ವೊಟ್ಟಿಕೊಲ್ಲಿ ಕಿರು ಜಲಪಾತವೂ ಇದೆ.
ಧುಮ್ಮಿಕ್ಕಿ ಭೋರ್ಗರೆಯುವ ಕೊನ್ನಕ್ಕಾಡ್ ಜಲಪಾತ ರಮಣೀಯ ವಾಗಿದೆ. ಕಾಂಞಂಗಾಡಿನಿಂದ ಪೂರ್ವಕ್ಕೆ ಕೊನ್ನಕ್ಕಾಡು ಇದೆ. ಮಾವುಂಗಾಲ್ ಆನಂದಾಶ್ರಮದಿಂದ ಸುಮಾರು 25-30 ಕಿ.ಮೀ. ದೂರ ಪನತ್ತಡಿ ರಸ್ತೆಯಲ್ಲಿ ಸಾಗಿದರೆ ವೆಳ್ಳರಿಕುಂಡು ತಾಲೂಕು ಸಿಗುತ್ತದೆ. ಒಡಯಂಚಾಲ್, ಕಲ್ಲಾರ್, ಪರಪ್ಪು, ಮಾಲೋಂ ಇತ್ಯಾದಿ ಮಲೆನಾಡ ಕೇಂದ್ರಗಳನ್ನು ದಾಟಿ ಸಾಗಬೇಕು. ನೀಲೇಶ್ವರ ಮುಖಾಂತರ ಪರಪ್ಪಕ್ಕೆ ಆಗಮಿಸಿ ಅಲ್ಲಿಂದ ಮುಂದೆ ವೆಳ್ಳರಿಕುಂಡಿಗೆ ಪಯಣಿಸಿ ಕೆಲವೇ ನಿಮಿಷಗಳಲ್ಲಿ ಕೊನ್ನಕ್ಕಾಡು ಪೇಟೆ ಸೇರಬಹುದು.
ರಮಣೀಯ ಕೊನ್ನಕ್ಕಾಡ್ ಜಲಪಾತ
ಧುಮ್ಮಿಕ್ಕಿ ಭೋರ್ಗರೆಯುವ ಕೊನ್ನಕ್ಕಾಡ್ ಜಲಪಾತ ರಮಣೀಯ ವಾಗಿದೆ. ಕಾಂಞಂಗಾಡಿನಿಂದ ಪೂರ್ವಕ್ಕೆ ಕೊನ್ನಕ್ಕಾಡು ಇದೆ. ಮಾವುಂಗಾಲ್ ಆನಂದಾಶ್ರಮದಿಂದ ಸುಮಾರು 25-30 ಕಿ.ಮೀ. ದೂರ ಪನತ್ತಡಿ ರಸ್ತೆಯಲ್ಲಿ ಸಾಗಿದರೆ ವೆಳ್ಳರಿಕುಂಡು ತಾಲೂಕು ಸಿಗುತ್ತದೆ. ಒಡಯಂಚಾಲ್, ಕಲ್ಲಾರ್, ಪರಪ್ಪು, ಮಾಲೋಂ ಇತ್ಯಾದಿ ಮಲೆನಾಡ ಕೇಂದ್ರಗಳನ್ನು ದಾಟಿ ಸಾಗಬೇಕು. ನೀಲೇಶ್ವರ ಮುಖಾಂತರ ಪರಪ್ಪಕ್ಕೆ ಆಗಮಿಸಿ ಅಲ್ಲಿಂದ ಮುಂದೆ ವೆಳ್ಳರಿಕುಂಡಿಗೆ ಪಯಣಿಸಿ ಕೆಲವೇ ನಿಮಿಷಗಳಲ್ಲಿ ಕೊನ್ನಕ್ಕಾಡು ಪೇಟೆ ಸೇರಬಹುದು.