Advertisement

ಮೊದಲ ಬೆಳೆಯ ಸಂಭ್ರಮದ ಹಬ್ಬ ಓಣಂ

10:50 PM Sep 09, 2019 | mahesh |

ರಾಜ್ಯ ಹಬ್ಬ ಎಂದೇ ಕರೆಯಲ್ಪಡುವ ಓಣಂ ಅನ್ನು ಅಲ್ಲಿ 10 ದಿವಸಗಳ ಕಾಲ ಆಚರಿಸಲಾಗುತ್ತದೆ. ಸಿಂಹ ಮಾಸ (ಮಲಯಾಳದಲ್ಲಿ ಚಿಂಗಂ ಮಾಸ )ದಲ್ಲಿ ಓಣಂನ್ನು ಆಚರಿಸಲಾಗುತ್ತದೆ. ಅತ್ತಂ ಪತ್ತಿನ್‌ ಪೊನ್ನೋಣಂ ಎಂದು ಮಲಯಾಳಂ ಆಡು ಭಾಷೆಯಲ್ಲಿ ಒಂದು ಮಾತಿದೆ. ಅಂದರೆ ಕನ್ನಡದ ಹಸ್ತ ನಕ್ಷತ್ರದ ಅನಂತರ ಹತ್ತನೇ ನಕ್ಷತ್ರದಲ್ಲಿ ಓಣಂನ್ನು ಆಚರಿಸಲಾಗುತ್ತದೆ. ಈ ಹಬ್ಬದ ಒಂಬತ್ತನೇಯ ದಿನವನ್ನು ತಿರುವೋಣಂ ಎಂದು ಕರೆಯಲಾಗುತ್ತದೆ.

Advertisement

ಮೊದಲ ಬೆಳೆ ತೆಗೆಯುವ ಸಂಭ್ರಮ
ಮಳೆಗಾಲ ಮುಗಿಯುವ ಹೊತ್ತಿನಲ್ಲಿ ಆರಂಭವಾಗುವ ಓಣಂ ಹಬ್ಬದ ಸಂದರ್ಭದಲ್ಲಿ ಕೃಷಿಕರ ಮೊದಲ ಬೆಳೆ ಕೊಯ್ಲಿಗೆ ಸಿದ್ಧವಾಗಿರುತ್ತದೆ ಅಥವಾ ಕೊಯ್ಲು ನಡೆದಿರುತ್ತದೆ. ಕೃಷಿಗೆ ಸಂಬಂಧಿಸಿ ಹೇಳುವುದಾದರೆ ಇದು ಮೊದಲ ಬೆಳೆಯ ಸಂಭ್ರಮದ ಹಬ್ಬ. ಓಣಂ ಸದ್ಯದ ಪರಿಕಲ್ಪನೆಯೂ ಇಲ್ಲಿಂದಲೇ ಆರಂಭ. ಓಣಂನ್ನು ತುರನ್ನು ವಿಷುವನ್ನು ಅಡಚ್ಚು (ಓಣಂಗೆ ಆರಂಭವಾಗಿ ವಿಷುವಿಗೆ ಕೊನೆಗೊಳ್ಳುತ್ತದೆ) ಎಂಬ ಮಾತು ಓಣಂ ಆರಂಭದ ಹಬ್ಬ ಎಂಬುದನ್ನು ಸೂಚಿಸುತ್ತದೆ.

ಮಾವೇಲಿಯಾದ ಮಹಾಬಲಿ
ರಾಜ್ಯಗಳ ಪರಿಕಲ್ಪನೆ ಇಲ್ಲದ ಆ ಕಾಲದಲ್ಲಿ ಮಹಾಬಲಿ ಚಕ್ರವರ್ತಿ ಸಮೃದ್ಧವಾದ ನಾಡೊಂದನ್ನು ಆಳುತ್ತಿದ್ದ. ಅದರಲ್ಲಿ ಈಗ ಕೇರಳ ಕರ್ನಾಟಕ ರಾಜ್ಯಗಳು ಒಳಪ್ಪಡುತ್ತವೆ. ದೀಪಾವಳಿಗೆ ತುಳುವರು ಸ್ವಾಗತಿಸುವ ಬಲೀಂದ್ರ ಮತ್ತು ಓಣಂನ ಮಾವೇಲಿ ಇಬ್ಬರೂ ಒಂದೇ. ಮಹಾಬಲಿಯನ್ನು ಮಲಯಾಲಿಗರು ಮಾವೇಲಿ ಇಂದು ಕರೆಯುತ್ತಾರೆ. ಓಣಂನ ಪ್ರಮುಖ ಆಕರ್ಷಣೆಯೇ ಈ ಮಾವೇಲಿ.

ಓಣಂ ಸದ್ಯ
ಬಾಲೆ ಎಲೆಯಲಿ ಶಾಖಾಹಾರದ ಹಲವು ಬಗೆಯ ಭಕ್ಷ್ಯಗಳನ್ನು ಹಾಕಿ ಊಟಮಾಡುವುದು ಓಣಂ ಸದ್ಯ ಅಥವಾ ಊಟದ ವಿಶೇಷತೆ.

ಆಚರಣೆ ವ್ಯತ್ಯಾಸಗಳು
ಮಧ್ಯ, ದಕ್ಷಿಣ ಕೇರಳದಲ್ಲಿ ವೆಲ್ಲಂಕಳಿ, ಪುಲಿಕಲಿ, ಪೂಕಳಂ ಎಂಬ ಮೂರು ಬಗೆಯ ಆಟಗಳು ಪ್ರಸಿದ್ಧಿಯಲ್ಲಿವೆ. ಪೂಕಳಂ ಎಂಬುದು ಆಟವಲ್ಲ ಅದು ಸಂಸ್ಕೃತಿ. ಅತಿಥಿಯನ್ನು ಸ್ವಾಗತಿಸಲು ಹೂವಿನ ರಂಗೋಲಿ ಹಾಕುವುದೇ ಪೂಕಳಂ ಆಗಿದೆ. ಕೆಲವು ಕಡೆ ದೇವಾಲಯಗಳಲ್ಲಿ ಕಥಕ್ಕಳಿ ನೃತ್ಯ ರೂಪಕಗಳನ್ನು ಪ್ರದರ್ಶಿಸಿದರೆ ಇನ್ನು ಕೆಲವು ಕಡೆ ವಾಮನನ ರೂಪವನ್ನು ಮಣ್ಣಿನಲ್ಲಿ ಮಾಡಿ ಪೂಜಿಸುತ್ತಾರೆ. ದೀಪಸ್ತಂಭಗಳನ್ನು ಹಾಕಿ ತಾಳೆ ಮ ರಗಳನ್ನು ನೆಟ್ಟು, ತಾಳೆ ಗರಿಯಿಂದ ಮುಚ್ಚಿ ಅದನ್ನು ದಹಿಸುವ ಪದ್ಧತಿಯೂ ಕೆಲವು ಕಡೆ ಇದೆ. ಬಲಿಯ ತ್ಯಾಗದ ಪ್ರತೀಕವಾಗಿ ಇದನ್ನು ಆಚರಿಸುತ್ತಾರೆ. ಈ ಹಬ್ಬದ ಹತ್ತು ದಿನವೂ ಬಲಿ ಚಕ್ರವರ್ತಿ ಕೇರಳದಲ್ಲೆಡೆ ತಿರುಗಾಡುತ್ತಿರುತ್ತಾನೆ ಎಂಬ ನಂಬಿಕೆ ಇದೆ.

Advertisement

ದಕ್ಷಿಣ ಕನ್ನಡದಲ್ಲೂ ಓಣಂ ಆಚರಣೆ
ಓಣಂ ಈಗ ಕೇವಲ ಕೇರಳದ ಹಬ್ಬವಾಗಿ ಮಾತ್ರ ಉಳಿದಿಲ್ಲ. ದಕ್ಷಿಣ ಕನ್ನಡದಲ್ಲೂ ಓಣಂ ಆಚರಣೆ ನಡೆಯುತ್ತದೆ. ಶಿಕ್ಷಣ-ಸಂಸ್ಥೆಗಳಲ್ಲಿ ಹೆಚ್ಚಿನವುಗಳೂ ಓಣಂ ಹಬ್ಬವನ್ನು ಆಚರಿಸುತ್ತವೆ. ಸಾಂಪ್ರಾದಾಯಿಕ ಶೈಲಿಯ ಬಿಳಿ ಸೀರೆ, ಬಿಳಿ ಪಂಚೆ, ಶರ್ಟ್‌ಗಳನ್ನು ಧರಿಸಿ ಬರುವ ಮಕ್ಕಳೆಡೆಯಲ್ಲಿ ಓರ್ವ ಮಾವೇಲಿಯೂ ಇರುತ್ತಾನೆ ಈ ಆಚರಣೆಯಲ್ಲಿ. ಮಹಾಬಲಿಯ ನಾಡು ಆ ಕಾಲಕ್ಕೆ ಸುಭೀಕ್ಷವಾಗಿತ್ತು. ಆದುದರಿಂದಲೇ ಅವನ ಸ್ವಾಗತಕ್ಕೆ ಕೇರಳವು ಭರ್ಜರಿಯಾಗಿ ತಯಾರಾಗುತ್ತದೆ. ಕಳ್ಳತನ, ದರೋಡೆ, ಸುಳ್ಳು, ಮೋಸಗಳಿಲ್ಲದ ರಾಜ್ಯವನ್ನಾಳಿದ್ದ ಬಲಿಯನ್ನು ಅದೇ ತತ್ತಗಳನ್ನು ಪಾಲಿಸಿ ಸ್ವಾಗತಿಸುವಂತಾಗಲಿ ಎಂಬುದೇ ಈ ಓಣಂನ ಆಶಯವಾಗಲಿ.

ವೆಲ್ಲಂಕಳಿ ಅಥವಾ ದೋಣಿ ಉತ್ಸವ
ದೋಣಿ ಉತ್ಸವ ಅಥವಾ ದೋಣಿ ಸ್ಪರ್ಧೆ ಎಂಬುದು ಈ ಹಬ್ಬದ ಪ್ರಮುಖ ಆಕರ್ಷಣೆ. ನದಿಗಳಲ್ಲಿ ದೊಡ್ಡ ಗಾತ್ರದ ದೋಣಿಗಳಲ್ಲಿ 50ರಿಂದ 70 ಜನರು ಕುಳಿತುಕೊಂಡು ಸ್ಪರ್ಧೆ ನಡೆಸುವುದೇ ಇದರ ವೈಶಿಷ್ಟ್ಯ. ಆರಾನ್‌ಮುಲ ಎಂಬ ಪ್ರದೇಶದಲ್ಲಿ ಪ್ರತಿ ವರ್ಷ ವೆಲ್ಲಂಕಳಿ ಜರಗುತ್ತದೆ. ಸುಮಾರು 50 ದೋಣಿಗಳು ಈ ಸ್ಫರ್ಧೆಯಲ್ಲಿ ಪಾಲ್ಗೊಳ್ಳುತ್ತವೆ. ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಆರಾನ್‌ಮುಲದಲ್ಲಿ ಪಾರ್ಥಸಾರಥಿ ದೇವಾಲಯವೊಂದಿದೆ. ಅದರ ಪಕ್ಕದಲ್ಲಿ ಹರಿಯುವ ಪಂಬಾ ನದಿಯಲ್ಲಿ ಈ ಸ್ಪರ್ಧೆ ನಡೆಯುತ್ತದೆ. ವಿವಿಧ ಸಂಘ-ಸಂಸ್ಥೆಗಳು ಬೇರೆ ಬೇರೆ ಕಡೆಯಲ್ಲಿ ಈ ಸ್ಪರ್ಧೆಗಳನ್ನು ಆಯೋಜಿಸುತ್ತವೆ.

– ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next