ಜೇವರ್ಗಿ: ಹೈದರಲಿಯ ಸೈನ್ಯದ ವಿರುದ್ಧ ಹೋರಾಡಿ ಚಿತ್ರದುರ್ಗ ಮದಕರಿ ಸಾಮ್ರಾಜ್ಯವನ್ನು ರಕ್ಷಿಸಿದ ಒನಕೆ ಓಬವ್ವ ಶೌರ್ಯ, ಸಾಹಸದ ವೀರ ಮಹಿಳೆಯಾಗಿ ಇಡೀ ಸಮಸ್ಥ ಮಹಿಳಾ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ಇತಿಹಾಸಶಾಸ್ತ್ರ ಉಪನ್ಯಾಸಕಿ ಚಂದ್ರಪ್ರಭ ಕಮಲಾಪೂರಕರ್ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುರುವಾರ ನಡೆದ ಒನಕೆ ಓಬವ್ವ ಮತ್ತು ಡಾ| ಮೌಲಾನಾ ಅಬುಲ್ ಕಲಾಂ ಆಜಾದ ಅವರ ಜನ್ಮದಿನಾಚರಣೆ ಯಲ್ಲಿ ಉಭಯ ಮಹನೀಯರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ತನ್ನ ಯಜಮಾನಿಕೆಯ ಅಸ್ತಿತ್ವವನ್ನು ಉಳಿಸುವುದಕ್ಕಾಗಿ ಉಪ್ಪು ತಿಂದ ಮನೆಗೆ ದ್ರೋಹ ಬಗೆಯದೇ ಸ್ವಾಮಿನಿಷ್ಠೆಯನ್ನು ಮೆರೆಯುವ ಮೂಲಕ ದೇಶಕ್ಕೆ ನಾಡಿನ ಕೀರ್ತಿಯನ್ನು ಹೆಚ್ಚಿಸಿದ ಒಬವ್ವ ಮಾದರಿಯಾಗಿದ್ದಾರೆ ಎಂದರು.
ಡಾ| ಆಜಾದ್‌ರು ಸ್ವಾತಂತ್ರ್ಯ ಹೋರಾಟಗಾರರಾಗಿ, ದೇಶದ ಪ್ರಥಮ ಶಿಕ್ಷಣ ಸಚಿವರಾಗಿ, ಶಿಕ್ಷಣ ತಜ್ಞರಾಗಿ ನಮ್ಮ ದೇಶಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸುವ ಮೂಲಕ ಅವರಿಗೆ ಗೌರವ ನೀಡಲಾಗುತ್ತದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಎಂದರು.
ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ನಹಿಮಾ ನಾಹಿದ್, ಮಂಜುನಾಥ ಎ.ಎಂ., ಎಚ್ .ಬಿ.ಪಾಟೀಲ, ಮೌಲಾನಾ ಆಜಾದ್ ಪ್ರೌಢ ಶಾಲೆಯ ಪ್ರಾಂಶುಪಾಲೆ ಲಕ್ಷ್ಮೀ ನಾಯಕ, ಶಾಲೆಯ ಸಹ ಶಿಕ್ಷಕರಾದ ಚಿನ್ನು ಪಟೇಲ್, ದೇವರಾಜ ಹೊಸಮನಿ, ಮಲ್ಲಿಖ್ ಷರಾಫ್, ನಗ್ಮಾ ಶೇಖ್ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.