Advertisement

ಒನಕೆ ಕರಗಕ್ಕೆ ತಲೆದೂಗಿದ ಭಕ್ತರು

09:26 PM May 06, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಅಲ್ಲಿ ನೆರೆದಿದ್ದವರಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ. ಕರಗದ ಕಡೆಯೇ ಎಲ್ಲರ ಗಮನ. ಆಗಾಗ ಬಂದು ಹೋದ ಮಳೆಯ ಸಿಂಚನ ನೆರೆದಿದ್ದವರಲ್ಲಿ ಪುಳಕ ತಂದರೆ ಪೂಜಾರಿಯ ಒನಕೆ ಕರಗಕ್ಕೆ ಅಲ್ಲಿ ನೆರದಿದ್ದವರು ತಲೆದೂಗಿದರು.

Advertisement

ಹೌದು, ನಗರದ ಕೆಎಸ್‌ಆರ್‌ಟಿಸಿ ಡಿಪೋ ಸಮೀಪದ ಭಗತ್‌ಸಿಂಗ್‌ ನಗರದಲ್ಲಿ ನೆಲೆಸಿರುವ ಶ್ರೀ ಧರ್ಮರಾಯಸ್ವಾಮಿಯ 37 ನೇ ವರ್ಷದ ಹೂವಿನ ಕರಗ ಮಹೋತ್ಸವ ಪ್ರಯುಕ್ತ ನಗರದ ಟೌನ್‌ಹಾಲ್‌ ವೃತ್ತದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಒನಕೆ ಕರಗ ಪ್ರದರ್ಶನ ನೋಡುಗರ ಮೈರೋಮಾಂಚನಗೊಳಿಸಿತು.

ಕಳೆದ ಎರಡು ದಿನಗಳಿಂದ ನಗರದಲ್ಲಿ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವನ್ನು ಭಕ್ತಿಭಾವದಿಂದ ಆದ್ದೂರಿಯಾಗಿ ಸಹಸ್ರಾರು ಜನರ ಸಮ್ಮುಖದಲ್ಲಿ ಆಚರಿಸಲಾಗುತ್ತಿದ್ದು, ಕಳೆದ ಶನಿವಾರ ರಾತ್ರಿ ಇಡೀ ಹೂವಿನ ಕರಗ ಆದ್ದೂರಿಯಾಗಿ ನಡೆಯಿತು.

ಇದರ ಭಾಗವಾಗಿ ಕಡೆಯ ದಿನ ನೆರೆಯ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಿಂದ ಆಗಮಿಸಿದ್ದ ಎಂ.ಬಾಲಾಜಿ ಹಾಗೂ ಅವರ ಸಹಚರರು ಒನಕೆ ಕರಗ ಹೊತ್ತು ವಿವಿಧ ಭಂಗಿಗಳಲ್ಲಿ ನೃತ್ಯ ಪ್ರದರ್ಶಿಸುವ ಮೂಲಕ ಧರ್ಮರಾಯಸ್ವಾಮಿ ಹೂವಿನ ಕರಗಕ್ಕೆ ಕಳೆ ತಂದುಕೊಟ್ಟರು.

ಒನಕೆ ಕರಗ ವೀಕ್ಷಣೆಗೆ ಜನಸಾಗರ: ಅಪರೂಪದ ಒನಕೆ ಕರಗ ವೀಕ್ಷಣೆಗೆ ನಗರಸಭೆಯ ಟೌನ್‌ಹಾಲ್‌ ವೃತ್ತದ ಅಕ್ಕಪಕ್ಕದ ಮಹಡಿಗಳ ಮೇಲೆ ನಗರ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಯುವಕ, ಯುವತಿಯರು, ನಾಗರಿಕರು, ಮಹಿಳೆಯರ ದಂಡು ನೆರೆದು ಕುತೂಹಲ ಭರಿತರಾಗಿ ಒನಕೆ ಕರಗ ಪ್ರದರ್ಶನ ಕಣ್ತುಂಬಿಸಿಕೊಂಡರು.

Advertisement

ಕರಗ ಹೊತ್ತಿದ್ದ ಬಾಲಾಜಿ ಹಾಗೂ ಆತನ ಸಹಚರರು ತಮಟೆಯ ಸದ್ದಿಗೆ ವಿವಿಧ ಭಂಗಿಗಳಲ್ಲಿ ಒನಕೆ ಕರಗ ಹೊತ್ತು ನೃತ್ಯ ಪ್ರದರ್ಶಿಸುವ ಮೂಲಕ ನೋಡುಗರ ಗಮನ ಸೆಳೆದರು. ಕೆಲ ಯುವಕರು ಒನಕೆ ಕರಗ ನೃತ್ಯ ಪ್ರದರ್ಶನವನ್ನು ತಮ್ಮ ಮೊಬೈಲ್‌ಗ‌ಳಲ್ಲಿ ಸೆರೆ ಹಿಡಿಯುತ್ತಿದ್ದ ದೃಶ್ಯಗಳು ಕಂಡು ಬಂದವು.

ಕರಗ ಉತ್ಸವಕ್ಕೆ ತೆರೆ: ಜಿಲ್ಲಾ ಕೇಂದ್ರದಲ್ಲಿ ಪ್ರತಿ ವರ್ಷ ಭಕ್ತಿಭಾವದಿಂದ ನಡೆಸುವ ಧರ್ಮರಾಯಸ್ವಾಮಿಯ 37 ನೇ ವರ್ಷದ ಹೂವಿನ ಕರಗ ಮಹೋತ್ಸವ ಸೋಮವಾರ ಅಪರೂಪದ ಒನಕೆ ಕರಗ ನೃತ್ಯ ಪ್ರದರ್ಶನದೊಂದಿಗೆ ಸಂಪನ್ನಗೊಂಡಿತು. ಕಡೆಯ ದಿನದಂದು ಧರ್ಮರಾಯಸ್ವಾಮಿಗೆ ವಿಶೇಷ ಪೂಜೆ ಮತ್ತಿತರ ಧಾರ್ಮಿಕ ಕೈಂಕಾರ್ಯಗಳನ್ನು ಭಕ್ತಾದಿಗಳಿಂದ ನೆರವೇರಿತು.

ಒನಕೆ ಕರಗಕ್ಕೆ ಮಳೆಯ ಸಿಂಚನ: ಜಿಲ್ಲಾ ಕೇಂದ್ರದ ಐತಿಹಾಸಿಕ ಶ್ರೀ ಧರ್ಮರಾಯಸ್ವಾಮಿ ಒನಕೆ ಕರಗ ಮಹೋತ್ಸವಕ್ಕೆ ಸೋಮವಾರ ಮಧ್ಯಾಹ್ನ ನಗರದಲ್ಲಿ ಮಳೆಯ ಸಿಂಚನವಾಗಿ ಕರಗಕ್ಕೆ ಕಳೆ ತಂದುಕೊಟ್ಟಿತು. ಒನಕೆ ಕರಗ ಆರಂಭಗೊಳ್ಳುತ್ತಿದ್ದಂತೆ ಮಳೆರಾಯನ ಕೃಪೆ ತೋರಿದ್ದು ನೆರೆದಿದ್ದವರಲ್ಲಿ ಪುಳಕ ತುಂದಿತು. ಬೀಳುತ್ತಿದ್ದ ಮಳೆಯ ನಡುವೆಯು ಒನಕೆ ಕರಗ ಭಕ್ತಿಭಾವದಿಂದ ನಡೆಯಿತು. ಸುಮಾರು ಎರಡು, ಮೂರು ಗಂಟೆಗಳ ಕಾಲ ನಡೆದ ಒನಕೆ ಕರಗ ಕರಗ ಪ್ರೇಮಿಗಳನ್ನು ತಲೆದೂಗುವಂತೆ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next