Advertisement

ನಿನ್ನ ದನಿಯಾಗಿ, ನಿನ್ನ ಕೊರಳಾಗಿ…

08:47 PM Aug 19, 2019 | mahesh |

ಇಷ್ಟು ನಿಕಟವಾಗಿದ್ದ ನೀನು ಹಠಾತ್ತಾಗಿ ಕಾಣೆಯಾದಾಗ, ನಾನು ಪಟ್ಟ ನೋವು, ಯಾತನೆ ಬಣ್ಣಿಸಲಸಾಧ್ಯ. ಹೋದಲ್ಲೆಲ್ಲಾ ನಿನ್ನೇ ಅರಸುತ್ತಾ ನನ್ನ ಕಣ್ಣುಗಳು ಸೋತು ಹೋಗಿದ್ದವು. ನಿನ್ನ ಬಳಿ ಹಂಚಿಕೊಳ್ಳಲಾಗದೇ ನನ್ನ ಮನಸ್ಸಿನ ಭಾವನೆಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಾ ಒದ್ದಾಡಿ ಹೋಗಿದ್ದೆ…

Advertisement

ಬಾಲ್ಯದಿಂದಲೂ ನನಗೆ ನಿನ್ನಲ್ಲಿ ಏನೋ ಆಕರ್ಷಣೆ. ನಿನ್ನ ಸ್ನಿಗ್ಧ ಸೌಂದರ್ಯಕ್ಕೆ ಮಾರು ಹೋದವಳು ನಾನು. ಶಾಲೆಯಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನೂ ನಿನ್ನೊಂದಿಗೆ ಹಂಚಿಕೊಂಡರೇನೇ ನನಗೆ ಸಮಾಧಾನ. ಬೆಳಗ್ಗೆ ಶಾಲೆಗೆ ಹೊರಡುವ ಧಾವಂತದಲ್ಲಿ ನಿನ್ನ ಕಡೆ ಗಮನ ಹರಿಸಲೂ ನನಗೆ ಸಮಯವಿರುತ್ತಿರಲಿಲ್ಲ. ಸಾಯಂಕಾಲ ಮನೆ ತಲುಪಿದೊಡನೆ ನನ್ನ ಕಣ್ಣುಗಳು ಅರಸುತ್ತಿದ್ದುದ್ದೇ ನಿನ್ನನ್ನು, ನಿನ್ನ ಬಳಿ ಹೇಳಿಕೊಳ್ಳಲು ಬೇಕಾದಷ್ಟು ವಿಷಯಗಳಿರುತ್ತಿದ್ದವಲ್ಲ, ಅದಕ್ಕೆ. ನಾನು ಶಾಲೆಯಿಂದ ಬರುವುದು ತಡವಾದಾಗ ಮನದಲ್ಲಿ ಏನೋ ಕಳವಳ, ಆತಂಕ, ಏನೋ ಕಳೆದುಕೊಂಡ ಭೀತಿ. ಈ ತಳಮಳ ಸ್ಥಿಮಿತಕ್ಕೆ ಬರುತ್ತಿದ್ದುದ್ದೇ ನಿನ್ನ ದರ್ಶನದಿಂದ. ಕೆಲವೊಮ್ಮ ವಾರಪೂರ್ತಿ ನಿನ್ನ ನೋಡುವ ಭಾಗ್ಯ ಲಭಿಸದೇ ಚಡಪಡಿಸಿದ್ದೂ ಇದೆ. ಭಾನುವಾರ ಬೆಳಗಾಗುವುದನ್ನೇ ಚಾತಕ ಪಕ್ಷಿಯಂತೆ ನಿರೀಕ್ಷಿಸುತ್ತಿದ್ದೆ, ವಾರಪೂರ್ತಿಯ ಸಮಾಚಾರಗಳನ್ನು ನಿನ್ನಲ್ಲಿ ಅರುಹಿ ನನ್ನ ಮನಸ್ಸನ್ನು ಹಗುರಗೊಳಿಸಿಕೊಳ್ಳಲು.

ಇಷ್ಟು ನಿಕಟವಾಗಿದ್ದ ನೀನು ಹಠಾತ್ತಾಗಿ ಕಾಣೆಯಾದಾಗ, ನಾನು ಪಟ್ಟ ನೋವು, ಯಾತನೆ ಬಣ್ಣಿಸಲಸಾಧ್ಯ. ಹೋದಲೆಲ್ಲಾ ನಿನ್ನನ್ನೇ ಅರಸುತ್ತಾ ನನ್ನ ಕಣ್ಣುಗಳು ಸೋತು ಹೋಗಿದ್ದವು. ನಿನ್ನ ಬಳಿ ಹಂಚಿಕೊಳ್ಳಲಾಗದೇ ನನ್ನ ಮನಸ್ಸಿನ ಭಾವನೆಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಾ ಒದ್ದಾಡಿದ್ದೆ. ನಿನ್ನಷ್ಟು ಆತ್ಮೀಯತೆ ನನಗೆ ಬೇರೆ ಯಾರಲ್ಲೂ ಇರಲಿಲ್ಲ, ನಿನ್ನ ಆಗಮನವನ್ನೇ ಎದುರು ನೋಡುತ್ತಿದ್ದೆ. ನಿನ್ನ ಕ್ಷೇಮ ಸಮಾಚಾರ ತಿಳಿಯದೇ ತಳಮಳಿಸಿದ್ದೆ. ನೀನು ಹಿಂತಿರುಗಿ ಬರುವುದೇ ಇಲ್ಲವೇನೋ, ಇನ್ನು ನನ್ನ ನಿನ್ನ ಭೇಟಿ ಸಾಧ್ಯವೇ ಇಲ್ಲವೇನೋ ಎಂಬ ಕಳವಳ, ಏನೋ ಭೀತಿ.

ಎರಡು ವರ್ಷಗಳ ಹಿಂದೆ ನಿನ್ನ ಪುನರಾಗಮನದಿಂದ ನನ್ನಷ್ಟು ಸಂತೋಷ ಪಟ್ಟವರು ಈ ಪ್ರಪಂಚದಲ್ಲೇ ಇರಲಿಕ್ಕಿಲ್ಲ. ಇಷ್ಟು ವರ್ಷಗಳ ನನ್ನ ಮನಸ್ಸಿನ ಒತ್ತಡವನ್ನು ಅಣೆಕಟ್ಟು ಒಡೆದು ಬರುವ ಜಲಧಾರೆಯಂತೆ, ನನ್ನ ಮನಸ್ಸಿನ ಭಾವನೆಗಳು ಭೋರ್ಗರೆಯುತ್ತಿದ್ದವು.  ಈಗ ನೋಡಿದರೆ, ನೀನು ಆ ಮೊದಲಿನ ನೀನೇ ಅಲ್ಲ, ಆಕಾರ ಸಣ್ಣದಾಗಿದೆ, ಸ್ವರ ಬದಲಾಗಿದೆ ಎನ್ನುವರಲ್ಲ ನಿಜವೇ? ಬದಲಾದ ನಿನ್ನ ಸ್ವರವನ್ನು ಹೇಗೆ ಗುರುತಿಸಲಿ?
ಈಗ ನಾನು ನಿನ್ನನ್ನು ಕಾಣುತ್ತಿರುವುದು, ನಿನ್ನೊಡನೆ ನನ್ನ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಿರುವುದು ನನ್ನ ಭ್ರಮೆಯೇ? ಇಷ್ಟು ವರ್ಷಗಳಿಂದ ನಿನ್ನನ್ನು ಕಾಣದೇ ಹಂಬಲಿಸಿದ ನನ್ನ ಮನಸ್ಸಿನ ಕಲ್ಪನೆಯೇ?

ಅನಿತಾ ಪೈ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next