ಮುಂಬೈ:ವಾಣಿಜ್ಯ ಮಹಾನಗರಿ ಮುಂಬೈ ಮತ್ತೆ ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಮುಂಬೈ-ಕೊಲ್ಲಾಪುರ ಎಕ್ಸ್ ಪ್ರೆಸ್ ರೈಲು ಜಲಾವೃತದಿಂದಾಗಿ ಮಾರ್ಗ ಮಧ್ಯೆದಲ್ಲಿಯೇ ನಿಂತ ಪರಿಣಾಮ ಸುಮಾರು 2ಸಾವಿರಕ್ಕೂ ಅಧಿಕ ಪ್ರಯಾಣಿಕರು ಪರದಾಡುವಂತಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ ಎನ್ ಡಿಆರ್ ಎಫ್ ಪಡೆ ಕಾರ್ಯಪ್ರವೃತ್ತರಾಗಿದ್ದಾರೆ.
ಮುಂಬೈ ಹೊರವಲಯ ಮತ್ತು ಮುಂಬೈನ ಹಲವು ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದ್ದರೆ, ರೈಲು, ವಿಮಾನ ಸಂಚಾರಕ್ಕೆ ತೊಡಕುಂಟಾಗಿದೆ. ಏತನ್ಮಧ್ಯೆ ಈ ಬಾರಿಯ ಮಳೆ 2005ರ ನೆನಪನ್ನು ಮತ್ತೆ ಮರುಕಳಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆನಪನ್ನು ಮೆಲುಕು ಹಾಕುತ್ತಿದ್ದಾರೆ.
ದೇಶದ ಮಹಾನಗರಗಳಾದ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಈ ಪರಿಸ್ಥಿತಿ ನಿರಂತರವಾಗಿದೆ. 2005ರಲ್ಲಿನ ಮಹಾಮಳೆ ಮುಂಬೈಯನ್ನು ಹೇಗೆ ಕಂಗೆಡಿಸಿತ್ತು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ…
2005ರ ಮಹಾಮಳೆಗೆ ಮುಂಬೈನಲ್ಲಿ 1000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು:
2005ರಲ್ಲಿ ಗುಜರಾತ್ ನಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದ ಬೆನ್ನಲ್ಲೇ ಜುಲೈ 26ರಂದು ಮಹಾಮಳೆಗೆ ಮುಂಬೈ ಸಂಪೂರ್ಣವಾಗಿ ತತ್ತರಿಸಿ ಹೋಗಿತ್ತು. ಅಂದಾಜು 1094 ಜನರು ಸಾವಿಗೀಡಾಗಿದ್ದರು.
ಇಡೀ ಮುಂಬೈ ಜಲಪ್ರಳಯಕ್ಕೆ ಸಿಲುಕಿತ್ತು, ಇದರಿಂದಾಗಿ ಸಾವಿರಾರು ಜನರು ರಸ್ತೆಯಲ್ಲಿಯೇ ನಿಲ್ಲುವಂತಾಗಿತ್ತು. ಕಚೇರಿಯಲ್ಲಿದ್ದವರು ನಾಲ್ಕಾರು ದಿನಗಳ ಬಳಿಕ ಮನೆಗೆ ತಲುಪಿದದರು. ಅಂದು ಒಂದೇ ದಿನ ಮಹನಗರಿಯಲ್ಲಿ ದಾಖಲೆಯ 944 ಮಿಲಿ ಮೀಟರ್ ಮಳೆ ಸುರಿದಿತ್ತು. ಮರುದಿನವೂ ಕೂಡಾ ವರುಣನ ಆರ್ಭಟ ಮುಂದುವರಿದ ಪರಿಣಾಮ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು.
ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತಗೊಂಡ ಪರಿಣಾಮ ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ನ ಕಂಟ್ರೋಲ್ ರೂಂಗೆ ಬಿಡುವಿಲ್ಲದಂತೆ ದೂರುಗಳ ಕರೆ ಬರುತ್ತಿತ್ತು. ಲೋಕಲ್ ರೈಲು ಸಂಚಾರ ಮಧ್ಯಾಹ್ನವೇ ಸ್ಥಗಿತಗೊಂಡಿತ್ತು. ರಸ್ತೆಗಳೆಲ್ಲಾ ನೀರಿನಿಂದ ತುಂಬಿ ಹೋಗಿತ್ತು.
ಪ್ರವಾಹ ಪರಿಸ್ಥಿತಿಯಿಂದ ಸಾವಿರಾರು ವಿದ್ಯಾರ್ಥಿಗಳು ಮಾರ್ಗ ಮಧ್ಯೆದಲ್ಲಿಯೇ ಸಿಲುಕಿ, 24ಗಂಟೆಗಳ ಕಾಲ ಮನೆಗೆ ತಲುಪದಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಎರಡು ದಿನಗಳ ಕಾಲ ಶಾಲಾ, ಕಾಲೇಜಿಗೆ ರಜೆ ಘೋಷಿಸಿತ್ತು.
ಭಾರೀ ಮಳೆಯಿಂದಾಗಿ 1000 ಸಾವಿರ ಕೋಟಿ ಆರ್ಥಿಕ ನಷ್ಟ:
ಭಾರೀ ಮಳೆ, ಪ್ರವಾಹದಿಂದಾಗಿ ವಾಣಿಜ್ಯ ನಗರಿಗೆ ಆರ್ಥಿಕವಾಗಿ ಹೊಡೆತ ಬಿದ್ದಿತ್ತು. ಮುಂಬೈನ ವ್ಯಾಪಾರ, ವಹಿವಾಟು, ಕೈಗಾರಿಕಾ ಚಟುವಟಿಕೆ ಸ್ಥಗಿತಗೊಂಡ ಪರಿಣಾಮ ಅಂದಾಜು ಒಂದು ಸಾವಿರ ಕೋಟಿ ರೂಪಾಯಿ ನಷ್ಟವಾಗಿತ್ತು. ಬ್ಯಾಂಕಿಂಗ್ ವಹಿವಾಟಿಗೂ ಅಡ್ಡಿಯಾಗಿತ್ತು. ಹಲವಾರು ಬ್ಯಾಂಕ್ ಗಳ ಎಟಿಎಂ ಕೂಡಾ ಸ್ಥಗಿತವಾಗಿತ್ತು. ಕನೆಕ್ಟಿವಿಟಿ ಸಮಸ್ಯೆಯಿಂದ ಜುಲೈ 26, 27ರಂದು ಎಟಿಎಂ ಇಲ್ಲದೆ ಜನರು ಪರದಾಡುವಂತಾಗಿತ್ತು.
30ಗಂಟೆಗಳ ಕಾಲ ವಿಮಾನ ಸಂಚಾರ ಬಂದ್:
ಮುಂಬೈ ವಿಮಾನ ನಿಲ್ದಾಣದಲ್ಲಿಯೇ ಮೊದಲ ಬಾರಿಗೆ ಎಂಬಂತೆ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 30ಗಂಟೆಗಳಿಗೂ ಹೆಚ್ಚು ಕಾಲ ಬಂದ್ ಮಾಡಲಾಗಿತ್ತು. 700 ವಿಮಾನಗಳ ಸಂಚಾರ ರದ್ದುಪಡಿಸಲಾಗಿತ್ತು. ಜುಲೈ 28ರ ಬೆಳಗ್ಗೆ ವಿಮಾನ ಹಾರಾಟ ಆರಂಭವಾಗಿತ್ತು.
ರೈಲ್ವೆ ಹಳಿಗಳು ಕಿತ್ತುಹೋಗಿದ್ದವು ಇದರಿಂದಾಗಿ ಆಗಸ್ಟ್ 6ರವರೆಗೆ ದೂರ ಪ್ರಯಾಣದ ರೈಲು ಸಂಚಾರವನ್ನು ರದ್ದುಪಡಿಸಲಾಗಿತ್ತು. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, 5 ಲಕ್ಷ ಮೊಬೈಲ್ ಗ್ರಾಹಕರು ಮತ್ತು 2ಲಕ್ಷಕ್ಕೂ ಅಧಿಕ ಎಂಟಿಎನ್ ಎಲ್ ದೂರವಾಣಿ ಬಳಕೆದಾರರು ನಾಲ್ಕು ಗಂಟೆಗಳ ಕಾಲ ಸಂಪರ್ಕ ಇಲ್ಲದೆ ಪರದಾಡುವಂತಾಗಿತ್ತು.
*52 ಲೋಕಲ್ ರೈಲುಗಳಿಗೆ ಹಾನಿ
*37ಸಾವಿರ ಆಟೋಗಳಿಗೆ ಹಾನಿ
*4 ಸಾವಿರ ಕಾರುಗಳಿಗೆ ಹಾನಿ
*900 ಬೆಸ್ಟ್ ಬಸ್ಸುಗಳಿಗೆ ಹಾನಿ
*ಹತ್ತು ಸಾವಿರಕ್ಕೂ ಅಧಿಕ ಲಾರಿ ಮತ್ತು ಟೆಂಪೋಗಳಿಗೆ ಹಾನಿ