ಮೇ 10, 2008. ಇದನ್ನು “ಐಪಿಎಲ್ ಹ್ಯಾಟ್ರಿಕ್ ಡೇ’ ಎಂದು ಕರೆಯಲಡ್ಡಿಯಿಲ್ಲ. ಐಪಿಎಲ್ ಇತಿ ಹಾಸದ ಪ್ರಪ್ರಥಮ ಹ್ಯಾಟ್ರಿಕ್ ಇದೇ ದಿನ ದಾಖ ಲಾಗಿತ್ತು. ಬೌಲರ್, ಚೆನ್ನೈ ಸೂಪರ್ ಕಿಂಗ್ಸ್‌ನ ಪೇಸರ್ ಲಕ್ಷ್ಮೀಪತಿ ಬಾಲಾಜಿ. ಚೆನ್ನೈಯಲ್ಲೇ ನಡೆದ ಮುಖಾಮುಖೀಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಬಾಲಾಜಿ ಸತತ 3 ಎಸೆತಗಳಲ್ಲಿ 3 ವಿಕೆಟ್ ಉಡಾಯಿಸಿ ವಿಜೃಂಭಿಸಿದರು. ಚೆನ್ನೈ 18 ರನ್ ಜಯ ಸಾಧಿಸಿತು.
182 ರನ್ ಚೇಸ್ ಮಾಡಲಿಳಿದಿದ್ದ ಪಂಜಾಬ್‌ಗ, ಅಂತಿಮ ಓವರ್‌ನಲ್ಲಿ 27 ರನ್ನುಗಳ ಕಠಿನ ಸವಾಲು ಎದುರಿಗಿತ್ತು. 4 ವಿಕೆಟ್ ಉಳಿದಿದ್ದವು. ಇರ್ಫಾನ್ ಪಠಾಣ್ ಮತ್ತು ಪೀಯೂಷ್ ಚಾವ್ಲಾ ಕ್ರೀಸ್‌ನಲ್ಲಿದ್ದರು. ಲೋಕಲ್ ಹೀರೊ ಬಾಲಾಜಿ ಕೈಗೆ ಧೋನಿ ಚೆಂಡನ್ನಿತ್ತರು. ಅವರು ಹ್ಯಾಟ್ರಿಕ್ ಹೀರೋ ಎನಿಸಿಕೊಂಡರು!
ಸಿಕ್ಸರ್ ಸ್ವಾಗತ!: ಇಲ್ಲಿ ಬಾಲಾಜಿಗೆ ಸಿಕ್ಕಿದ್ದು ಸಿಕ್ಸರ್ ಸ್ವಾಗತ. ಇರ್ಫಾನ್ ಪಠಾಣ್ ಮೊದಲ ಎಸೆತವನ್ನೇ ಡೀಪ್ ಮಿಡ್-ವಿಕೆಟ್ ಮಾರ್ಗವಾಗಿ ಆಕಾಶಕ್ಕೆ ಎತ್ತಿದರು. ಮುಂದಿನ ಎಸೆತ ಇದೇ ದಾರಿಯಾಗಿ ಬೌಂಡರಿಗೆ ಹೋಗುವುದಿತ್ತು. ಆದರೆ ಸುರೇಶ್ ರೈನಾ ಅಮೋಘ ಫೀಲ್ಡಿಂಗ್ ನಡೆಸಿ ಇದನ್ನು ಎರಡೇ ರನ್ನಿಗೆ ಸೀಮಿತಗೊಳಿಸಿದರು. ಪರಿಷ್ಕೃತ ಟಾರ್ಗೆಟ್, 4 ಎಸೆತಗಳಲ್ಲಿ 19 ರನ್.
ಬಾಲಾಜಿ ಹೆಚ್ಚು ಎಚ್ಚರದಿಂದಿದ್ದರು. ಪಠಾಣ್ ಭಾರೀ ಜೋಶ್‌ನಲ್ಲಿದ್ದರು. 3ನೇ ಎಸೆತವನ್ನು ಮತ್ತೆ ಡೀಪ್ ಮಿಡ್-ವಿಕೆಟ್‌ನತ್ತ ಎತ್ತಿ ಬಾರಿಸಿದರು. ಅಲ್ಲಿ ರೈನಾ ಹೊಂಚುಹಾಕಿ ಕುಳಿತ್ತಿದ್ದರು. ಚೆಂಡು ಸುರಕ್ಷಿತವಾಗಿ ಅವರ ಬೊಗಸೆ ಸೇರಿತು. ಪಠಾಣ್ ಪೆವಿಲಿಯನ್ ಹಾದಿ ಹಿಡಿದರು.
ಬಾಲಾಜಿ ಮ್ಯಾಜಿಕ್: ಮುಂದಿನೆರಡು ಎಸೆತಗಳಲ್ಲಿ ಬಾಲಾಜಿ ಮ್ಯಾಜಿಕ್ ಮಾಡಿದರು. 4ನೇ ಎಸೆತವನ್ನು ಚಾವ್ಲಾ ಲಾಂಗ್ ಆಫ್ ಗೆ ಎತ್ತಿದರು. ಅದು ನೇರವಾಗಿ ಚಾಮರ ಕಪುಗೆಡರ ಕೈಸೇರಿತು. ಸತತ 2 ಎಸೆತಗಳಲ್ಲಿ 2 ವಿಕೆಟ್ ಉಡಾಯಿಸಿದ ಬಾಲಾಜಿ ಹ್ಯಾಟ್ರಿಕ್ ಹಾದಿಯಲ್ಲಿದ್ದರು. ವೀಕ್ಷಕರು ತುದಿಗಾಲಲ್ಲಿ ನಿಂತಿದ್ದರು. ಕೊನೆಗೂ ಆ ಗಳಿಗೆ ಬಂದೇ ಬಿಟ್ಟಿತು.
ಕ್ರೀಸ್ ಇಳಿದ ಆಟಗಾರ ವಿಕ್ರಮ್ ಸಿಂಗ್. ಆಫ್ ಸ್ಟಂಪ್‌ನ ಆಚೆ ಹೋದ ಚೆಂಡು ವಿಕ್ರಮ್ ಅವರ ಬ್ಯಾಟ್ ಸವರಿ ನೇರವಾಗಿ ಕೀಪರ್ ಧೋನಿಯ ಗ್ಲೌಸ್ ಸೇರಿಕೊಂಡಿತು! ಬಾಲಾಜಿ ಹಾಗೂ ಚೆನ್ನೈ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಅಂತಿಮ ಎಸೆತ ಎದುರಿಸಿದವರು ಉದಯ್ ಕೌಲ್. ಇದು ಅವರ ಬ್ಯಾಟ್‌ಗೆ ಸಿಗಲಿಲ್ಲ. ಬಾಲಾಜಿ ಸಾಧನೆ: 4-0-24-5. … ಹೀಗೆ ಐಪಿಎಲ್‌ನಲ್ಲಿ ಮೊದಲ ಹ್ಯಾಟ್ರಿಕ್ ದಾಖಲಾಗಿ 14 ವರ್ಷ ಉರುಳಿತು.