ಕಡೂರು: ಶುಕ್ರವಾರ ತಾಲೂಕಿನಲ್ಲಿ 5 ಅಗ್ನಿ ಅವಘಡ ಪ್ರಕರಣಗಳು ದಾಖಲಾಗಿದೆ ಎಂದು ತಿಳಿದುಬಂದಿದೆ. ಬಾಬಾ ಎಸ್ಟೇಟ್‌ನಲ್ಲಿ ಶುಕ್ರವಾರ ನಡೆದ ಅಗ್ನಿ ಆಕಸ್ಮಿಕದಿಂದ ತೆಂಗಿನ ತೋಟ, ವಾಸದ ಮನೆ, ಖಾಲಿ ಇದ್ದ 3 ಕೋಳಿ ಫಾರಂ, 12 ಸಾಗುವಾನಿ ಮರ, 6 ತೆಂಗಿನ ಮರ, 8 ಬೇವಿನ ಮರ ಸಂಪೂರ್ಣ ಸುಟ್ಟುಹೋಗಿವೆ ಎಂದು ಮಾಲೀಕ ಶಮೀರ್ ಹುಸೇನ್ ತಿಳಿಸಿದರು. ಕಲ್ಲಾಪುರದಲ್ಲಿ 10 ರಾಗಿ ಹುಲ್ಲಿನ ಬಣವೆ, ಪಾದದ ಮನೆ, ಕಬ್ಬಿನ ಗದ್ದೆ, ಗೆದ್ದೆಹಳ್ಳಿಯ ಅಡಿಕೆ ತೋಟ ದೋಗಿ ಹಳ್ಳಿಯ ತೆಂಗಿನ ತೋಟ,ನೀಲನಹಳ್ಳಿಯ ತೋಟ, ಸೋಮನಹಳ್ಳಿ ತಾಂಡ್ಯದ ಬೇಲಿ, ಬಿಸಿಲೆರೆಯ ಹುಲ್ಲಿನ ಬಣವೆಗಳಿಗೆ ಹತ್ತಿದ ಬೆಂಕಿಯನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ನಂದಿಸಿದ್ದಾರೆ.
ತಾಲೂಕಿನ ನಾಗಗೊಂಡನಹಳ್ಳಿಯಲ್ಲಿ ಕಳೆದ 10 ದಿನಗಳಿಂದ ಕಿಡಿಗೇಡಿಗಳು ದ್ವೇಷಕ್ಕೆ ಹಚ್ಚುತ್ತಿರುವ ಬೆಂಕಿಗೆ ಗೋವಿಂದಪ್ಪನವರ 10 ಟ್ರ್ಯಾಕ್ಟರ್ ತೆನೆ ಇಲ್ಲದ ರಾಗಿಹುಲ್ಲು, ಗಿರಿಜಮ್ಮ ರಾಜಪ್ಪ ಅವರಿಗೆ ಸೇರಿದ 20 ಟ್ರ್ಯಾಕ್ಟರ್ ಹುಲ್ಲಿನ ಬಣವೆಗೆ ರಂಗಪ್ಪನವರ ರಾಗಿಹುಲ್ಲಿನ ಬಣವೆ, ತಿಮ್ಮಪ್ಪನವರಿಗೆ ಸೇರಿದ ಸುಮಾರು 7 ಟ್ರ್ಯಾಕ್ಟರ್ ಹುಲ್ಲು ಭಸ್ಮವಾಗಿದೆ. ಎನ್.ಜಿ.ರಂಗನಾಥ್ ಅವರಿಗೆ ಸೇರಿದ 10 ಟ್ರ್ಯಾಕ್ಟರ್ ರಾಗಿಹುಲ್ಲಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಅವರವರ ಹುಲ್ಲಿನ ಬಣವೆಗಳನ್ನು ರಾತ್ರಿ ಹಗಲೆನ್ನದೆ ಕಾಯುತ್ತಿರುವುದಾಗಿ ರಂಗಪ್ಪ ತಿಳಿಸಿದರು. ಈಗಾಗಲೇ ಗ್ರಾಮದಲ್ಲಿ ನಡೆದಿರುವ ಬೆಂಕಿ ಅವಘಡಗಳ ಕುರಿತು ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಡೂರು ತಾಲೂಕಿನಲ್ಲಿ ಎರಡು ಅಗ್ನಿ ಶಾಮಕ ವಾಹನಗಳಿವೆ. ಆದರೆ ಅದರಲ್ಲಿ ಒಂದು ದುರಸ್ಥಿಗೆ ನಿಂತಿದೆ. ಬೇರೆಡೆಯಿಂದ ಇನ್ನೊಂದು ವಾಹನ ತರಿಸಿಕೊಳ್ಳಲಾಗಿದೆ. ಕಡೂರು ಠಾಣೆಗೆ ಹೊಸ ವಾಹನದ ಅವಶ್ಯಕತೆ ಇದೆ. ಸಿಬ್ಬಂದಿ ಕೊರತೆಯೂ ಇದೆ. ಈಗಾಗಲೇ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಶಶಿಧರ್ ಅವರಿಗೆ ಮನವಿ ಮಾಡಲಾಗಿದೆ
ಬಸವರಾಜಪ್ಪ , ಅಗ್ನಿ ಶಾಮಕ ದಳದ ಅಧಿಕಾರಿ