Advertisement

ಬೆರಳ ತುದಿಯಲ್ಲಿದೆ ಪ್ರಾವಿಡೆಂಟ್‌ ಫ‌ಂಡಿನ ಆನ್‌ಲೈನ್‌ ಸೇವೆ 

12:30 AM Mar 04, 2019 | |

ಇಪಿಎಫ್ಓ ಇಲಾಖೆಯ ಆನ್‌ಲೈನ್‌ ತಾಣಕ್ಕೆ ಹೋದರೆ ನಿಮ್ಮ ಖಾತೆಯ ಬಗ್ಗೆ ವಿವರಗಳನ್ನು ಪಡೆಯಬಹುದು. ನಿಮ್ಮ ಖಾತೆಯ ಪಾಸ್‌ಬುಕ್‌ ಇಳಿಸಿ ಪಿಎಫ್ನಲ್ಲಿ, ಪೆನ್ಶನ್‌ನಲ್ಲಿ ದುಡ್ಡೆಷ್ಟಿದೆ ಎಂದು ಪರಿಶೀಲಿಸಬಹುದು. ಕಂಪೆನಿ ಬದಲಾಯಿಸಿದಾಗ ಆನ್‌ಲೈನ್‌ ಆಗಿಯೇ ಆರ್ಜಿ ಗುಜರಾಯಿಸಿ ಹಳೆ ಖಾತೆಯನ್ನು ಹೊಸತರೊಡನೆ ಜೋಡಿಸಿಕೊಳ್ಳಬಹುದು. ಕೆಲಸವಿಲ್ಲದೆ ಮುಂದುವರಿಯಬೇಕಾದ ಸಂದರ್ಭದಲ್ಲಿ ಅರ್ಜಿ ಹಾಕಿ ಪಿಎಫ್ನಲ್ಲಿರುವ ಎಲ್ಲಾ ದುಡ್ಡನ್ನು ಹಿಂಪಡೆದು ಲೆಕ್ಕ ಚುಕ್ತ ಮಾಡಿಕೊಳ್ಳಬಹುದು. ಅರ್ಹತೆಯನುಸಾರ ಪಿಎಫ್ ಖಾತೆಯಿಂದ ಆಂಶಿಕ ಹಿಂಪಡೆದುಕೊಳ್ಳಬಹುದು. 

Advertisement

ಇಪಿಎಫ್ ಅಥವಾ ನಿಮ್ಮ ನೌಕರಿಗೆ ಸಂಬಂಧಪಟ್ಟಂತಹ ಪಿಎಫ್ ಅಂದರೇನೇ ಒಂದು ರೀತಿಯ ನಿಗೂಢತೆ ಹುಟ್ಟಿಸುವ ಕಾಲವೊಂದಿತ್ತು. ಸಂಬಳದಿಂದ ಕಡ್ಡಾಯವಾಗಿ ಕಡಿತವಾಗುತ್ತದೆ ಅನ್ನುವುದೊಂದು ವಿಚಾರ ಬಿಟ್ಟು ಯಾರಿಗೂ ಬೇರೇನೂ ಅದರ ಬಗ್ಗೆ ಗೊತ್ತಿರುತ್ತಿರಲಿಲ್ಲ. ಇತರ ಯಾವುದೇ ಸರಕಾರಿ ಯೋಜನೆಗಳಂತೆಯೇ ಪಿಎಫ್/ಪಿಂಚಣಿ ಕೂಡಾ ಒಂದು ಪರಕೀಯ ವಿಷಯವಾಗಿಯೇ ಜನರನ್ನು ಕಾಡಿದ್ದಿದೆ. 

ಆದರೀಗ ಕೆಲ ವರ್ಷಗಳಿಂದ ಈ ಧೂಳು ಹಿಡಿದ ಕಡತಗಳ ಪಿಎಫ್ ಇಲಾಖೆ ಕೂಡಾ ಕಣ್ತೆರೆದು ತನ್ನದೇ ಆದ ಒಂದು ಆನ್‌ಲೈನ್‌ ಪೋರ್ಟಲ್‌ ಸ್ಥಾಪಿಸಿ ನಮ್ಮ ನಿಮ್ಮಂತಹ ಜನಸಾಮಾನ್ಯರಿಗೆ ಉತ್ತಮ ಗ್ರಾಹಕ ಸೇವೆಯನ್ನು ಒದಗಿಸುತ್ತಿದೆ. ಇಪಿಎಫ್ಓ ಇಲಾಖೆಯ ಆನ್‌ಲೈನ್‌ ತಾಣಕ್ಕೆ ಹೋದರೆ ನಿಮ್ಮ ಖಾತೆಯ ಬಗ್ಗೆ ವಿವರಗಳನ್ನು ಪಡೆಯಬಹುದು. ನಿಮ್ಮ ಖಾತೆಯ ಪಾಸ್‌ಬುಕ್‌ ಇಳಿಸಿ ಪಿಎಫ್ ನಲ್ಲಿ, ಪೆನ್ಶನ್‌ನಲ್ಲಿ ದುಡ್ಡೆಷ್ಟಿದೆ ಎಂದು ಪರಿಶೀಲಿಸಬಹುದು. ಕಂಪೆನಿ ಬದಲಾಯಿಸಿದಾಗ ಆನ್‌ಲೈನ್‌ ಆಗಿಯೇ ಆರ್ಜಿ ಗುಜರಾಯಿಸಿ ಹಳೆ ಖಾತೆಯನ್ನು ಹೊಸತರೊಡನೆ ಜೋಡಿಸಿಕೊಳ್ಳಬಹುದು. ಕೆಲಸವಿಲ್ಲದೆ ಮುಂದುವರಿಯಬೇಕಾದ ಸಂದರ್ಭದಲ್ಲಿ ಅರ್ಜಿ ಹಾಕಿ ಪಿಎಫ್ನಲ್ಲಿರುವ ಎಲ್ಲಾ ದುಡ್ಡನ್ನು ಹಿಂಪಡೆದು ಲೆಕ್ಕ ಚುಕ್ತ ಮಾಡಿಕೊಳ್ಳಬಹುದು. ಬೇಕಾದಾಗ ಅರ್ಹತೆಯನುಸಾರ ನಿಮ್ಮ ಪಿಎಫ್ ಖಾತೆಯಿಂದ ಆಂಶಿಕವಾಗಿಯೂ ಹಿಂಪಡೆದುಕೊಳ್ಳಬಹುದು. ಇವೆಲ್ಲಾ ಸೌಲಭ್ಯಗಳು ಈಗಾಗಲೇ ಆನ್‌ಲೈಎನ್‌ ಆಗಿ ಪಿಎಫ್ ಜಾಲತಾಣದಲ್ಲಿ ಲಭ್ಯ. ಮೊದಲಿನಂತೆ ಅರ್ಜಿ ಫಾರ್ಮ್ ತುಂಬಿ ಅಕೌಂಟ್ಸ್‌ ಇಲಾಖೆಯ ಸಿಬ್ಬಂದಿಗಳ ಕೃಪಾಕಟಾಕ್ಷಕ್ಕಾಗಿ ಕೈಕಾಲು ಹಿಡಿಯ ಬೇಕಾಗಿಲ್ಲ. ಅಷ್ಟೇ ಏಕೆ ಇತ್ತೀಚೆಗಿನ ಕೆಲ ಬದಲಾವಣೆಗಳ ಪ್ರಕಾರ ನಿಮ್ಮ ಪಿಎಫ್ ದುಡ್ಡನ್ನು ಪಡಕೊಳ್ಳಬೇಕಾದರೆ ನಿಮ್ಮ ಹಳೆಯ ಉದ್ಯೋಗದಾತರ ಸಹಿಯ ಅಗತ್ಯವೂ ಈಗಿಲ್ಲ. ಸರಕಾರದ ಕುಂಭಕರ್ಣ ಗೋತ್ರದ ಈ ಒಂದು ಇಲಾಖೆ ಇಷ್ಟೆಲ್ಲಾ ಕಾರ್ಯನಿರ್ವಹಿಸಿದೆ ಎಂದರೆ ಹಲವರಿಗೆ ನಂಬಲು ಕಷ್ಟವಾಗಲೂಬಹುದು. ಆದರಿದು ಸತ್ಯ ಮತ್ತು ಅವರಿಗೆ ನಮ್ಮ ಅಭಿನಂದನೆಗಳನ್ನು ಖಂಡಿತವಾಗಿಯೂ ಸಲ್ಲಿಸತಕ್ಕದ್ದು. 

ಹಾಗಾಗಿ ಈ ಪಿಎಫ್ ಇಲಾಖೆಯ ಈ ಆನ್‌ಲೈನ್‌ ಅವತಾರದ ಬಗ್ಗೆ ವಿಷದವಾಗಿ ತಿಳಿದುಕೊಳ್ಳುವುದು ಈಗ ಅತ್ಯಂತ ಅಗತ್ಯವಾಗಿದೆ. ಆನ್‌ಲೈನ್‌ ಆಗಿ ಪಿಎಫ್ ಜಾಲತಾಣದಲ್ಲಿ ವ್ಯವಹರಿಸಲು ಪ್ರಪ್ರಥವಾಗಿ ನಿಮ್ಮ ಉವಾನ್‌ ಸಂಖ್ಯೆ ಬಳಸಿ ತಾವು ಆ ತಾಣದಲ್ಲಿ ರಿಜಿಸ್ಟರ್‌ ಆಗಬೇಕು.

ಏನಿದು ಉವಾನ್‌ ?
UAN ಅಂದರೆ  Universal Account Number ಅಥವಾ ಸಾರ್ವತ್ರಿಕ ಖಾತೆ ಸಂಖ್ಯೆ. ಆನ್‌ಲೈನ್‌ ಯೋಜನೆಯ ಪ್ರಕಾರ ಪ್ರತಿಯೊಬ್ಬ ಖಾತೆದಾರನಿಗೂ ಒಂದು ಸರ್ವತ್ರ ಸಲ್ಲುವ ಯುನಿವರ್ಸಲ್‌ ಖಾತೆ ಸಂಖ್ಯೆ ನೀಡಲಾಗುತ್ತದೆ. ಒಂದು ಪಾನ್ಪೋರ್ಟ್‌ ಸಂಖ್ಯೆಯಂತೆ, ಒಂದು ಪಾನ್‌ ಕಾರ್ಡ್‌ ಸಂಖ್ಯೆಯಂತೆ, ಒಂದು ಆಧಾರ್‌ ಕಾರ್ಡ್‌ ಸಂಖ್ಯೆಯಂತೆ ಇನ್ನು ಮುಂದೆ ಒಬ್ಬ ವ್ಯಕ್ತಿಗೆ ಒಂದೇ ಇಪಿಎಫ್ ಸಂಬಂಧಿ ಯುವಾನ್‌ ಸಂಖ್ಯೆ ಇರುತ್ತದೆ. ದೇಶದ ಎಲ್ಲೆಡೆ ಹೋದರೂ ಎಷ್ಟೇ ಬಾರಿ ಕೆಲಸ ಬದಲಾಯಿಸಿದರೂ ನಿಮ್ಮ ಈ ಅದ್ವಿತೀಯ ಖಾತೆಗೆ ನಿಮ್ಮ ಪಿಎಫ್ ದುಡ್ಡನ್ನು ತುಂಬಲಾಗುತ್ತದೆ. ಹಳೆ ಖಾತೆ-ಹೊಸ ಖಾತೆ, ವರ್ಗಾವಣೆ ಇತ್ಯಾದಿ ಜಂಜಟ್‌ ಇನ್ನು ಮುಂದೆ ಇರಲಾರದು. ಹೋದಲ್ಲೆಲ್ಲಾ ನಿಮ್ಮ ವಿಶಿಷ್ಟ ಯುವಾನ್‌ ನಂಬರ್‌ ನೀಡಿ ಕೆಲಸಕ್ಕೆ ಸೇರಿಕೊಳ್ಳಿ. ಕಾಮ್‌ ಖತಂ!

Advertisement

ಯುವಾನ್‌ ಎಂಬುದು 12 ಅಂಕಿಗಳ ಒಂದು ಪೋಟೇìಬಲ್‌ ನಂಬರ್‌. ಇದರ ಮೂಲಕ ನೀವು ಉದ್ಯೋಗದಾತರ ಹಸ್ತಕ್ಷೇಪವಿಲ್ಲದೆಯೇ ನೇರವಾಗಿ ಪಿಎಫ್ ಇಲಾಖೆಯೊಡನೆ ಆನ್‌ಲೈನ್‌ ಮೂಲಕ ವ್ಯವಹಾರ ಮಾಡಬಲ್ಲಿರಿ. ಪ್ರತಿ ತಿಂಗಳು ನಿಮ್ಮ ಖಾತೆಗೆ ಆದ ಕ್ರೆಡಿಟ್‌ ಬಗ್ಗೆ ಎಸ್ಸೆಮ್ಮೆಸ್‌ ಮೂಲಕ ಸಿಹಿಸುದ್ದಿ ಪಡೆಯಬಹುದು. ಯಾವಾಗ ಬೇಕಾದರಾಗ ಆನ್‌ಲೈನ್‌ಗೆ ಹೋಗಿ ಖಾತೆಯಲ್ಲಿ ದುಡ್ಡೆಷ್ಟಿದೆ ಎಂದು ಪರಿಶೀಲಿಸಬಹುದು. ಹಳೆಯ ಖಾತೆಗಳಿದ್ದರೆ ಯುವಾನ್‌ ಸಂಖ್ಯೆಗೆ ಆ ಮೊತ್ತವನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಬಹುದು ಮತ್ತು ಮೇಲೆ ಹೇಳಿದ ಎÇÉಾ ಇತರ ಕೆಲಸಗಳನ್ನು ಅತಿ ಸುಲಭವಾಗಿ ಮಾಡಬಹುದು.

ಯುವಾನ್‌ ಪಡೆಯುವುದು ಹೇಗೆ?
ನಿಮಗೆ ಯುವಾನ್‌ ನಂಬರ್‌ ನೀಡುವ ಜವಾಬ್ದಾರಿ ನಿಮ್ಮ ಉದ್ಯೋಗದಾತರದು. ಪಿಎಫ್ ಇಲಾಖೆಯ ಸೂಚನೆ ಯಾನುಸಾರ ಕಂಪೆನಿಗಳು ಕಾರ್ಯ ನಿರ್ವಹಿಸಿ ಪ್ರತಿಯೊಬ್ಬ ಉದ್ಯೋಗಿಗೂ ಒಂದು ಯುವಾನ್‌ ನೀಡುತ್ತಾರೆ. ಇದಕ್ಕಾಗಿ ನಿಮ್ಮ ಕೆವೈಸಿ ದಾಖಲೆಗಳನ್ನು (ಗುರುತು, ವಿಳಾಸ ಪುರಾವೆ, ಬ್ಯಾಂಕ್‌ ಖಾತೆ, ಇತ್ಯಾದಿ) ನೀಡುವುದು ಮಾತ್ರ ನಿಮ್ಮ ಜವಾಬ್ದಾರಿ. ಕಂಪೆನಿಗಳು ಇವೆಲ್ಲವನ್ನೂ ಒಂದು ಡಿಜಿಟಲ್‌ ಸಿಗ್ನೇಚರ್‌ ಮೂಲಕ ಇಲಾಖೆಗೆ ಅಪ್‌ಲೋಡ್‌ ಮಾಡುತ್ತದೆ ಮತ್ತು ಪಿಎಫ್ ಇಲಾಖೆ ನಿಮ್ಮ ಯುವಾನ್‌ ನಂಬರ್‌ ಸೃಷ್ಟಿಸಿ ನೀಡುತ್ತದೆ. ಹೊಸದಾಗಿ ಉದ್ಯೋಗಕ್ಕೆ ಸೇರುವ ವ್ಯಕ್ತಿಗಳಿಗೆ ಇದನ್ನು ಆ ಸಂದರ್ಭದಲ್ಲಿ ಉದ್ಯೋಗದಾತರೇ ಮಾಡಿಸಿ ಕೊಡುತ್ತಾರೆ ಮತ್ತು ಈ ಮೊದಲಿಂದಲೇ ಉದ್ಯೋಗದಲ್ಲಿ ರುವವರಿಗೆ ಕೂಡಾ ಉದ್ಯೋಗದಾತರು ಈ ನಂಬರನ್ನು ಇಲಾಖೆಯಿಂದ ಪಡೆದು ಉದ್ಯೋಗಸ್ಥರಿಗೆ ಈಗಾಗಲೇ ನೀಡಿರುತ್ತಾರೆ. 

ರಿಜಿಸ್ಟ್ರೇಶನ್‌ 
ಆನ್‌ಲೈನ್‌ ವ್ಯವಹಾರಕ್ಕೆ ಕೈ ಹಾಕುವ ಮುನ್ನ ಮೊತ್ತ ಮೊದಲಾಗಿ ನೀವು ಪಿಎಫ್ ಇಲಾಖೆಯ ಜಾಲತಾಣಕ್ಕೆ ಹೋಗಿ ನಿಮ್ಮ ಕೈ ಸೇರಿದ ಯುವಾನ್‌ ನಂಬರ್‌ ಮೂಲಕ ನಿಮ್ಮ ಆನ್‌ಲೈನ್‌ ಖಾತೆ ಯನ್ನು ರಿಜಿಸ್ಟರ್‌ ಮಾಡಿಸಿಕೊಳ್ಳಬೇಕು. https://unified portal&mem.epfindia.gov.in/memberinterface ಜಾಲತಾಣಕ್ಕೆ ಹೋಗಿ Activate UAN ಗುಂಡಿಯನ್ನು ಅದುಮಿ ನಿಮ್ಮ ಯುವಾನ್‌ ಸಂಖ್ಯೆಯನ್ನು ಆ್ಯಕ್ಟಿವೇಟ್‌ ಮಾಡಿಕೊಳ್ಳಬೇಕು. ಅದಕ್ಕಾಗಿ ನಿಮ್ಮ ಯುವಾನ್‌ ನಂಬರ್‌, ಪಿಎಫ್ ಮೆಂಬರ್‌ ಐಡಿ, ಆಧಾರ್‌ ನಂಬರ್‌, ಪಾನ್‌ ನಂಬರ್‌, ಹೆಸರು, ಜನ್ಮ ದಿನಾಂಕ, ಮೊಬೈಲ್‌ ನಂಬರ್‌ ಹಾಗೂ ಇ-ಮೈಲ್‌ ಐಡಿಗಳನ್ನು ಅಲ್ಲಿ ತುಂಬಬೇಕು. ಬಳಿಕ ‘ಪಿನ್‌’ ಬೇಕೆಂದು ಬಟನ್‌ ಒತ್ತಿದಾಗ ನಿಮ್ಮ ಮೊಬೈಲ್‌ ಫೋನಿಗೆ ಒಂದು ಪಿನ್‌ ಕೋಡ್‌ (ಒಟಿಪಿ) ಬರುತ್ತದೆ. ಅದರ ಮುಖಾಂತರ ವಾಪಾಸು ಅಲ್ಲಿಗೆ ಹೋಗಿ ನಿಮ್ಮ ತಂದೆ/ಪತಿಯ ಹೆಸರು, ನಿಮ್ಮ ಜನ್ಮ ದಿನಾಂಕ ಮತ್ತು ಪಾಸ್‌ವರ್ಡ್‌ ತುಂಬಿ ಖಾತೆಯನ್ನು ತೆರೆಯಬಹುದು.ಅಲ್ಲಿಗೆ ನಿಮ್ಮ ಖಾತೆ activate ಆದಂತೆ. ಈ ನಿಮ್ಮ ಖಾತೆಗೆ ಯುವಾನ್‌ ನಂಬರೇ ಲಾಗ್‌ಇನ್‌ ಐಡಿ ಹಾಗೂ ನೀವು ಆಯ್ದ ಪದವೇ ಪಾಸ್ವರ್ಡ್‌. ಈವಾಗ ನಿಮ್ಮ ರಿಜಿಸ್ಟ್ರೇಶನ್‌ ಸಂಪೂರ್ಣ ಗೊಂಡು ಆನ್‌ಲೈನ್‌ ಖಾತೆ ತೆರೆಯಲ್ಪಟ್ಟಿದೆ ಎಂದರ್ಥ. 

ಮುಂದಿನ ವಾರಗಳಲ್ಲಿ ಈ ರಿಜಿಸ್ಟ್ರೇಶನ್‌ ಬಳಸಿಕೊಂಡು ನಿಮ್ಮ ಪಿಎಫ್ ಖಾತೆಯನ್ನು ಸುಲಭವಾಗಿ ಆನ್‌ಲೈನ್‌ ವ್ಯವಹಾರದಲ್ಲಿ ಹೇಗೆ ಬಳಸಬಹುದು ಎನ್ನುವುದರ ಬಗ್ಗೆ ತಿಳಿಯೋಣ. ಇನ್ನು ಮುಂದೆ ನಿಮ್ಮ ಪಿಎಫ್ ಖಾತೆ ನಿಮ್ಮ ಆನ್‌ಲೈನ್‌ ಎಸ್‌ಬಿ ಖಾತೆಯಷ್ಟೇ ಆತ್ಮೀಯವಾಗಿ ಇರಲಿರುವುದು. ಮೊದಲಿನಂತೆ ಸಪ್ತ ಸಾಗರದ ಗರ್ಭದಾಚೆಯ ನಿಗೂಡ ಗುಮ್ಮನಾಗಿ ನಿಮ್ಮನ್ನು ಕಾಡಲಾರದು. ಅಭಿನಂದನೆಗಳು! ಮತ್ತು ಪಿಎಫ್ ಇಲಾಖೆಗೆ ಹ್ಯಾಟ್ಸಾಫ್ !

ವಿಶೇಷ ಸುದ್ದಿ 
ಕಳೆದ ವಾರ ಸುಪ್ರೀಮ್‌ ಕೋರ್ಟ್‌ ನೀಡಿದ ತೀರ್ಪಿನ ಪ್ರಕಾರ ನೌಕರರ ಪಿಎಫ್ ದೇಣಿಗೆಯನ್ನು ಲೆಕ್ಕ ಹಾಕುವಾಗ ಸ್ಪೆಷಲ್‌ ಅಲೋವನ್ಸ್‌ ಅನ್ನು ಕೂಡಾ ಗಣನೆಗೆ ತೆಗೆದುಕೊಳ್ಳಬೇಕು. ಬೇಸಿಕ್‌ ಮತ್ತು ಡಿಎ ಅಲ್ಲದೆ ಇನ್ನು ಮುಂದೆ ಸ್ಪೆಷಲ್‌ ಅಲ್ಲೋನ್ಸ್‌ ಕೂಡಾ ಸೇರಿಸಿ ಅದರ ಮೇಲೆ ಶೇ.12 ದೇಣಿಗೆ ಎರಡೂ ಬದಿಯಿಂದ ಜಮೆಯಾಗುತ್ತದೆ. ಇದರ ಅನುಷ್ಠಾನದ ಬಗ್ಗೆ ಕಟ್ಟುನಿಟ್ಟಾಗಿ ಕ್ರಮವಹಿಸುವುದಾಗಿ ಇಪಿಎಫ್ಒ ಸಂಸ್ಥೆ ಘೋಷಣೆ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next