Advertisement

BJP; ರಾಜಸ್ಥಾನದಲ್ಲಿ ಅಧಿಕಾರ ಸಿಕ್ಕರೆ ಮಾನ್ ಸಿಂಗ್ 2 ಮೊಮ್ಮಗಳಿಗೆ ಪಟ್ಟ?

06:23 PM Dec 02, 2023 | Team Udayavani |

ಜೈಪುರ: ವಿಧಾನಸಭಾ ಚುನಾವಣ ಫಲಿತಾಂಶ ಭಾನುವಾರ ಪ್ರಕಟಗೊಳ್ಳಲಿದ್ದು ಪ್ರಮುಖವಾಗಿ ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರವನ್ನು ಮರಳಿ ಪಡೆಯುವ ಭಾರಿ ವಿಶ್ವಾಸ ಹೊಂದಿದೆ. ಹಲವು ಸಮೀಕ್ಷೆಗಳೂ ಬಿಜೆಪಿಗೆ ಅಧಿಕಾರ ಸಿಗಲಿದೆ ಎನ್ನುವ ಭವಿಷ್ಯ ನುಡಿದಿದೆ.

Advertisement

ಬಿಜೆಪಿ ದೊಡ್ಡ ಬದಲಾವಣೆ ಮಾಡುವ ಸಾಹಸಕ್ಕೆ ಮುಂದಾಗಲಿದೆ ಎನ್ನುವ ಮಾತುಗಳು ರಾಷ್ಟ್ರ ರಾಜಕೀಯದಲ್ಲಿ ತೀವ್ರವಾಗಿ ಕೇಳಿಬರುತ್ತಿದ್ದು, ಬಹುಮತ ದೊರೆತು ಅಧಿಕಾರ ಸಿಕ್ಕರೆ  ಮಾಜಿ ಮುಖ್ಯಮಂತ್ರಿ,70 ರ ಹರೆಯದ ವಸುಂಧರಾ ರಾಜೇ ಅವರ ಬದಲಾಗಿ ರಾಜ ಮನೆತನದ ಪರಂಪರೆಯ ದಿಯಾ ಕುಮಾರಿ ಅವರಿಗೆ ಮಹಿಳಾ ಕೋಟಾದ ಅಡಿಯಲ್ಲಿ ಪ್ರಮುಖ ಹುದ್ದೆ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಬಿಜೆಪಿ ಸಂಸದೆಯಾಗಿರುವ 52 ರ ಹರೆಯದ ದಿಯಾ ಅವರು ವಿದ್ಯಾಧರ್‌ನಗರದಿಂದ ಕಣಕ್ಕಿಳಿದಿದ್ದಾರೆ. ಮಹಾರಾಜ ಸವಾಯಿ ಮಾನ್ ಸಿಂಗ್ 2  ಅವರ ಮೊಮ್ಮಗಳಾಗಿ ಬಲವಾದ ರಾಜಕೀಯ ಹಿನ್ನೆಲೆ ಮತ್ತು ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದ್ದಾರೆ.

ಜೈಪುರ ಸಿಟಿ ಪ್ಯಾಲೇಸ್ ಸೇರಿದಂತೆ ಹಲವಾರು ಆಸ್ತಿಗಳು, ವ್ಯವಹಾರಗಳು, ಟ್ರಸ್ಟ್‌ಗಳು ಮತ್ತು ಶಾಲೆಗಳನ್ನು ನಿರ್ವಹಿಸುತ್ತಿರುವ ದಿಯಾ ಬಿಲಿಯನೇರ್. ಜೈಗಢ್ ಫೋರ್ಟ್, ಮಹಾರಾಜ ಸವಾಯಿ ಮಾನ್ ಸಿಂಗ್ 2 ಮ್ಯೂಸಿಯಂ ಟ್ರಸ್ಟ್, ಜೈಪುರ ಮತ್ತು ಜೈಗಢ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, ಅರಮನೆ ಶಾಲೆ ಮತ್ತು ಮಹಾರಾಜ ಸವಾಯಿ ಭವಾನಿ ಸಿಂಗ್ ಶಾಲೆಗಳನ್ನೂ ನಡೆಸುತ್ತಿದ್ದಾರೆ. ಜೈಪುರದ ರಾಜಮಹಲ್ ಅರಮನೆ, ಮೌಂಟ್ ಅಬುನಲ್ಲಿರುವ ಹೋಟೆಲ್ ಜೈಪುರ ಹೌಸ್ ಮತ್ತು ಹೋಟೆಲ್ ಲಾಲ್ ಮಹಲ್ ನ ಮಲಕತ್ವವನ್ನೂ ಹೊಂದಿದ್ದಾರೆ.

ಕುಮಾರಿಯವರ ತಂದೆ, ಜೈಪುರದ ಮಾಜಿ ಪಟ್ಟದ ರಾಜ ದಿವಂಗತ ಭವಾನಿ ಸಿಂಗ್ ಅವರು 1989 ರ ಲೋಕಸಭಾ ಚುನಾವಣೆಯಲ್ಲಿ ಜೈಪುರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು, ಆದರೆ ಬಿಜೆಪಿ ಅಭ್ಯರ್ಥಿ ಎದುರು ಪರಾಭವಗೊಂಡಿದ್ದರು. ಕುಮಾರಿಯವರ ಮಲತಾಯಿ ಮತ್ತು ಜೈಪುರದ ಮಾಜಿ ರಾಣಿ ಗಾಯತ್ರಿ ದೇವಿ ಅವರು 1962, 1967 ಮತ್ತು 1971 ರಲ್ಲಿ ಜೈಪುರ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅವರು ಸ್ವತಂತ್ರ ಪಕ್ಷದ ಟಿಕೆಟ್‌ನಲ್ಲಿ ದಾಖಲೆಯ ಅಂತರದಿಂದ ಈ ಚುನಾವಣೆಗಳನ್ನು ಗೆದ್ದಿದ್ದರು.

Advertisement

ಜೈಪುರದಲ್ಲಿ 2013 ಸೆಪ್ಟೆಂಬರ್ 10 ರಂದು ನಡೆದ ಬೃಹತ್ ರ‍್ಯಾಲಿಯಲ್ಲಿ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಸಮ್ಮುಖದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

2013 ರ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸವಾಯಿ ಮಾಧೋಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು. ವಿರೋಧಿ ಅಲೆಯಿಂದಾಗಿ ಬಿಜೆಪಿ ಸೋತಿದ್ದ 2018 ರ ಚುನಾವಣೆಯಲ್ಲಿ ಸ್ಪರ್ಧಿಸದೇ ಬುದ್ದಿವಂತಿಕೆ ತೋರಿದ್ದರು. 2019 ರಲ್ಲಿ ರಾಜ್‌ಸಮಂದ್‌ನಿಂದ ಲೋಕಸಭೆಗೆ ಆಯ್ಕೆಯಾದರು. 8.58 ಲಕ್ಷ ಮತಗಳನ್ನು ಪಡೆದು, ದಾಖಲೆಯ 5.51 ಲಕ್ಷ ಮತಗಳ ಅಂತರದ ದಿಗ್ವಿಜಯ ಸಾಧಿಸಿದ್ದರು. 2019 ರ ಅಗ್ರ 20 ಗೆಲುವಿನ ಅಂತರಗಳಲ್ಲಿ ಇವರದ್ದೂ ಒಂದಾಗಿದೆ.

”ನಾಯಕತ್ವದ ವಿಚಾರ ಫಲಿತಾಂಶ ಪ್ರಕಟವಾದ ನಂತರ ಪಕ್ಷದ ಸಂಸದೀಯ ಮಂಡಳಿ ಮತ್ತು ಪಕ್ಷದ ಉನ್ನತ ನಾಯಕತ್ವ ನಿರ್ಧರಿಸುತ್ತದೆ.ಪಕ್ಷ ನನಗೆ ಯಾವುದೇ ಕೆಲಸ ನೀಡಿದರೂ, ನಾನು ಯಾವಾಗಲೂ ಅದನ್ನು ಪೂರ್ಣಗೊಳಿಸುತ್ತೇನೆ”ಎಂದು ದಿಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next