Advertisement

ಕರಾವಳಿಯಲ್ಲಿ ಕಂಕಣ ಸೂರ್ಯಗ್ರಹಣ ಶೇ.93 ಗೋಚರ

10:17 AM Dec 28, 2019 | mahesh |

ಮಂಗಳೂರು / ಉಡುಪಿ: ಆಗಸದ ಕೌತುಕವಾದ ಕಂಕಣ ಸೂರ್ಯಗ್ರಹಣವನ್ನು ಗುರುವಾರ ಬೆಳಗ್ಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಕುತೂಹಲ ಮತ್ತು ಉತ್ಸಾಹ ದಿಂದ ವೀಕ್ಷಿಸಿದರು. ಈ ಅಪರೂಪದ ಕಂಕಣ ಸೂರ್ಯಗ್ರಹಣ ಅವಳಿ ಜಿಲ್ಲೆಯಲ್ಲಿ ಶೇ.93ರಷ್ಟು ಗೋಚರಿಸಿದ್ದು, ಇದು ರಾಜ್ಯದಲ್ಲೇ ಅತಿಹೆಚ್ಚು.

Advertisement

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಂಘ ಮತ್ತು ಸಂತ ಆ್ಯಗ್ನೇಸ್‌ ಕಾಲೇಜು ವತಿಯಿಂದ ನಂತೂರು ಪಾದುವ ಪ್ರೌಢಶಾಲೆ ವಠಾರ, ಸಂತ ಅಲೋಶಿಯಸ್‌ ಕಾಲೇಜು ಕೊಡಿಯಾಲಬೈಲು, ಮೂಲ್ಕಿ ವಿಜಯ ಕಾಲೇಜು, ಉಡುಪಿ ಪಿಪಿಸಿ, ಎಂಜಿಎಂ ಕಾಲೇಜು, ಮೂಡುಬಿದಿರೆ ಮಹಾವೀರ ಕಾಲೇಜು, ಪುತ್ತೂರು ಸಂತ ಫಿಲೋಮಿನಾ ಕಾಲೇಜು, ಉಜಿರೆ ಎಸ್‌ಡಿಎಂ ಕಾಲೇಜು, ಮಡಿಕೇರಿ ಎಫ್‌ಎಂ ಕಾರಿಯಪ್ಪ ಕಾಲೇಜು, ಹರಿಪದವು ಪ್ರೌಢಶಾಲಾ ವಠಾರ, ಹೆಜಮಾಡಿ ಸರಕಾರಿ ಪ್ರೌಢಶಾಲಾ ವಠಾರಗಳಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ವೀಕ್ಷಿಸಿದರು.

ಕರಾವಳಿಯ ಸುಮಾರು 158 ಕಿ.ಮೀ. ವ್ಯಾಪ್ತಿಯಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಯಿತು. ಈ ಭಾಗದ ಅಕ್ಕಪಕ್ಕದಲ್ಲಿ ರುವ ಪ್ರದೇಶಗಳಿಗೆ ಇದು ಪಾರ್ಶ್ವ ಸೂರ್ಯ ಗ್ರಹಣವಾಗಿತ್ತು. ಈ ವರ್ಷದಲ್ಲಿ ಇದು ಮೊದಲ ಮತ್ತು ಕೊನೆಯ ಸೂರ್ಯಗ್ರಹಣವಾಗಿದ್ದು, ಹಲವು ವರ್ಷಗಳ ಬಳಿಕ ಸಂಭವಿಸಿದ ಮೊದಲ ಕಂಕಣ ಸೂರ್ಯಗ್ರಹಣ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧಿಕಾರಿಗಳು ತಿಳಿಸಿದರು.

ಪಿನ್‌ಹೋಲ್‌ ಉಪಕರಣ (ಬಿಳಿ ಗೋಡೆ ಅಥವಾ ಪರದೆಯ ಮೇಲೆ ಸೂರ್ಯ ಬಿಂಬದ ವೀಕ್ಷಣೆ), ಸೌರ ಫಿಲ್ಟರ್‌ ಅಳವಡಿಸಿದ ದೂರ ದರ್ಶಕ ಅಥವಾ ಬೈನಾಕ್ಯುಲರ್‌, ಸೌರ ಫಿಲ್ಟರ್‌ ಇಲ್ಲದಿದ್ದಲ್ಲಿ ಪರದೆಯ ಮೇಲೆ ಸೂರ್ಯಬಿಂಬದ ವೀಕ್ಷಣೆ, ಸೋಲಾರ್‌ ಪ್ರೊಜೆಕ್ಷನ್‌ ಸಿಸ್ಟಮ್‌, ಸೌರ ಕನ್ನಡಕಗಳ ಮೂಲಕ ಅಪರೂಪದ ಕಂಕಣ ಸೂರ್ಯಗ್ರಹಣವನ್ನು ಜನ ವೀಕ್ಷಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ. ರಾವ್‌, ಸದಸ್ಯ ಕಾರ್ಯದರ್ಶಿ ಮೇಘನಾ ಮೊದಲಾದವರು ಪಿಲಿಕುಳದಲ್ಲಿ ಗ್ರಹಣ ವೀಕ್ಷಿಸಿದರು. ಪದುವಾ ಹೈಸ್ಕೂಲ್‌ನಲ್ಲಿ ವಿಜ್ಞಾನಿ ಡಾ| ಪ್ರಜ್ವಲ್‌ ಶಾಸ್ತ್ರಿ ಗ್ರಹಣದ ಬಗ್ಗೆ ವಿಶೇಷ ಮಾಹಿತಿ ನೀಡಿದರು. ನಿವೃತ್ತ ಖಗೋಳಶಾಸ್ತ್ರ ಪ್ರಾಧ್ಯಾಪಕ ಪ್ರೊ| ಜಯಂತ್‌ ಉಪಸ್ಥಿತರಿದ್ದರು.

Advertisement

ಕತ್ತಲಿನ ವಾತಾವರಣ
ಗ್ರಹಣ ಸಮೀಪಿಸುತ್ತಿದ್ದಂತೆ ಉಡುಪಿ ಮತ್ತು ಮಂಗಳೂರಿನಲ್ಲಿ ಕತ್ತಲಿನ ವಾತಾವರಣದ ಅನುಭವವಾಯಿತು. ಬೆಳಗ್ಗೆ 9.24ರ ವೇಳೆಗೆ ಸಂಜೆ 6 ಗಂಟೆಯಾದಂತೆ ನಸುಗತ್ತಲಾಗಿತ್ತು.

ಶಾಂತವಾಗಿದ್ದ ಸಮುದ್ರ
ಗ್ರಹಣ ಸಮಯದಲ್ಲಿ ಪಣಂಬೂರು ಬಳಿ ಸಮುದ್ರ ಶಾಂತವಾಗಿತ್ತು. ಗ್ರಹಣ ಮುಕ್ತಾಯ ವಾದ ಬಳಿಕ ಗಾಳಿಯಿಂದಾಗಿ ಕಡಲಬ್ಬರ ಸ್ವಲ್ಪ ಹೆಚ್ಚಿತ್ತು ಎಂದು ಪಣಂಬೂರು ಬೀಚ್‌ ಅಭಿವೃದ್ಧಿ ಯೋಜನೆಯ ಸಿಇಒ ಯತೀಶ್‌ ಬೈಕಂಪಾಡಿ ತಿಳಿಸಿದ್ದಾರೆ. ಕಡಲ ಕಿನಾರೆಯಲ್ಲಿ ಆಯೋಜಿಸಿದ ಗ್ರಹಣ ವೀಕ್ಷಣೆಯಲ್ಲಿ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಜನಜೀವನ ಸ್ತಬ್ಧ
ಗ್ರಹಣದ ವೇಳೆ ಪೇಟೆ ಪಟ್ಟಣಗಳಲ್ಲಿ ಜನ-ವಾಹನ ಸಂಚಾರ ಹೆಚ್ಚು ಕಡಿಮೆ ಸ್ತಬ್ಧ ವಾಗಿತ್ತು. ಗ್ರಹಣ ಹಿನ್ನೆಲೆ ಯಲ್ಲಿ ಕೆಲವು ಕಂಪೆನಿಗಳ ಮಾಲಕರು ಸಿಬಂದಿಗೆ ರಜೆ ಘೋಷಿಸಿದ್ದರು. ಶಾಲೆಗಳಲ್ಲಿ ಮಕ್ಕಳ ಹಾಜರಾತಿಯೂ ವಿರಳವಾಗಿತ್ತು. ಗ್ರಹಣ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.

ಗುರುವಾರ ಬೆಳಗ್ಗೆ ಜಿಲ್ಲೆಯಲ್ಲಿ ಜನ ಸಂಚಾರ ಸ್ತಬ್ಧಗೊಂಡಿದ್ದು, ಉಡುಪಿ, ಮಂಗಳೂರು, ಕುಂದಾಪುರ ಮಾರ್ಗವಾಗಿ ಸಂಚರಿಸುವ ಎಕ್ಸ್‌ ಪ್ರಸ್‌, ಲೋಕಲ್‌ ಬಸ್‌, ಇತರ ವಾಹನಗಳು ಸುಮಾರು 3 ತಾಸು ಸಂಚಾರ ಸ್ಥಗಿತಗೊಳಿಸಿದ್ದವು. ಮುಂಜಾನೆಯಿಂದ ಅಂಗಡಿ, ತರಕಾರಿ ಮಾರುಕಟ್ಟೆ, ಹೋಟೆಲ್‌ಗ‌ಳು ಬಂದ್‌ ಆಗಿದ್ದವು.

ಪ್ರಾಣಿಗಳ ವಿಶೇಷ ವರ್ತನೆ
ಗ್ರಹಣ ಕಾಲದಲ್ಲಿ ಹಕ್ಕಿ, ನಾಯಿ, ದನ ಇತ್ಯಾದಿ ವಿಶೇಷ ವರ್ತನೆ ಪ್ರದರ್ಶಿ ಸಿದ್ದು ವರದಿಯಾಗಿದೆ. ಗಾಳಿ ಬೀಸುವಿಕೆ ಕಡಿಮೆಯಿತ್ತು.

ನಿರಾಸೆ ಮೂಡಿಸಿದ ಕಾಯಿಮಾನಿ
ಮಡಿಕೇರಿ: ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಿಸಲಿದೆ ಎಂಬ ಕಾರಣಕ್ಕೆ ದೇಶದ ಗಮನಸೆಳೆದಿದ್ದ ಕೊಡಗಿನ ಕಾಯಿಮಾನಿಯಲ್ಲಿ ಗುರುವಾರ ಮೋಡ, ಮಂಜು ಕವಿದ ವಾತಾವರಣವಿದ್ದ ಪರಿಣಾಮ ಗ್ರಹಣ ಗೋಚರಿಸಲಿಲ್ಲ.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಗ್ರಹಣ ದೋಷ ಪರಿಹಾರಾರ್ಥ ನಗರದ ಶ್ರೀ ಮಹತೋಭಾರ ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ, ಉಡುಪಿ ಶ್ರೀಕೃಷ್ಣ ಮಠ, ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನ, ಕುಂಭಾಶಿ, ಆನೆಗುಡ್ಡೆ ಗಣಪತಿ ದೇವಸ್ಥಾನಗಳು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಗ್ರಹಣ ಶಾಂತಿ ಹೋಮ ನಡೆಯಿತು. ಕೆಲವು ದೇವಸ್ಥಾನಗಳಲ್ಲಿ ಗ್ರಹಣ ಆರಂಭಕ್ಕೂ ಮುನ್ನ ಬಾಗಿಲು ಮುಚ್ಚಿ, ಗ್ರಹಣ ವಿಮೋಚನೆ ಬಳಿಕ ಬಾಗಿಲು ತೆರೆದು ದೇವಾಲಯ ಆವರಣ ಶುಚಿಗೊಳಿಸಿ ಪೂಜೆ ನೆರವೇರಿಸಲಾಯಿತು. ಸಾವಿರಾರು ಭಕ್ತಾದಿಗಳು ಆಗಮಿಸಿ ಗ್ರಹಣ ದೋಷ ಪರಿಹಾರಾರ್ಥ ಪೂಜೆ ನೆರವೇರಿಸಿದರು. ಗ್ರಹಣದ ಹಿನ್ನೆಲೆಯಲ್ಲಿ ಮಂಗಳೂರಿನ ಬಂದರು ಕೇಂದ್ರ ಜುಮ್ಮಾ ಮಸೀದಿ, ಉಡುಪಿಯ ಜಾಮಿಯಾ ಮಸೀದಿ ಸಹಿತ ವಿವಿಧ ಮಸೀದಿಗಳಲ್ಲಿ ವಿಶೇಷ ನಮಾಜ್‌ ನಡೆಸಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next