ಚೋಳರಾಜ ಕುಲೋತ್ತುಂಗನಿಂದ ಕಿರುಕುಳಕ್ಕೊಳಗಾದ ವಿಶಿಷ್ಟಾದ್ವೆ„ತ ಪಂಥದ ಸ್ಥಾಪಕ ರಾಮಾನುಜಾಚಾರ್ಯರು ಶ್ರೀರಂಗವನ್ನು ತ್ಯಜಿಸಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತೊಣ್ಣೂರು ಎಂಬಲ್ಲಿ ಹಲಕಾಲ ನೆಲೆಸಿದ್ದರು. ಅವರೆಷ್ಟು ಕಾಲ ಇಲ್ಲಿದ್ದರೆಂಬುದರ ಮಾಹಿತಿ ಸರಿಯಾಗಿ ದೊರೆಯದಿದ್ದರೂ, ಇತಿಹಾಸ ಪ್ರವೀಣರು ಹಲವಾರು ವರ್ಷಗಳೆಂದೇ ಹೇಳುತ್ತಾರೆ. ಜೈನದೊರೆ ಬಿಟ್ಟಿದೇವನು ರಾಮಾನುಜಾಚಾರ್ಯರ ಪ್ರಭಾವಕ್ಕೊಳಗಾಗಿ ವೈಷ್ಣವನಾದ. ವಿಷ್ಣುವರ್ಧನನೆಂಬ ನಾಮಧೇಯನಾದ. ತೊಣ್ಣೂರು ಹೊಯ್ಸಳರ ಎರಡನೆಯ ರಾಜಧಾನಿಯಾಯಿತು.
ಇಲ್ಲಿರುವ ಪುರಾತನ ದೇವಾಲಯಗಳು ಪ್ರಯಾಣಿಕರ ಮನ ಸೆಳೆಯುತ್ತವೆ. ನಂಬಿ ನಾರಾಯಣ ಸ್ವಾಮಿ ಹಾಗೂ ವೇಣುಗೋಪಾಲಸ್ವಾಮಿ ದೇವಸ್ಥಾನಗಳು ಪ್ರಸಿದ್ಧವಾದವು. ನಂಬಿ ನಾರಾಯಣ ಎನ್ನುವ ಹೆಸರು ಏಕೆ ಬಂತು? ನಂಬಿ ಎಂಬ ಭಕ್ತನಿಗೆ ನಾರಾಯಣ ಒಲಿದ ಎಂಬುದು ಒಂದು ನಂಬಿಕೆಯಾದರೆ, ಲಕ್ಷ್ಮೀನಾರಾಯಣನನ್ನು ನಂಬಿದವರಿಗೆ ಸರ್ವಾರ್ಥಸಿದ್ಧಿಯಾಗುತ್ತದೆಂಬುದು ಇನ್ನೊಂದು ಪ್ರತೀತಿ. ಕ್ರಿ. ಶ. ಹನ್ನೆರಡನೆಯ ಶತಮಾನದಲ್ಲಿ ವಿಷ್ಣುವರ್ಧನನು ಚೋಳರ ಮೇಲೆ ವಿಜಯ ಸಾಧಿಸಿದ್ದರ ಸ್ಮರಣಾರ್ಥ ಈ ದೇಗುಲದ ನಿರ್ಮಾಣವಾಯಿತಂತೆ. ಸುರಗಿ ನಾಗಯ್ಯ ಎಂಬ ವಿಷ್ಣುವರ್ಧನನ ಆಸ್ಥಾನಿಕ ಇದರ ನಿರ್ಮಾಪಕ. ನವರಂಗ, ಮಹಾ ರಂಗಮಂಟಪ, ಅರ್ಧಮಂಟಪ, ಸುಕನಾಸಿ, ಗರ್ಭಗೃಹ ಹಾಗೂ ದೊಡ್ಡ ಪಾತಾಳಂಕಣಗಳನ್ನು ಹೊಂದಿರುವ ಈ ಪೂಜಾಸ್ಥಳ ಆಕರ್ಷಣೀಯವಾಗಿದೆ. ಹೊಯ್ಸಳ ಕಾಲದ ರಚನೆಯಾದರೂ ಚೋಳ ಶೈಲಿಯಲ್ಲಿ ಇದೆಯೆನ್ನುತ್ತಾರೆ, ಇತಿಹಾಸತಜ್ಞರು.
ಒಂಬತ್ತು ಅಡಿ ಎತ್ತರದ ನಾರಾಯಣಸ್ವಾಮಿ ಈ ದೇವಳದ ಪ್ರಧಾನ ಮೂರ್ತಿ. ಇದರ ಬಲ ಬದಿಯಲ್ಲಿ ಲಕ್ಷ್ಮಿಯ ಮೂರ್ತಿ ಇದೆ. ಗದೆ, ಪದ್ಮಗಳು ಕೈಗಳಲ್ಲಿವೆ. ಬೇರೆ ದೇವಸ್ಥಾನಗಳಿಗೆ ಹೋಲಿಸಿದರೆ ಇಲ್ಲಿ ಗದಾಪದ್ಮಗಳ ಸ್ಥಾನ ಪಲ್ಲಟಗೊಂಡಿವೆ. ಶ್ರೀದೇವಿ ಹಾಗೂ ಭೂದೇವಿಯರೂ ಬಲ ಹಾಗೂ ಎಡ ಪಕ್ಕಗಳಲ್ಲಿ ಆಸೀನರಾಗಿದ್ದಾರೆ. ನಾರಾಯಣಸ್ವಾಮಿ, ಶ್ರೀದೇವಿ, ಭೂದೇವಿಯರ ವಿಗ್ರಹಗಳು ಒಂದೇ ಕಲ್ಲಿನಿಂದ ಕೆತ್ತಿದವುಗಳಾಗಿವೆ. ನವರಂಗದಲ್ಲಿರುವ ಕಂಬಗಳಲ್ಲಿ ಆಕರ್ಷಕ ಕೆತ್ತನೆಗಳಿವೆ. ಮಹಾರಂಗಮಂಟಪದಲ್ಲಿ 50 ಕಂಬಗಳು, ಪಾತಾಳಂಕಣದಲ್ಲಿ 40 ಕಂಬಗಳಿವೆ. 45 ಅಡಿ ಎತ್ತರದ ಗರುಡಗಂಬ ದೇವಳದ ಎದುರುಗಡೆ ಇದೆ. ದೇವಸ್ಥಾನದ ಒಳಗೆ ಉದ್ದಂಡ ನಮಸ್ಕಾರ ಮಾಡದಂತೆ ಅರ್ಚಕರು ನಮ್ಮನ್ನು ತಡೆದರು. ನಮ್ಮ ಕಾಲುಗಳು ಗರುಡಗಂಬದ ಕಡೆಗಿರುವುದರಿಂದ ಅದರ ಹೊರಗಡೆಯೇ ನಮಸ್ಕರಿಸಬೇಕೆಂದು ವಿನಮ್ರವಾಗಿ ವಿನಂತಿಸಿದರು.
ಒಳ ಹೋಗುತ್ತಿದ್ದಂತೆಯೇ ಎರಡೂ ಬದಿಗಳಲ್ಲಿ ಚೆನ್ನಾಗಿ ಬೆಳೆಸಿರುವ ಹುಲ್ಲುಹಾಸು, ಹಾಗೂ ದೇವಸ್ಥಾನದ ಮುಖ್ಯದ್ವಾರ ಕಣ್ಣಿಗೆ ತಂಪೆರೆಯುತ್ತವೆ. ಇದರ ಎದುರೇ ವೇಣುಗೋಪಾಲಸ್ವಾಮಿ ದೇವಸ್ಥಾನ. ನಾವು ಹೋದಾಗ ತೆರೆದಿರಲಿಲ್ಲ. ಆದರೂ ಪ್ರಾಕಾರದಲ್ಲಿದ್ದ ಒಂದು ಕಿಂಡಿಯ ಮೂಲಕ ಮೊಬೈಲ್ ಫೋನಿನಿಂದ ಒಂದು ಫೋಟೋ ಹೊಡೆದುಕೊಳ್ಳುವುದರಲ್ಲಿ ಸಫಲಳಾದೆ. ದೇವಳದ ಹೊರಗೆ ಕಲ್ಲಿನ ಕಮಾನ್ ಒಂದು ಮನಸೆಳೆಯಿತು. ವಿಶೇಷ ಸಂದರ್ಭಗಳಲ್ಲಿ ದೇವರ ಮೂರ್ತಿಗಳನ್ನು ತೂಗಲು ಬಳಸುತ್ತಿದ್ದ ಕಮಾನು ಇದಾಗಿರಬಹುದೆ? ನಂಬಿ ನಾರಾಯಣ ದೇವಸ್ಥಾನದ ಹಿಂಭಾಗದಲ್ಲಿ ಚಿಕ್ಕದಾದ ಯೋಗನರಸಿಂಹ ದೇವಸ್ಥಾನ ಇದೆ.
ತೊಣ್ಣೂರು ಕೆರೆಯ ಬಳಿ ಸಾಗುತ್ತಿದ್ದಂತೆ ರಸ್ತೆಯ ಎಡಬದಿಯಲ್ಲಿ ಪುಟ್ಟ ಕೆರೆಯೊಂದರ ಮಗ್ಗುಲಲ್ಲಿ ಬೃಹದ್ಗಾತ್ರದ ರಾಮಾನುಜಾಚಾರ್ಯರ ಪ್ರತಿಮೆ ಕಾಣಿಸಿತು. ಮುಂದೆ ಸ್ವಲ್ಪ ಮೇಲೇರಿ ವಾಹನ ನಿಲ್ಲಿಸಿದಾಗ ತೊಣ್ಣೂರು ಕೆರೆ ನೀರು ತುಂಬಿಕೊಂಡು ಸುಂದರವಾಗಿ ಕಾಣಿಸುತ್ತಿತ್ತು. ಇದಕ್ಕೆ ಯಾದವ ಸಮುದ್ರ ಅಥವಾ ತಿರುಮಲ ಸಮುದ್ರ ಎಂಬ ಹೆಸರುಗಳೂ ಇವೆ.
ಹೋಗುವುದು ಹೇಗೆ?
ನಾವು ಕಲ್ಲಹಳ್ಳಿಯಿಂದ ಬೂಕನಕೆರೆ , ಚಿನಕುರುಳಿ ಮಾರ್ಗವಾಗಿ ಹೋಗಿದ್ದೆವು. ತಿರುಗಿ ಬರುತ್ತ ಮೇಲುಕೋಟೆ, ಮಂಡ್ಯ ದಾರಿಯಾಗಿ ಬೆಂಗಳೂರು ಕಡೆ ಬಂದೆವು. ಪಾಂಡವಪುರದಿಂದ 10-11 ಕಿ. ಮೀ. ದೂರದಲ್ಲಿದೆ.
ಉಮಾಮಹೇಶ್ವರಿ ಎನ್.