ಬೆಂಗಳೂರು: ಅಂತರ್‌ರಾಜ್ಯ ನಟೋರಿಯಸ್ ಕಳ್ಳ ಮುರುಗನ್ ಅಲಿಯಾಸ್ ಬಾಲಮುರುಗನ್ ನಗರದಲ್ಲಿ ಎಸಗಿರುವ ಮನೆಕಳವು ಕೃತ್ಯಗಳನ್ನು ಜಾಲಾಡುತ್ತಿರುವ ಮೈಕೋಲೇಔಟ್ ಉಪ ವಿಭಾಗದ ಪೊಲೀಸರು,ಆತ ನಗರದಲ್ಲಿ ಕದ್ದು ತಿರುಚ್ಚಿಯ ನದಿ ತಟದ ಪೊದೆಯಲ್ಲಿ ಬಚ್ಚಿಟ್ಟಿದ್ದ 12 ಕೆ.ಜಿ ಚಿನ್ನ, ವಜ್ರ, ಪ್ಲಾಟಿನಂ ಆಭರಣಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ತಿರುಚನಾಪಳ್ಳಿಯ ಲಲಿತಾ ಜ್ಯುವೆಲರಿ ಮಳಿಗೆಯಲ್ಲಿ ನಾಯಿ ಹಾಗೂ ಬೆಕ್ಕಿನ ಮುಖವಾಡ ಧರಿಸಿ ಚಿನ್ನಾಭರಣ ದೋಚಿದ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಮುರುಗನ್ ಇತ್ತೀಚೆಗೆ ನಗರದ ನ್ಯಾಯಾಲಯದಲ್ಲಿ ಶರಣಾಗಿದ್ದ. ಆತನನ್ನು ನ್ಯಾಯಾಲಯದ ಅನುಮತಿ ಪಡೆದು ವಶಕ್ಕೆ ಪಡೆದು ಆತ ಎಸಗಿರುವ ಕಳವು ಕೃತ್ಯಗಳ ತನಿಖೆಯನ್ನು ಮೈಕೋಲೇಔಟ್ ವಿಭಾಗ ಪೊಲೀಸರು ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಆರೋಪಿ ಮುರುಗನ್ ಎಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿ ಸೇರಿದಂತೆ ಹಲವು ಕಡೆ ನಡೆಸಿದ ಚಿನ್ನಾಭರಣ ಕಳವು ಕೃತ್ಯಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆತ ನೀಡಿದ ಮಾಹಿತಿ ಆಧರಿಸಿ ತಿರುಚ್ಚಿಯ ಸಮೀಪ ಕಾವೇರಿ ನದಿ ಹರಿಯುವ ತಟದಲ್ಲಿನ ಪೊದೆಯೊಂದರಲ್ಲಿ ಭೂಮಿ ಅಗೆದು ಬಚ್ಚಿಟ್ಟಿದ್ದ ಐದು ಕೋಟಿ ರೂ. ಮೌಲ್ಯದ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮುರುಗನ್ 2015ರಲ್ಲಿ ಬಾಣಸವಾಡಿಯಲ್ಲಿ ನಡೆದ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಆದರೆ, ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಇನ್ನೂ ಹಲವು ಕಡೆ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮುರುಗನ್ ಮುಟ್ಟಿದ್ದೆಲ್ಲ ಚಿನ್ನ!: ಸರಿಸುಮಾರು 20 ವರ್ಷಗಳಿಂದ ಮುರುಗನ್ ಕಳವು ಕೃತ್ಯಗಳನ್ನೇ ಕಸುಬು ಮಾಡಿಕೊಂಡಿದ್ದಾನೆ. ಇದಕ್ಕಾಗಿ ಒಂದು ತಂಡವನ್ನೇ ಕಟ್ಟಿಕೊಂಡಿದ್ದಾನೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮೂರು ರಾಜ್ಯಗಳಲ್ಲಿ ಈತನ ಕೃತ್ಯದ ಜಾಲವಿದೆ. ಆಂಧ್ರದಲ್ಲಿ ಐದು ಬ್ಯಾಂಕ್‌ಗಳಲ್ಲಿ ಚಿನ್ನಾಭರಣ ದೋಚಿದ್ದಾನೆ.
ವಿಶೇಷ ಎಂದರೆ ಮುರುಗನ್ ಕಳ್ಳತನ ಮಾಡಿದ ಮನೆಗಳಲ್ಲಿ ಕನಿಷ್ಟ ಒಂದು ಕೆ.ಜಿ ಚಿನ್ನಾಭರಣಗಳು ಸಿಗುತ್ತಿದ್ದವು. ತನ್ನ ತಂಡದ ಜತೆಗೆ ಕೆ.ಜಿಗಟ್ಟಲೆ ಚಿನ್ನಾಭರಣ ದೋಚುತ್ತಿದ್ದ ಮುರುಗನ್ ಬಹುತೇಕ, ಶೋಕಿ ಜೀವನ ನಡೆಸಲು ಖರ್ಚು ಮಾಡಿದ್ದಾನೆ. ಯಾವುದೇ ರಾಜ್ಯದ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದರೂ ಜಾಮೀನಿನ ಆಧಾರದಲ್ಲಿ ಹೊರಗಡೆ ಬಂದು ಪುನಃ ಕಳ್ಳತನ ಶುರುಮಾಡುತ್ತಿದ್ದ ಎಂದು ಅಧಿಕಾರಿಯೊಬ್ಬರು ಹೇಳಿದರು.
ಕೆಲ ದಿನಗಳ ಹಿಂದೆ ಲಲಿತಾ ಜ್ಯುವೆಲರಿ ಮಳಿಗೆಯಲ್ಲಿ ನಡೆದ 13ಕೋಟಿ ರೂ.ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣದಲ್ಲಿ ಆತನನ್ನು ತಿರುಚ್ಚಿ ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ನಮ್ಮಲ್ಲಿನ ಪ್ರಕರಣಗಳ ತನಿಖೆ ಪೂರ್ಣಗೊಂಡ ಬಳಿಕ ನ್ಯಾಯಾಲಯಕ್ಕೆ ಆರೋಪಿಯನ್ನು ಒಪ್ಪಿಸುತ್ತೇವೆ. ಬಳಿಕ ಅವರು ರಿಮಾಂಡ್ ಅರ್ಜಿ ಹಾಕಲಿದ್ದಾರೆ ಎಂದು ಅಧಿಕಾರಿ ಹೇಳಿದರು.