ಕೊಪ್ಪಳ: ತುಂಗಭದ್ರಾ ಡ್ಯಾಂನ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್ ಕಿತ್ತು ಗುರುವಾರಕ್ಕೆ ಮೂರು ದಿನಗಳಾದರೂ ತಜ್ಞರ ತಂಡವು ಹಗಲು-ರಾತ್ರಿ ಎನ್ನದೇ ನಿರಂತರ ಕಾರ್ಯಾಚರಣೆ ನಡೆಸಿದೆ. ಡ್ಯಾಂಗೆ ರಾಜ್ಯ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ
ಲಕ್ಷ್ಮಿನಾರಾಯಣ ಭೇಟಿ ನೀಡಿ ತಜ್ಞರ ಜೊತೆ ಸಮಾಲೋಚನೆ ನಡೆಸಿದರು. ನೀರಾವರಿ ನಿಗಮದ ಎಂಡಿ ಮಲ್ಲಿಕಾರ್ಜುನ ಗುಂಗೆ ಅವರು ಎರಡು ದಿನದಿಂದ ಡ್ಯಾಂ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ. ನಿರಂತರ ಕಾರ್ಯಾಚರಣೆಗೆ ವಿವಿಧ ಯೋಜನೆ ರೂಪಿಸಿದ್ದಾರೆ. ಆದರೆ ಮೊದಲ ದಿನದಿಂದ ನಡೆದ ಕಾರ್ಯಾಚರಣೆಯಲ್ಲಿ ಶೇ. 10ರಷ್ಟು ಪ್ರಗತಿ ಕಾಣಲಾಗಿಲ್ಲ.
ವಿವಿಧ ವಿಧಾನಗಳು ವಿಫಲವಾಗುತ್ತಿದ್ದರಿಂದ ತಜ್ಞರಲ್ಲೂ ತುಂಬ ಆತಂಕ ಮೂಡುತ್ತಿದೆ. ಇಲ್ಲಿನ ಸ್ಥಿತಿ ತಿಳಿಯಲು ರಾಜ್ಯ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಪೇಶ್ವೆ ಅವರು ಭೇಟಿ ನೀಡಿ ತಜ್ಞರ ಜೊತೆ ಸಮಾಲೋಚನೆ ನಡೆಸಿ ಮುಂದಿನ ಕಾರ್ಯ ಯೋಜನೆ ಕುರಿತು ಚರ್ಚೆ ನಡೆಸಿದ್ದಾರೆ.
ನೀರು ಹರಿಯುವ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಪಂಪಾವನವು ನೀರಿನಲ್ಲಿ ನೆನೆಯುತ್ತಿದೆ. ಉದ್ಯಾನವನದಲ್ಲಿ ಸಂಗ್ರಹವಾಗುವ ನೀರನ್ನು ನದಿ ಪಾತ್ರಕ್ಕೆ ಹರಿ ಬಿಡಲಾಗುತ್ತಿದೆ. ನೀರು ನಿರಂತರ ಹರಿಯುವುದರಿಂದ ತಾಲೂಕಿನ ಮುನಿರಾಬಾದ್ ಗ್ರಾಮದ ಜನರು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಈಗಾಗಲೇ 110 ಮನೆಗಳಿಗೆ ಡ್ಯಾಂ ನೀರು ನುಗ್ಗಿದ್ದರಿಂದ 650 ಜನರನ್ನು ವಿವಿಧೆಡೆ ಸ್ಥಳಾಂತರಿಸಲಾಗಿದೆ.
ಸ್ಥಳಕ್ಕೆ ಕರಡಿ, ಹಿಟ್ನಾಳ ಭೇಟಿ: ಡ್ಯಾಂ ಗೇಟ್ ದುರಸ್ತಿ ಕಾರ್ಯ ಮೂರು ದಿನಗಳಿಂದ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಸಂಸದ ಸಂಗಣ್ಣ ಕರಡಿ ಅವರಿಗೂ ತೆಲೆ ಬಿಸಿಯಾಗಿದೆ. ಇದರಿಂದ ಎಡದಂಡೆ ಮುಖ್ಯ ಕಾಲುವೆಗೆ ನೀರು ಇಲ್ಲದಂತಾಗಿದೆ. ರೈತರಿಗೆ ನೀರು ಹರಿಸದಿದ್ದರೆ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ನೀರು ಹರಿಸಿದರೆ, ಒಂದೆಡೆ ಬೋಂಗಾ ಬಿದ್ದು ತೊಂದರೆ ಎದುರಾಗಿದೆ. ಆದಷ್ಟು ಬೇಗ ಡ್ಯಾಂನ ಗೇಟ್ ದುರಸ್ತಿ ಮಾಡಿಸಬೇಕು. ಇಲ್ಲವೇ ನೀರು ಹರಿದು ಹೋಗುವುದನ್ನು ತಡೆಯಬೇಕು ಎನ್ನುವ ಆಲೋಚನೆಯಲ್ಲೇ ಕಾಲ ಕಳೆಯುತ್ತಿದ್ದು ಸ್ಥಳಕ್ಕೆ ಭೇಟಿ ನೀಡಿ ತಜ್ಞರ ಜೊತೆ ಸಂಪರ್ಕದಲ್ಲಿದ್ದಾರೆ. ಇನ್ನೂ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಸೇರಿ ಜನಾರ್ದನ ಹುಲಿಗಿ ಸ್ಥಳದಲ್ಲೇ ಕಾರ್ಯಾಚರಣೆಗೆ ಸಹಕಾರ ನೀಡುತ್ತಿದ್ದಾರೆ.