Advertisement

Keladi: 24 ರಂದು ಕೆಳದಿಯ ಐತಿಹಾಸಿಕ ಪಚ್ಚೆಲಿಂಗ ದರ್ಶನ

05:50 PM Oct 16, 2023 | Pranav MS |

ಸಾಗರ: ಐತಿಹಾಸಿಕವಾದ ಪಚ್ಚೆಲಿಂಗವು ಅ. 24 ರಂದು ಬೆಳಿಗ್ಗೆ 9ರಿಂದ ಸಂಜೆ 6 ರವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತಿದ್ದು ಭಕ್ತಾದಿಗಳು ಪಚ್ಚೆಲಿಂಗ ದರ್ಶನದ ಮೂಲಕ ತಮ್ಮ ಸಂಕಷ್ಟಗಳಿಂದ ಪಾರಾಗಬೇಕು ಎಂದು ಕೆಳದಿ ರಾಜಗುರು ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

Advertisement

ತಾಲೂಕಿನ ಕೆಳದಿ ಬಂದಗದ್ದೆ ರಾಜಗುರು ಹಿರೇಮಠದಲ್ಲಿ ಸೋಮವಾರ ನವರಾತ್ರಿ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, ಕೆಳದಿ ಅರಸರು ಪಚ್ಚೆಲಿಂಗವನ್ನು ಕೆಳದಿ ರಾಜಗುರು ಹಿರೇಮಠಕ್ಕೆ ಕೊಡುಗೆಯಾಗಿ ನೀಡಿದ್ದು ಅದನ್ನು ಪ್ರತಿವರ್ಷ ವಿಜಯದಶಮಿಯಂದು ಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ನವರಾತ್ರಿ ಪ್ರಯುಕ್ತ ಶ್ರೀಮಠದಲ್ಲಿ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ೨೨ರಂದು ಲಿಂಗೈಕ್ಯ ಡಾ. ಗುರುಸಿದ್ದದೇವ ಶಿವಾಚಾರ್ಯ ಸ್ವಾಮಿಗಳ 14 ನೇ ವರ್ಷದ ಪುಣ್ಯಾರಾಧನೆ ಹಾಗೂ ಶ್ರೀಮಠದ ಚೌಡೇಶ್ವರಿ ಮಾತೆಗೆ ಉಡಿ ತುಂಬುವ ಕಾರ್ಯಕ್ರಮ ಇರುತ್ತದೆ. ಶ್ರೀದೇವಿಗೆ ಉಡಿ ತುಂಬದ 18 ದ್ರವ್ಯಾದಿಧಾನ್ಯಗಳನ್ನು ಒಳಗೊಂಡ ಎರಡು ಸಾವಿರಕ್ಕೂ ಹೆಚ್ಚಿನ ಉಡಿಯನ್ನು ಭಕ್ತಾದಿಗಳಿಗೆ ವಿತರಣೆ ಮಾಡಿ ಆಶೀರ್ವಾದ ಮಾಡಲಾಗುತ್ತದೆ. 23 ರಂದು ಸಂಜೆ 6:30 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
23 ರಂದು ಆಯುಧ ಪೂಜೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 24 ರಂದು ಪಚ್ಚೆಲಿಂಗ ದರ್ಶನದ ಜೊತೆಗೆ ಮಧ್ಯಾಹ್ನ 2 ಕ್ಕೆ ಭಾವೈಕ್ಯ ಧರ್ಮ ಸಮ್ಮೇಳನ ಏರ್ಪಡಿಸಲಾಗಿದ್ದು, ಈ ಸಮ್ಮೇಳನದಲ್ಲಿ ವಿವಿಧ ಮಠಾಧೀಶರು, ಸಚಿವರು, ಸಂಸದರು, ಶಾಸಕರು, ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ. ನಂತರ ಮಠದ ಸಂಪ್ರದಾಯದಂತೆ ಹಳೆಮಠದಿಂದ ಶ್ರೀಗಳನ್ನು ಹೊತ್ತ ಪಲ್ಲಕ್ಕಿ ಉತ್ಸವವನ್ನು ನಡೆಯಲಿದೆ.

ನಂತರ ಬನ್ನಿ ಮುರಿಯುವ ಸೀಮೋಲ್ಲಂಘನೆ ಕಾರ್ಯಕ್ರಮ ನಡೆಯಲಿದೆ. ಶ್ರೀಮಠದಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ, ಪಚ್ಚೆಲಿಂಗ ದರ್ಶನಕ್ಕೆ ಸ್ಥಳೀಯ ಭಕ್ತರ ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ಬರುತ್ತಾರೆ. ಶ್ರೀಮಠದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶ್ರೀಗಳು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರ ನಾಂದೇಡ ಮಠದ ಶ್ರೀ ನೀಲಕಂಠ ಲಿಂಗ ಶಿವಾಚಾರ್ಯ ಸ್ವಾಮಿಗಳು, ಉತ್ಸವ ಸಮಿತಿಯ ಅನಿಲ್ ಕುಮಾರ್ ಬರದವಳ್ಳಿ, ವಿರೂಪಾಕ್ಷ ಸಾಗರ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next