ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮನ್‌ಕೀ ಬಾತ್‌ನಲ್ಲಿ ನೀಡಿದ ಸಲಹೆಯಂತೆ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರತಿ ಭಾನುವಾರ ವಾರದ ರಜೆ ಮಾಡಲು ರಾಜ್ಯ ಪೆಟ್ರೋಲಿಯಂ ಡೀಲರ್ಸ್ ಸಂಘ ನಿರ್ಧರಿಸಿದೆ. ಇದರ ಪರಿಣಾಮ ಭಾನುವಾರದಂದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ ಗ್ರಾಹಕರಿಗೆ ಲಭ್ಯವಿರುವುದಿಲ್ಲ.
ಇದಿಷ್ಟೇ ಅಲ್ಲ, ಇದೇ ತಿಂಗಳ 14 ರಿಂದ ಪೆಟ್ರೋಲ್ ಬಂಕ್‌ಗಳು ಪ್ರತಿ ದಿನ ಬೆ. 9 ರಿಂದ ಸಂಜೆ 6ರವರೆಗೆ ಮಾತ್ರ ಕಾರ್ಯ ನಿರ್ವಹಿಸಲಿವೆ. ಇಂಧನ ಉಳಿತಾಯದ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಮಿತವ್ಯಯಿಗಳಾಗುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂಥ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಭಾನುವಾರದ ರಜೆಯ ಜೊತೆಗೆ ಇನ್ನು ಮುಂದೆ ಸರ್ಕಾರಿ ಕಚೇರಿಗಳ ಸಮಯದಂತೆ ಪೆಟ್ರೋಲ್ ಬಂಕ್‌ಗಳು ಕಾರ್ಯನಿ ರ್ವಹಿಸಲಿವೆ ಎಂದು ರಾಜ್ಯ ಪೆಟ್ರೋಲ್ ಡೀಲರ್ಸ್ ಸಂಘದ ಅಧ್ಯಕ್ಷ ರವೀಂದ್ರನಾಥ್ ತಿಳಿಸಿದ್ದಾರೆ.ಈ ತಿಂಗಳ 14ರಿಂದ ಪೆಟ್ರೋಲ್ ಬಂಕ್‌ಗಳು ಕೇವಲ ಒಂದು ಪಾಳಿಯಲ್ಲಿ ಮಾತ್ರ ತೆರೆದಿರುತ್ತವೆ. ಅಂದರೆ ಪ್ರತಿದಿನ 9 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಲಿದ್ದು ಸಿಬ್ಬಂದಿ ಸಹ ಒಂದೇ ಪಾಳಿ ಕೆಲಸ ಮಾಡಲಿದ್ದಾರೆ.
ಪೆಟ್ರೋಲ್ ಬಂಕ್ ಮಾಲೀಕರಿಗೆ ಅನುಕೂಲ ಕಲ್ಪಿಸುವ ಸಂಬಂಧ ಅಪೂರ್ವಚಂದ್ರ ಕಮಿಟಿ ವರದಿಯ ಶಿಫಾರಸ್ಸುಗಳನ್ನು ಜಾರಿಗೊಳಿಸುವುದಾಗಿ ಆಯಿಲ್ ಕಂಪೆನಿಗಳು ಈ ಹಿಂದೆ ಭರವಸೆ ಕೊಟ್ಟಿದ್ದವು. ಆದರೆ ಇದುವರೆಗೂ ಬೇಡಿಕೆ ಈಡೇರದ ಕಾರಣ ಪೆಟ್ರೋಲ್ ಬಂಕ್ ಕೆಲಸದ ಅವಧಿಯನ್ನು ಒಂದು ಪಾಳಿಗೆ ಸೀಮಿತಗೊಳಿಸಲಾಗುತ್ತಿದೆ ಎಂದೂ ರವಿಂದ್ರನಾಥ್ ತಿಳಿಸಿದ್ಧಾರೆ.