Advertisement

ಪಾಕ್‌ ಜತೆಗಿನ ವ್ಯಾಪಾರ ಮಾರ್ಗ ಮುಚ್ಚಬೇಡಿ

05:50 AM Jul 30, 2017 | Karthik A |

– ಕೇಂದ್ರಕ್ಕೆ ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಆಗ್ರಹ

Advertisement

ಹೊಸದಿಲ್ಲಿ: ‘ಗಡಿ ನಿಯಂತ್ರಣ ರೇಖೆಯ ನಡುವೆ ನಡೆಯುತ್ತಿರುವ ವ್ಯಾಪಾರ, ವಹಿವಾಟನ್ನು ನಿಲ್ಲಿಸಲು ನಾವು ಅವಕಾಶ ಕೊಡುವುದಿಲ್ಲ. ಅಷ್ಟೇ ಅಲ್ಲ, ಪಾಕ್‌ ಆಕ್ರಮಿತ ಕಾಶ್ಮೀರದ ಜೊತೆಗೆ ಎಲ್‌ಒಸಿಯುದ್ದಕ್ಕೂ ಇನ್ನಷ್ಟು ಮಾರ್ಗಗಳನ್ನು ನಿರ್ಮಿಸುವಲ್ಲಿ ಶ್ರಮಿಸುತ್ತೇವೆ.’ ಹೀಗೆಂದು ಹೇಳಿರುವುದು ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ. ಪಿಡಿಪಿ 18ನೇ ವರ್ಷದ ಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಮೆಹಬೂಬಾ, ‘ವಾಘಾ ಗಡಿಯಿಂದ ಚರಸ್‌, ಗಾಂಜಾದಂಥ ಅಮಲು ಪದಾರ್ಥಗಳ ಸಾಗಣೆ ನಡೆಯುತ್ತಿದೆ ನಿಜ. ಹಾಗಂತ ಆ ಮಾರ್ಗವನ್ನು ಮುಚ್ಚಲು ಸಾಧ್ಯವಿಲ್ಲ. ಶ್ರೀನಗರ-ಮುಜಾಫ‌ರಾಬಾದ್‌ ರಸ್ತೆಯಲ್ಲೂ ಇಂಥ ಅಕ್ರಮ ನಡೆಯುತ್ತಿದೆ ಎಂದು ನಾವು ಈ ರಸ್ತೆಯನ್ನು ಮುಚ್ಚುತ್ತೇವಾ?’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಭಾರತ- ಪಾಕ್‌ ನಡುವೆ ವ್ಯಾಪಾರ, ದ್ವಿಪಕ್ಷೀಯ ಸಂಬಂಧಗಳನ್ನು ಬೆಸೆಯುವಂಥ ಲಾಹೋರ್‌ ಒಪ್ಪಂದವನ್ನು ಮರುಸ್ಥಾಪಿಸಬೇಕು ಎಂದೂ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಭಾರತ ಮತ್ತು ಪಾಕ್‌ ನಡುವಣ ವ್ಯಾಪಾರ ಮಾರ್ಗವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಜಮ್ಮು-ಕಾಶ್ಮೀರದ ಜನತೆ ನೆಮ್ಮದಿ ಯಿಂದ ಬದುಕಬೇಕೆಂದರೆ ಲಾಹೋರ್‌ ಒಪ್ಪಂದ ಪುನರೂರ್ಜಿತಗೊಳ್ಳಬೇಕು ಎಂದಿದ್ದಾರೆ.

ನನಗೆ ಇಂಡಿಯಾ ಅಂದ್ರೆ ಇಂದಿರಾ: ಇದೇ ವೇಳೆ, “ಪ್ರಧಾನಿ ಮೋದಿ ಅವರು ಈ ಕ್ಷಣದ ವ್ಯಕ್ತಿ. ಅವರು ಇತಿಹಾಸದ ಪುರುಷನಾಗಿಯೂ ಹೆಸರು ಗಳಿಸಬಹುದು. ಆದರೆ, ನನಗೆ ‘ಇಂಡಿಯಾ ಎಂದರೆ ಇಂದಿರಾ ಗಾಂಧಿ.’ ನಾನು ಬೆಳೆಯುತ್ತಿದ್ದ ಸಂದರ್ಭದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದದ್ದು ಇಂದಿರಾ. ಕೆಲವರಿಗೆ ನನ್ನ ಮಾತು ರುಚಿಸಲಿಕ್ಕಿಲ್ಲ. ಆದರೆ, ನನದಂತೂ ಭಾರತವೆಂದರೆ ಇಂದಿರಾ ಗಾಂಧಿ’ ಎಂದೂ ಹೇಳಿದ್ದಾರೆ ಮೆಹಬೂಬಾ.

ಪಿಡಿಪಿ-ಬಿಜೆಪಿ ಭಿನ್ನಮತ: ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನಕ್ಕೆ ಧಕ್ಕೆ ತಂದರೆ, ಕಣಿವೆ ರಾಜ್ಯದಲ್ಲಿ ತ್ರಿವರ್ಣ ಧ್ವಜವನ್ನು ಹೆಗಲಿಗೇರಿಸಲು ಒಬ್ಬರೂ ಇರುವುದಿಲ್ಲ ಎಂಬ ಸಿಎಂ ಮೆಹಬೂಬಾ ಮುಫ್ತಿ ಅವರ ಹೇಳಿಕೆ ಇದೀಗ ಪಿಡಿಪಿ-ಬಿಜೆಪಿ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಮೆಹಬೂಬಾ ಅವರ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, “370ನೇ ವಿಧಿಯನ್ನು ದೇಶದ ಸಂವಿಧಾನದಲ್ಲಿ ಸೇರಿಸಿದ್ದು ತಾತ್ಕಾಲಿಕ ನಿಬಂಧನೆಯಷ್ಟೆ. ಅದೇನೂ ಸ್ಪರ್ಶಿಸಲೇಬಾರದು ಎಂಬಂಥ ಪವಿತ್ರ ವಸ್ತುವಲ್ಲ’ ಎಂದು ಹೇಳಿದೆ. ನಮ್ಮ ಪಕ್ಷವು ಮೈತ್ರಿಯ ಅಜೆಂಡಾಗೆ ಬದ್ಧವಾಗಿದೆ ನಿಜ. ಆದರೆ, ಸಂವಿಧಾನದ 35-ಎ ವಿಧಿಯು ರಾಜ್ಯಕ್ಕೆ ಇತರ ಎಲ್ಲದ್ದಕ್ಕಿಂತ ಹೆಚ್ಚಿನ ಹಾನಿ ಉಂಟುಮಾಡಿದೆ ಎಂಬುದು ಕೂಡ ಸತ್ಯ ಎಂದು ರಾಜ್ಯ ಬಿಜೆಪಿ ವಕ್ತಾರ ಸುನೀಲ್‌ ಸೇಥಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next