ಚೆನ್ನೈ: ರಾಜಕಾರಣ ನಡೆಸಲು ಮುಂದಾಗಿರುವ ದಿಗ್ಗಜ ನಟರಾದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲಹಾಸನ್ ಭಾನುವಾರ ಒಂದೇ ವೇದಿಕೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡು ಕುತೂಹಲಕ್ಕೆ ಕಾರಣರಾದರು.
ತಮಿಳು ನಟ ದಿವಂಗತ ಶಿವಾಜಿ ಗಣೇಶನ್ ಅವರ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ಇಬ್ಬರು ದಿಗ್ಗಜರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಉಭಯ ಕುಶಲೋಪರಿ ನಡೆಸಿದರು.
ಸಮಾರಂಭದಲ್ಲಿ ಮಾತನಾಡಿದ ರಜನಿಕಾಂತ್ ‘ಸ್ಟಾರ್‌ಗಿರಿ ಎನ್ನುವುದು ರಾಜಕೀಯದಲ್ಲಿ ಕೆಲಸ ಮಾಡುವುದಿಲ್ಲ. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದ ಶಿವಾಜಿ ಗಣೇಶನ್ ಅವರು ಅವರ ಸ್ವಕ್ಷೇತ್ರದಲ್ಲೇ ಠೇವಣಿ ಕಳೆದುಕೊಂಡಿದ್ದರು. ರಾಜಕೀಯದಲ್ಲಿ ಯಶಸ್ವಿಯಾಗಲು ಚಲನಚಿತ್ರ ರಂಗದ ಖ್ಯಾತಿ, ಸ್ಥಾನಮಾನಕ್ಕಿಂತ ಬೇರೆಯದ್ದೇ ಆದ ಅವಶ್ಯಕತೆಯಿದೆ. ಅದು ಏನೆಂದು ಜನರಿಗೆ ಮಾತ್ರ ಗೊತ್ತಿದೆ, ನನಗಂತೂ ಖಂಡಿತವಾಗಿ ಗೊತ್ತಿಲ್ಲ’ ಎಂದರು.
ಇದೇ ವೇಳೆ ಕಮಲ್ ಹಾಸನ್‌ರತ್ತ ತಿರುಗಿ ‘ನಾನು 2 ತಿಂಗಳ ಹಿಂದೆ ಕೇಳಿದ್ದೆ, ಅವರಿಗೆ ಗೊತ್ತಿರಬೇಕು. ಆ ಸೀಕ್ರೆಟ್ ನನಗೆ ಹೇಳು ಎಂದು ನಾನು ಒತ್ತಾಯಿಸಿದರೆ, ನನ್ನೊಂದಿಗೆ ಬಾ, ನಾನು ವಿವರಿಸುತ್ತೇನೆ ಎಂದು ಹೇಳುತ್ತಾರೆ’, ಎಂದು ನೆರೆದಿದ್ದವರನ್ನು ನಗೆ ಗಡಲಲ್ಲಿ ತೇಲಿಸಿದರು. ಕಮಲ್ ಕೂಡ ನಗೆಗಡಲಲ್ಲಿ ತೇಲಿದರು.
ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಉಪಸ್ಥಿತರಿದ್ದರು. ಮುಖ್ಯಮಂತ್ರಿ ಪಳನಿ ಸ್ವಾಮಿ ಅನುಪಸ್ಥಿತರಿದ್ದು, ಇದು ರಜನಿಕಾಂತ್ ಆದಿಯಾಗಿ ಶಿವಾಜಿ ಗಣೇಶನ್ ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿತು.