ನವದೆಹಲಿ: ಸೇವಾ ನಿವೃತ್ತಿಗೆ ಕೆಲವೇ ದಿನ ಬಾಕಿ ಇರುವಾಗಲೇ ಕಾರು ಡಿಕ್ಕಿ ಹೊಡೆದ ಪರಿಣಾಮ ದೆಹಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ದುರಂತ ಅಂತ್ಯ ಕಂಡಿರುವ ಘಟನೆ ದೆಹಲಿಯಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಿಯಕರನ ಮುಂದೆಯೇ ಕಾಲೇಜು ಯುವತಿ ಮೇಲೆ ಸಾಮೂಹಿಕ ಬಲಾತ್ಕಾರ: ಐವರ ಬಂಧನ
ಕರ್ತವ್ಯ ನಿರತ ಸಬ್ ಇನ್ಸ್ ಪೆಕ್ಟರ್ ಲಾಟೂರ್ ಸಿಂಗ್ (59ವರ್ಷ) ಕೇಂದ್ರ ಜಿಲ್ಲಾ ಚಾಂದ್ನಿ ಮಹಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಸಂದರ್ಭದಲ್ಲಿ ರಾಜ್ ಘಾಟ್ ಮತ್ತು ಶಾಂತಿವನ ಸಿಗ್ನಲ್ಸ್ ನ ರಿಂಗ್ ರೋಡ್ ನಲ್ಲಿ ಕಾರು ಡಿಕ್ಕಿ ಹೊಡೆದು ದುರಂತ ಅಂತ್ಯಕಂಡಿರುವುದಾಗಿ ಡೆಪ್ಯುಟಿ ಪೊಲೀಸ್ ಕಮಿಷನರ್ ಶ್ವೇತಾ ಚೌಹಾಣ್ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದರಿಯಾಗಂಜ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 279 (ಅತೀ ವೇಗ) ಮತ್ತು 304ಎ(ಬೇಜವಾಬ್ದಾರಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ಹರ್ಯಾಣ ರಿಜಿಸ್ಟ್ರೇಶನ್ ನಂಬರ್ ನ ಹುಂಡೈ ಐ10 ಕಾರು ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಶೋಕೇಂದ್ರ (34ವರ್ಷ) ಎಂದು ಗುರುತಿಸಲಾಗಿದ್ದು, ಈತ ಹರ್ಯಾಣದ ಪಾಣಿಪತ್ ಜಿಲ್ಲೆಯವನಾಗಿದ್ದಾನೆ.
ಲಾಟೂರ್ ಸಿಂಗ್ 2023ರ ಜನವರಿ 31ರಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಯಿಂದ ನಿವೃತ್ತಿಯಾಗಲಿದ್ದರು. ಇವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿರುವುದಾಗಿ ಡಿಸಿಪಿ ಚೌಹಾಣ್ ತಿಳಿಸಿದ್ದಾರೆ.