ನವದೆಹಲಿ: ಮಹಾರಾಷ್ಟ್ರ ಮೂಲದ ವ್ಯಕ್ತಿ ಹಾಗೂ ಅವರ ಇಬ್ಬರು ಮಕ್ಕಳು ಪ್ರವಾಸಿಗರ ಕಣ್ಮುಂದೆಯೇ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಒಮಾನ್ ಬೀಚ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮೊದಲ ಬಾರಿ ವಿರಾಟ್ ಕಳಪೆ ಫಾರ್ಮ್ ಬಗ್ಗೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಗಂಗೂಲಿ
ಮಹಾರಾಷ್ಟ್ರದ ಸಾಂಗ್ಲಿಯ ಶಶಿಕಾಂತ್ ಮಾಮನೆ (42ವರ್ಷ) ಮತ್ತು ಪತ್ನಿ, ಮಕ್ಕಳಾದ ಶ್ರುತಿ (9ವರ್ಷ), ಶ್ರೇಯ (6 ವರ್ಷ) ದುಬೈಯಲ್ಲಿ ವಾಸವಾಗಿದ್ದರು. ಭಾನುವಾರ ಒಂದು ದಿನದ ತಿರುಗಾಟಕ್ಕಾಗಿ ಶಶಿಕಾಂತ್ ನೆರೆಯ ಒಮಾನ್ ಗೆ ಪತ್ನಿ, ಮಕ್ಕಳೊಂದಿಗೆ ತೆರಳಿದ್ದರು ಎಂದು ಶಶಿಕಾಂತ್ ಸಹೋದರ ಪಿಟಿಐಗೆ ತಿಳಿಸಿದ್ದಾರೆ.
ಒಮಾನ್ ಬೀಚ್ ನಲ್ಲಿ ಮಕ್ಕಳಾದ ಶ್ರುತಿ ಮತ್ತು ಶ್ರೇಯ ರಭಸವಾಗಿ ಬಂದ ರಕ್ಕಸ ಗಾತ್ರದ ಅಲೆಗಳ ಹೊಡೆತದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದು ಮತ್ತೊಬ್ಬ ಪ್ರವಾಸಿಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ಸಂದರ್ಭದಲ್ಲಿ ಮಕ್ಕಳನ್ನು ರಕ್ಷಿಸಲು ಹೋದ ಶಶಿಕಾಂತ್ ಕೂಡಾ ಮುಳುಗಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಶಶಿಕಾಂತ್ ಹಾಗೂ ಶ್ರೇಯ ಶವ ಪತ್ತೆಯಾಗಿದ್ದು, 9 ವರ್ಷದ ಶ್ರುತಿ ಶವ ಇನ್ನೂ ಪತ್ತೆಯಾಗಿಲ್ಲ, ಅದಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿ ಹೇಳಿದೆ. ಶಶಿಕಾಂತ್ ಅವರು ದುಬೈ ಮೂಲದ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.