Advertisement

ಬೇಸಗೆಯ ಸಂಜೆಯಿದು ಬೇಕೆನಗೆ ನೀರ ಜೊತೆ

10:10 AM Feb 08, 2020 | mahesh |

ನೀರು ದೇಹವನ್ನು ಕಾಪಾಡುವ ದಿವ್ಯ ಔಷಧ ಎಂದರೆ ತಪ್ಪಲ್ಲ. ಸ್ವತ್ಛವಾದ ನೀರನ್ನು ಮನಸ್ಸು ತೃಪ್ತಿಯಾಗುಷ್ಟು ಕುಡಿದರೆ ಉಂಟಾಗುವ ಆನಂದವೇ ಎಷ್ಟೋ ಕಾಯಿಲೆಗಳನ್ನು ವಾಸಿ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ನೀರಿನ ಲಭ್ಯತೆಯೇ ಒಂದು ಸವಾಲು. ಹಾಗಂತ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.

Advertisement

ಬಿರುಬಿಸಿಲಿಗೆ ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರು ಬೇಕಾಗುತ್ತದೆ. ಆದರೆ, ಎಲ್ಲರ ದೇಹಕ್ಕೂ ಇಂತಿಷ್ಟೇ ಪ್ರಮಾಣದ ನೀರಿನ ಅಗತ್ಯವಿದೆ ಎಂದು ಸಾರಾಸಗಟಾಗಿ ಹೇಳುವಂತಿಲ್ಲ. ಏಕೆಂದರೆ, ದೇಹದ ತೂಕಕ್ಕೆ ತಕ್ಕಂತೆ ನೀರಿನ ಅಗತ್ಯವೂ ಬದಲಾಗುತ್ತದೆ. ಆದರೆ, ಸುಮಾರಾಗಿ ಪ್ರೌಢ ವ್ಯಕ್ತಿಗೆ ಎರಡರಿಂದ ನಾಲ್ಕು ಲೀಟರ್‌ ನೀರಿನ ಅಗತ್ಯವಿದೆ. ಬಿಸಿಲಿನಲ್ಲಿ ಕೆಲಸ ಮಾಡುವವರು, ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದ ನೀರು ಕುಡಿಯುವುದು ಅಗತ್ಯ.

ಇನ್ನು ಪ್ರತೀ ದಿನ ವ್ಯಾಯಾಮ ಮಾಡುವವರಿಗೆ, ಜಿಮ್‌ಗೆ ಹೋಗುವ ಅಭ್ಯಾಸ ಇರುವವರಿಗೂ ಹೆಚ್ಚಿನ ಪ್ರಮಾಣದ ನೀರು ಬೇಕು. ಯಾಕೆಂದರೆ, ಸ್ನಾಯುಗಳು ಕ್ರಿಯಾಶೀಲವಾಗುವುದರಿಂದ ಸಾಕಷ್ಟು ದ್ರವಾಂಶ ಅಗತ್ಯ.  ಬಾಯಾರಿಕೆ ಅನಿಸಿದಾಗ ಮಾತ್ರ ನೀರು ಕುಡಿಯುವುದು ಅಷ್ಟೇನೂ ಒಳ್ಳೆಯ ಅಭ್ಯಾಸವಲ್ಲ. ದಿನದಲ್ಲಿ ನಿರ್ದಿಷ್ಟವಾಗಿ ಕೆಲವು ಬಾರಿ ನೀರು ಕುಡಿಯುವ ಅಭ್ಯಾಸವಿದ್ದರೆ ಒಳಿತು. ಉದಾಹರಣೆಗೆ ಬೆಳಿಗ್ಗೆ ಎದ್ದಾಗ, ತಿಂಡಿ ಅಥವಾ ಊಟ ಸೇವನೆಯ ಬಳಿಕ, ರಾತ್ರಿ ಮಲಗುವ ಮುನ್ನ ಮನಸ್ಸು ತೃಪ್ತಿಯಾಗುವಷ್ಟು ನೀರು ಕುಡಿಯುವುದು ಉತ್ತಮ ಹವ್ಯಾಸ.

ದೇಹಕ್ಕೆ ನೀರಿನ ಅಂಶ ಕಡಿಮೆ ಆದಾಗ ಕಣ್ಣಿನಲ್ಲಿ ನೀರಿನ ತೇವ ಕಡಿಮೆಯಾಗುವುದು, ತಲೆಸುತ್ತು ಬಂದಂತೆ ಅನಿಸುವುದು, ತುಟಿ ಒಣಗಿ, ನಾಲಿಗೆ ಒಣಗಿದಂತೆ ಅನಿಸಿದರೆ ನಿರ್ಜಲೀಕರಣ (ಡಿಹೈಡ್ರೇಷನ್‌) ಆಗಿದೆ ಎಂದರ್ಥ. ಆದ್ದರಿಂದ ಬಾಯಾರಿಕೆ ಅನಿಸುವ ಮುನ್ನವೇ ಆಗಾಗ ನೀರು ಕುಡಿಯುತ್ತ ಇರುವುದು ಅತೀ ಅಗತ್ಯ. ವಯಸ್ಸು ಹೆಚ್ಚಾಗುತ್ತಿದ್ದಂತೆಯೇ ದೇಹದಲ್ಲಿ “ದಾಹ’ವನ್ನು ಸೂಚಿಸುವ ವ್ಯವಸ್ಥೆಯು ತುಸು ದುರ್ಬಲವಾಗುತ್ತದೆ. ಆದ್ದರಿಂದ ಉತ್ತಮ ಅಭ್ಯಾಸ ಬಲವೇ ದೇಹವನ್ನು ಕಾಪಾಡುತ್ತದೆ.

ದೇಹವನ್ನು ಕಾಪಾಡಿಕೊಳ್ಳಲು ನೀರು ಸೇವಿಸುವುದು ಮಾತ್ರವಲ್ಲ, ನೀರಿನ ಅಂಶ ಜಾಸ್ತಿ ಇರುವ ಹಣ್ಣು, ಆಹಾರ ಸೇವನೆಯೂ ಉತ್ತಮ. ಉದಾಹರಣೆಗೆ, ಸೌತೆಕಾಯಿ, ಕಲ್ಲಂಗಡಿ ಹಣ್ಣುಗಳ ಸೇವನೆ ದೇಹಕ್ಕೆ ಹೆಚ್ಚಿನ ದ್ರವಾಂಶ ಪೂರೈಸುತ್ತವೆ. ಪನೀರ್‌, ಮಾಂಸಾಹಾರ, ಚೀಸ್‌ ಸೇವಿಸಿದಾಗ ಆಹಾರದ ಪಚನ ಕ್ರಿಯೆಗೆ ಹೆಚ್ಚಿನ ನೀರು ಬೇಕಾಗುತ್ತದೆ. ಗಿಡದಲ್ಲಿ ಬೆಳೆಯುವ ತರಕಾರಿಗಳು ಅಂದರೆ ಗೆಡ್ಡೆ ಗೆಣಸಿಗಿಂತಲೂ, ಬೆಂಡೆ, ಬದನೆ, ಸೋರೆಕಾಯಿ, ಸೌತೆಕಾಯಿ, ಪಡುವಲಕಾಯಿಯಂತಹ ತರಕಾರಿಗಳು ಸರಳವಾಗಿ ಬೇಗನೆ ಜೀರ್ಣವಾಗುತ್ತವೆ.

Advertisement

ಸತ್ಯಭಾಮಾ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next