Advertisement

ಡಬ್ಬಿಂಗ್‌ ವಿರೋಧಿಸಿ 9ರಂದು ಪ್ರತಿಭಟನೆ

03:50 AM Mar 04, 2017 | Team Udayavani |

ಬೆಂಗಳೂರು: ತಮಿಳಿನ ಸತ್ಯದೇವ್‌ ಐಪಿಎಸ್‌ ಚಲನಚಿತ್ರಕ್ಕೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶುಕ್ರವಾರ ಬಿಡುಗಡೆಗೊಂಡ ಚಿತ್ರದ ವಿರುದ್ಧ ಹಲವೆಡೆ ಆಕ್ರೋಶ ವ್ಯಕ್ತವಾಗಿದೆ.

Advertisement

ಡಬ್ಬಿಂಗ್‌ ವಿರೋಧಿಸಿ ಮಾ. 9ರಂದು ಕನ್ನಡ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಸಿನಿಮಾ ಹಾಗೂ ಕಿರುತೆರೆಯ ಕಲಾವಿದರು ಪ್ರತಿಭಟನೆಯಲ್ಲಿ ತಪ್ಪದೆ ಪಾಲ್ಗೊಳ್ಳಬೇಕೆಂದು ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ್‌ ಮನವಿ ಮಾಡಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಹಿಂದೆ ಡಬ್ಬಿಂಗ್‌ ವಿರೋಧಿಸಿ ಮಾ.11 ರಂದು ಪ್ರತಿಭಟನೆ ನಡೆಸುವುದಾಗಿ ಹೇಳಲಾಗಿತ್ತು. ಆದರೆ, ಅಂದು ಐದು ರಾಜ್ಯಗಳ ಚುನಾವಣೆ ಫ‌ಲಿತಾಂಶ ಹೊರಬೀಳುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮಾ. 9ರಂದು ಹಮ್ಮಿಕೊಳ್ಳಲಾಗಿದೆ. ಅಂದು ಮೈಸೂರು ಬ್ಯಾಂಕ್‌ ವೃತ್ತದಿಂದ ಫ್ರೀಡಂ ಪಾರ್ಕ್‌ವರೆಗೂ ಮೆರವಣಿಗೆ ನಡೆಯಲಿದೆ. ಆ ಬೃಹತ್‌ ಪ್ರತಿಭಟನಾ ಮೆರವಣಿಗೆಯಲ್ಲಿ ಕನ್ನಡ ಚಿತ್ರರಂಗದ ನಟ, ನಟಿಯರು, ಕಿರುತೆರೆಯ ಕಲಾವಿದರು, ತಂತ್ರಜ್ಞರು ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್‌ ಸಂಸ್ಕೃತಿ ಬೇಡವೆಂದು ಆಗ್ರಹಿಸಿ ಉರಗ ತಜ್ಞ ಹಾಗೂ ಮೈಸೂರು ನಗರಪಾಲಿಕೆ ಸದಸ್ಯ ಸ್ನೇಕ್‌ ಶ್ಯಾಂ ಶುಕ್ರವಾರ ಮೈಸೂರಿನ ಡಾ.ರಾಜ್‌ಕುಮಾರ್‌ ಉದ್ಯಾನದಲ್ಲಿರುವ ಡಾ.ರಾಜ್‌ಕುಮಾರ್‌ ಪ್ರತಿಮೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು. ಮಂಗಳೂರಿನಲ್ಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ರೂಪಂ ಥಿಯೇಟರ್‌ನಲ್ಲಿ ಬ್ಯಾನರ್‌ ಹರಿದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ದಾವಣಗೆರೆಯಲ್ಲಿ ಸಾರ್ವಜನಿಕರು ಆಗಮಿಸದ ಹಿನ್ನೆಲೆಯಲ್ಲಿ ಚಲನಚಿತ್ರವನ್ನು ಅರ್ಧ ತಾಸು ಮುಂದೂಡಿದರು.

ಡಬ್ಬಿಂಗ್‌ ಸಿನಿಮಾ ವೀಕ್ಷಣೆ ಬೇಡ: ಶೃತಿ
ಯಾದಗಿರಿ:
ಡಬ್ಬಿಂಗ್‌ ಸಿನಿಮಾಗಳಿಂದ ಕನ್ನಡ ಸಂಸ್ಕೃತಿ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಡಬ್ಬಿಂಗ್‌ ಸಿನಿಮಾ ವೀಕ್ಷಿಸಬೇಡಿ ಎಂದು ನಟಿ ಶೃತಿ ಹೇಳಿದರು. ತಾಲೂಕಿನ ಅಬ್ಬೆತುಮಕೂರಿನಲ್ಲಿ ಸಿದ್ಧಿಪುರುಷ ಶ್ರೀ ವಿಶ್ವಾರಾಧ್ಯರು ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಬ್ಬಿಂಗ್‌ ಭೂತದ ವಿರುದ್ಧ ಚಲನಚಿತ್ರ ರಂಗ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಆದರೂ ಸಮಸ್ಯೆ ನಿವಾರಣೆ ಆಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. 

Advertisement

ರಾಜ್ಯದ ಕೆಲವು ಚಿತ್ರಮಂದಿರದಲ್ಲಿ ಡಬ್ಬಿಂಗ್‌ ಸಿನಿಮಾ ಬಿಡುಗಡೆಯಾಗಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರಿಲ್ಲ. ಈ ಮೂಲಕ ಜನತೆ ಡಬ್ಬಿಂಗ್‌ ಸಿನಿಮಾ ವಿರೋಧಿಧಿಸಿದ್ದಾರೆ. ಕನ್ನಡಿಗರು ಡಬ್ಬಿಂಗ್‌ ಸಿನಿಮಾ ನೋಡದೆ ಅದರ ವಿರುದ್ಧ ಹೋರಾಟ ನಡೆಸಬೇಕೆಂದು ಸಲಹೆ ನೀಡಿದ ಅವರು, ಡಬ್ಬಿಂಗ್‌ ಸಿನಿಮಾ ವಿರೋಧಿಧಿಸಲು ದೊಡ್ಡ ಮಟ್ಟದ ಧ್ವನಿ ಎತ್ತಬೇಕಿದೆ. ನಮ್ಮ ಭಾಷೆ, ಚಿತ್ರರಂಗದ ಉಳಿವಿಗೆ ಶ್ರಮಿಸಬೇಕು. ಹೀಗಾಗಿ ಕನ್ನಡಿಗರು ಡಬ್ಬಿಂಗ್‌ ಸಿನಿಮಾಗಳನ್ನು ತಿರಸ್ಕರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next