Advertisement

8ರಂದು ಕಲಬುರಗಿ ಹೈಕೋರ್ಟ್‌ ದಶಮಾನೋತ್ಸವ

05:06 PM Sep 06, 2018 | |

ಕಲಬುರಗಿ: ಇಲ್ಲಿನ ಕರ್ನಾಟಕ ಹೈಕೋರ್ಟ್‌ ಪೀಠದ ದಶಮಾನೋತ್ಸವ, ರಾಜ್ಯದವರೇ ಆದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನ್ಯಾ| ಮೋಹನ್‌ ಎಸ್‌. ಶಾಂತಗೌಡರ ಹಾಗೂ ನ್ಯಾ| ಎಸ್‌. ಅಬ್ದುಲ್‌ ನಜೀರ್‌ ಅವರ ಸನ್ಮಾನ ಸಮಾರಂಭವನ್ನು ಸೆ.8ರಂದು ಬೆಳಗ್ಗೆ 10:30ಕ್ಕೆ ಹೈಕೋರ್ಟ್‌ ಪೀಠದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

Advertisement

ಸತತ ಹೋರಾಟ ಫಲವಾಗಿ ಸ್ಥಾಪನೆಯಾಗಿರುವ ಹೈಕೋರ್ಟ್‌ ಪೀಠಕ್ಕೆ ಹತ್ತರ ಸಂಭ್ರಮವಾಗಿದ್ದರಿಂದ ಹೋರಾಟವನ್ನು ಸ್ಮರಿಸುವ ಹಾಗೂ ಪ್ರೋತ್ಸಾಹಿಸಿದವರನ್ನು ನೆನೆಯುವ ನಿಟ್ಟಿನಲ್ಲಿ ದಶಮಾನೋತ್ಸವ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ದಶಮಾನೋತ್ಸವ ಮತ್ತಷ್ಟು ಅರ್ಥಪೂರ್ಣವಾಗಲೆಂದು ರಾಜ್ಯದವರೇ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಆಗಿರುವುದರಿಂದ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್‌.ಕೆ.ಹಿರೇಮಠ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ವಿಶೇಷ ಅತಿಥಿಗಳಾಗಿ ನ್ಯಾ| ಶಾಂತಗೌಡರ್‌, ನ್ಯಾ| ಅಬ್ದುಲ್‌ ನಜೀರ್‌, ಮುಖ್ಯ ಅತಿಥಿಗಳಾಗಿ ಕರ್ನಾಟಕ ಹೈಕೋರ್ಟ್‌ ಪೀಠದ ಮುಖ್ಯ ನಾಯಮೂರ್ತಿ ದಿನೇಶ ಮಹೇಶ್ವರಿ, ಕಲಬುರಗಿ ಹೈಕೋರ್ಟ್‌ ಪೀಠದ ನ್ಯಾಯಮೂರ್ತಿ ಎಸ್‌. ಸುಜಾತಾ, ಎನ್‌. ಕೆ. ಸುಧೀಂದ್ರರಾವ್‌, ಅತಿಥಿಗಳಾಗಿ ಮೊಹಮ್ಮದ ನವಾಝ, ಅಡ್ವೋಕೇಟ್‌ ಜನರಲ್‌ ಉದಯ
ಹೊಳ್ಳಾ ಆಗಮಿಸಲಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಆರ್‌.ಕೆ. ಹಿರೇಮಠ ಅಧ್ಯಕ್ಷತೆ ವಹಿಸುವರು ಎಂದರು.

ಕಲಬುರಗಿಯಲ್ಲಿ ಹೈಕೋರ್ಟ್‌ ಪೀಠವಾಗಲು ಈ ಭಾಗದಲ್ಲಿ ಹೋರಾಟ ಕೈಗೊಂಡಿದ್ದ, ಜತೆಗೆ ಹಿರಿಯ ನಾಯಕರಾಗಿದ್ದ ಮಾಜಿ ಸಿಎಂ ದಿ. ಧರ್ಮಸಿಂಗ್‌ ಹಾಗೂ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ, ಶಾಸಕರಾಗಿದ್ದ ದಿ. ಚಂದ್ರಶೇಖರ ಪಾಟೀಲ ರೇವೂರ ಸೇರಿದಂತೆ ಇತರ ಹಲವು ನಾಯಕರ ಸಹಕಾರ, ಬೆಂಬಲವನ್ನು ನಾವು ಮರೆಯುವಂತಿಲ್ಲ ಎಂದರು.
 
2008ರಿಂದ 2013ರವರೆಗೆ ಸಂಚಾರಿ ಪೀಠವಾಗಿ ಕಾರ್ಯನಿರ್ವಹಿಸಿ 31 ಆಗಸ್ಟ್‌ 2013ರಿಂದ ಕಾಯಂ ಪೀಠವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಹೈಕೋರ್ಟ್‌ ಪೀಠವಾಗಿದ್ದರಿಂದ ಈ ಭಾಗದ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ವಿಜಯಪುರ ಜಿಲ್ಲೆಯ ಕಕ್ಷಿದಾರರಿಗೆ ಬೇಗ ನ್ಯಾಯದಾನ ಸಿಗುವಂತಾಗಿದೆ. ಬಳ್ಳಾರಿ, ಕೊಪ್ಪಳ ಜಿಲ್ಲೆಗಳು ಕಲಬುರಗಿ ಹೈಕೋರ್ಟ್‌ ಪೀಠ ವ್ಯಾಪ್ತಿಗೆ ಸೇರಬೇಕೆಂಬುದು ತಮ್ಮೆಲ್ಲರ ಒತ್ತಾಯವಾಗಿದೆ. ಅಲ್ಲದೇ ಈ ನಿಟ್ಟಿನಲ್ಲಿ ಹಲವಾರು ಸಲ ಮನವಿ ಸಲ್ಲಿಸಿ ಒತ್ತಡ ಹಾಕಲಾಗಿದೆ ಎಂದರು.

2008ರಲ್ಲಿ ಜುಲೈ ಮೊದಲ ವಾರದಲ್ಲಿ ಸಂಚಾರಿ ಹೈಕೋರ್ಟ್‌ ಪೀಠದ ಕಾರ್ಯ ಕಲಾಪ ಆರಂಭವಾಗಿ ಇಲ್ಲಿಯವರೆಗೆ ಒಟ್ಟಾರೆ 99047 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಕಲಾಪ ಆರಂಭಗೊಂಡ 2008ರ ಜುಲೈ 7ರಿಂದ 2013ರ
ಆಗಸ್ಟ್‌ 31ರವರೆಗೆ ಸಂಚಾರಿ ಪೀಠದ ಅವಧಿಯಲ್ಲಿ 48804 ಪ್ರಕರಣಗಳು ಇತ್ಯರ್ಥಗೊಂಡರೆ ಕಾಯಂ ಪೀಠ ಆರಂಭಗೊಂಡ 2013 ಆಗಸ್ಟ್‌ 31ರ ನಂತರ ಇಂದಿನ ದಿನದವರೆಗೂ 50 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 

Advertisement

ಪೀಠದಲ್ಲಿ ಈಗ ಒಟ್ಟಾರೆ 24 ಸಾವಿರ ಪ್ರಕರಣಗಳು ಬಾಕಿ ಇವೆ. ಪೀಠದಲ್ಲಿ ಕೇವಲ ಮೂರು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕನಿಷ್ಟ ಆರು ಪೀಠಗಳು ಕಾರ್ಯ ನಿರ್ವಹಿಸಬೇಕೆಂಬುದು ಸಾರ್ವಜನಿಕರ ಹಾಗೂ ನ್ಯಾಯವಾದಿಗಳ ಅಭಿಲಾಷೆಯಾಗಿದೆ. ಪೀಠಗಳು ಹೆಚ್ಚಾದಲ್ಲಿ ಪ್ರಕರಣಗಳು ಬೇಗನೇ ಇತ್ಯರ್ಥವಾಗಲು ಸಹಕಾರಿಯಾಗುತ್ತದೆ ಎಂದರು.

ಕೆಎಟಿ: ಕಲಬುರಗಿಗೆ ಮಂಜೂರಾಗಿರುವ ಕೆಎಟಿ ಪೀಠ ಬೇಗ ಕಾರ್ಯಾರಂಭ ಮಾಡಬೇಕೆಂಬುದು ನ್ಯಾಯವಾದಿಗಳ ಸಂಘದ ಪ್ರಮುಖ ಆಗ್ರಹವಾಗಿದೆ. ಪೀಠಕ್ಕೆ ಕಟ್ಟಡ ಸಹ ನೋಡಿದ್ದಲ್ಲದೇ ಅಗತ್ಯ ಪೀಠೊಪಕರಣಗಳು ಬಂದಿದೆ. ಆದರೆ
ಇಚ್ಛಾಶಕ್ತಿ ಕೊರತೆಯಿಂದ ಬೇಗ ಸಾಕಾರಗೊಳ್ಳುತ್ತಿಲ್ಲ. ಇತ್ತೀಚೆಗೆ ಈ ಕುರಿತು ಸರ್ಕಾರದೊಂದಿಗೆ ಚರ್ಚಿಸಲಾಗಿದೆ. ಒಟ್ಟಾರೆ ಮೂರು ತಿಂಗಳೊಳಗೆ ಕಾರ್ಯಾರಂಭವಾಗುವ ವಿಶ್ವಾಸ ಹೊಂದಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ವಕೀಲರ ಸಂಘದ ರಾಜ್ಯ ಪರಿಷತ್‌ ಸದಸ್ಯ ಕಾಶೀನಾಥ ಮೋತಕಪಲ್ಲಿ, ಹೈಕೋರ್ಟ್‌ ಪೀಠದ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಪಿ. ಯಾದವ್‌, ಉಪಾಧ್ಯಕ್ಷ ಎಸ್‌.ಜಿ. ಮಠ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎನ್‌. ಪಾಟೀಲ ಜಂಬಗಾ, ಜಿಲ್ಲಾ ಘಟಕದ ಉಪಾಧ್ಯಕ್ಷ ಸತೀಶ ಪಾಟೀಲ್‌, ಖಜಾಂಚಿ ವೈಜನಾಥ
ಝಳಕಿ ಮುಂತಾದವರಿದ್ದರು

ಕಲಬುರಗಿ ಹೈಕೋರ್ಟ್‌ ಪೀಠದ ವ್ಯಾಪ್ತಿಯೊಳಗೆ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳು ಸೇರಬೇಕೆಂಬ
ನಿಟ್ಟಿನಲ್ಲಿ ಹೋರಾಟವನ್ನು ಮುಂದಿನ ದಿನಗಳಲ್ಲಿ ತೀವ್ರಗೊಳಿಸಲಾಗುವುದು. ಈ ಸಂಬಂಧವಾಗಿ ಈಗಾಗಲೇ
ಸರ್ಕಾರಕ್ಕೆ ಹಲವು ಸಲ ಮನವಿ ಸಲ್ಲಿಸಲಾಗಿದೆಯಾದರೂ ಕಾರ್ಯಗತಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಹೋರಾಟಕ್ಕೆ ಧುಮುಕಲು ನಿರ್ಧರಿಸಲಾಗಿದೆ.
 ಗೋಪಾಲಕೃಷ್ಣ ಪಿ. ಯಾದವ್‌, ಪ್ರಧಾನ ಕಾರ್ಯದರ್ಶಿ, ಹೈಕೋರ್ಟ್‌ ಪೀಠ, ಕಲಬುರಗಿ ನ್ಯಾಯವಾದಿಗಳ ಸಂಘ

Advertisement

Udayavani is now on Telegram. Click here to join our channel and stay updated with the latest news.

Next