ಗಾಲೆ: ರವಿಚಂದ್ರನ್ ಅಶ್ವಿನ್ ಅವರು 50 ಟೆಸ್ಟ್‌ಗಳಲ್ಲಿ ಆಡಿದ ಭಾರತದ 30ನೇ ಕ್ರಿಕೆಟಿಗರಾಗಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡ ಗಾಲೆಯಲ್ಲಿ ಬುಧವಾರ ಆರಂಭವಾದ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಆಡುವ ಮೂಲಕ ಅಶ್ವಿನ್ ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಂಡರು.
ಅಶ್ವಿನ್ 50 ಟೆಸ್ಟ್ ಆಡಿದ ಭಾರತದ ಕೇವಲ ಮೂರನೇ ಆಫ್ ಸ್ಪಿನ್ನರ್ ಆಗಿದ್ದಾರೆ. ಶ್ರೀನಿವಾಸ್ ವೆಂಕಟರಾಘವನ್ ಮತ್ತು ಹರ್ಭಜನ್ ಸಿಂಗ್ ಮತ್ತಿಬ್ಬರು. ಆಶ್ಚರ್ಯವೆಂಬಂತೆ ಈ ಸಾಧನೆಗೈದ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದ ಕೇವಲ ಆರನೇ ಸ್ಪಿನ್ನರ್ ಆಗಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಹಲವು ದಾಖಲೆ ಮಾಡಿದ್ದಾರೆ. 250 ವಿಕೆಟ್ ಉರುಳಿಸಿದ ಅತೀವೇಗದ ಸ್ಪಿನ್ನರ್ ಖ್ಯಾತಿಯ ಅಶ್ವಿನ್ 300 ವಿಕೆಟ್ ಕಿತ್ತವರ ಸಾಲಿಗೆ ಸೇರ್ಪಡೆಯಾಗಲು ಮುನ್ನುಗ್ಗುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ ವನ್ ಸ್ಥಾನಕ್ಕೇರಲು ಅಶ್ವಿನ್ ಕೊಡುಗೆ ಅಪಾರ. ಅವರ ಉತ್ಕೃಷ್ಟ ನಿರ್ವಹಣೆಯಿಂದ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಅಸಾಧಾರಣ ಸಾಧನೆ ಮಾಡಿದೆ.
ಇಷ್ಟರವರೆಗೆ ಆಡಿದ 49 ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ 275 ವಿಕೆಟ್ ಉರುಳಿಸಿದ್ದಾರೆ. 50ನೇ ಟೆಸ್ಟ್ ಪಂದ್ಯ ನನ್ನ ಪಾಲಿಗೆ ಮಹೋನ್ನತವಾದದ್ದು. ನನಗೆ ಅತೀವ ಸಂತಸವಾಗಿದೆ. ಇನ್ನು ಮುಂದಿನ ಪ್ರತಿಯೊಂದು ಟೆಸ್ಟ್ ಪಂದ್ಯವೂ ನನ್ನ ಪಾಲಿಗೆ ಶ್ರೇಷ್ಠವಾದದ್ದು ಎಂದು ಅಶ್ವಿನ್ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಅಶ್ವಿನ್ ಉತ್ತಮ ನಿರ್ವಹಣೆ ನೀಡಿದ್ದಾರೆ. 2015ರಲ್ಲಿ ಇಲ್ಲಿ ಭಾರತೀಯ ತಂಡ ಪ್ರವಾಸಗೈದ ವೇಳೆ ಗಾಲೆಯಲ್ಲಿ ನಡೆದ ಪಂದ್ಯದಲ್ಲಿ ಅಶ್ವಿನ್ 10 ವಿಕೆಟ್ ಪಡೆದಿದ್ದರು. ಅಶ್ವಿನ್ 27 ಬಾರಿ ಐದು ವಿಕೆಟ್ ಮತ್ತು ಏಳು ಬಾರಿ 10 ವಿಕೆಟ್‌ಗಳ ಗೊಂಚಲನ್ನು ಪಡೆದಿದ್ದಾರೆ.