Advertisement

17ರಂದು ನಾನೇ ಸಿಎಂ: ಬಿಎಸ್‌ವೈ

01:12 PM May 08, 2018 | |

ವಿಜಯಪುರ: ಪ್ರಸಕ್ತ ಚುನಾವಣೆಯಲ್ಲಿ 20 ಸ್ಥಾನವನ್ನೂ ಗೆಲ್ಲದ ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಕನಸು ಕಾಣುತ್ತಿದೆ. ಆದರೆ ಬಿಜೆಪಿ 150 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆಯುವ ಕಾರಣ ಮೇ 17ರಂದು ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಮಹದಾಯಿ ಸಮಸ್ಯೆಗೆ 10 ದಿನಗಳಲ್ಲಿ ಪರಿಹಾರ ಕಂಡುಕೊಳ್ಳುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಕಾಂಗ್ರೆಸ್‌ ಸರ್ಕಾರದ ಪಾಪದ ಕೂಸು. ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಗೋವಾ ರಾಜ್ಯದ ಚುನಾವಣೆಯಲ್ಲಿ ಮಹದಾಯಿ ಹನಿ ನೀರು ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಹೇಳಿದ್ದೇ ವಿವಾದಕ್ಕೆ ಪ್ರಮುಖ ಕಾರಣ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಲೇ ಪ್ರಧಾನಿ ಮೋದಿ ಅವರ ಮನವೊಲಿಸಿ ಮಹದಾಯಿ ಫಲಾನುಭವಿ ರಾಜ್ಯಗಳ ಸಿಎಂ ಸಭೆ ಕರೆದು, ನ್ಯಾಯಾಧಿಕರಣಕ್ಕೆ ಪ್ರಮಾಣಪತ್ರ ಸಲ್ಲಿಸಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಮಾಡುತ್ತೇವೆ ಎಂದರು. 

ಜೊತೆಗೆ ನೀರಾವರಿ ಇಲಾಖೆಯಲ್ಲಿ ಮೂಲ ಯೋಜನಾ ವೆಚ್ಚಕ್ಕಿಂತ ಮನಬಂದಂತೆ ಬದಲಿಸಿ ನೂರಾರು ಕೋಟಿ ರೂ. ಕೊಳ್ಳೆ ಹೊಡೆಯಲಾಗಿದೆ. ಅಧಿಕಾರಕ್ಕೆ ಬರುತ್ತಲೇ ಸಚಿವರಾಗಿ ಎಂ.ಬಿ. ಪಾಟೀಲ ಮಾಡಿರುವ ಎಲ್ಲ ಹಗರಣಗಳನ್ನು ಬಯಲಿಗೆ ಹಾಕುತ್ತೇನೆ. ಇನ್ನು 10 ದಿನ ಮಾತ್ರ ಕಾಯಿರಿ. ಇದಲ್ಲದೇ ರಾಜ್ಯದಲ್ಲಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಿ ಎಸಿಬಿ ರದ್ದು ಮಾಡುತ್ತೇವೆ. ಆ ಮೂಲಕ ಭ್ರಷ್ಟಾಚಾರ ತಡೆಗೆ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಎಂದರು. 

ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೈಸೂರು ಭಾಗದಲ್ಲಿ ಜನರು ಪ್ರಚಾರಕ್ಕೆ ತಡೆಯೊಡ್ಡಿದ್ದಾರೆ. ಕಾಂಗ್ರೆಸ್‌ ಮುಖಂಡರಾದ ಖರ್ಗೆ, ಸಿದ್ದರಾಮಯ್ಯ, ಡಾ.ಪರಮೇಶ್ವರ ಒಬ್ಬರನ್ನೊಬ್ಬರು ಕಂಡರೆ ಆಗದ ಸ್ಥಿತಿ ಇರುವ ಕಾರಣ ಎಲ್ಲರೂ ಸೇರಿ ಒಂದೇ ವೇದಿಕೆಯಲ್ಲಿ ಪ್ರಚಾರ ಮಾಡುತ್ತಿಲ್ಲ. ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧಿಸಿದ್ದೇ ಅವರಲ್ಲಿ ಭಿನ್ನಮತ ಗಂಭೀರವಾಗಿದ್ದು, ಸಿದ್ದರಾಮಯ್ಯ ಎರಡೂ ಕಡೆ ಸೋಲು ಅನುಭವಿಸಲಿದ್ದಾರೆ ಎಂದರು.

ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಯತ್ನಾಳ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರ ಸರ್ಕಾರ, ಐದು ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಮಾಡಿರುವ ಸಾಧನೆಗಳು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬಾರದ ಯುಪಿಎ ಸರ್ಕಾರ ದ್ರೋಹ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರೋಧಿ ಅಲೆ, ಕರ್ನಾಟಕದಲ್ಲೂ ಉತ್ತರ ಪ್ರದೇಶ ಮಾದರಿಯಲ್ಲಿ ಬಿಜೆಪಿ ಸರ್ಕಾರವನ್ನು ಅಧಿ ಕಾರಕ್ಕೆ ತರುತ್ತಿದೆ ಎಂದರು.

Advertisement

ಪ್ರಸಕ್ತ ಚುನಾವಣೆಯ ಪ್ರಣಾಳಿಕೆ ರಾಜ್ಯದಲ್ಲಿ ಭವಿಷ್ಯದ ಬಜೆಟ್‌ ಕರಡು ರೂಪ. ಅಧಿಕಾರಕ್ಕೆ ಬರುತ್ತಲೇ ರೈತರು ಕೃಷಿಗಾಗಿ ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಮಾಡಿರುವ ಸಾಲ, ನೇಕಾರರು ಮಾಡಿರುವ 1 ಲಕ್ಷ ರೂ. ಸಾಲಮನ್ನಾ ಮಾಡಲಿದ್ದೇನೆ. ಬೃಹತ್‌ ಮೊತ್ತದ ಯೋಜನೆಗಳಿಗೆ ತಜ್ಞರ ವರದಿ ಆಧರಿಸಿ ಟೆಂಡರ್‌, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಉದ್ಯೋಗ ಸೃಷ್ಟಿಸಲಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ಟಿಕೆಟ್‌ ವಂಚಿತ ಪಕ್ಷದ ನಾಯಕರಲ್ಲಿ ಅತೃಪ್ತಿ ಮನೆ ಮಾಡಿದ್ದರೂ ಎಲ್ಲವನ್ನೂ ಶಮನ ಮಾಡಲಾಗಿದೆ. ಅವಕಾಶ ವಂಚಿತರಿಗೆ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next