Advertisement

ಮಲ್ಲಸಮುದ್ರದಲ್ಲಿ ಓಂಕಾರೇಶ್ವರ ಹಿರೇಮಠ ಲೋಕಾರ್ಪಣೆ

02:20 PM Apr 30, 2019 | Team Udayavani |

ಗದಗ: ಮಲ್ಲಸಮುದ್ರದ ಓಂಕಾರೇಶ್ವರ ಗಿರಿಯಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಓಂಕಾರೇಶ್ವರ ಹಿರೇಮಠ ಲೋಕಾರ್ಪಣೆ ಹಾಗೂ ಮಠದ ಫಕ್ಕೀರೇಶ್ವರ ಸ್ವಾಮಿಗಳ ಜನ್ಮ ಸುವರ್ಣ ಮಹೋತ್ಸವ ಜರುಗಿತು.

Advertisement

ಸವದತ್ತಿ ಗೋರವನಕೊಳ್ಳದ ಬ್ರಹ್ಮಾನಂದ ಆಶ್ರಮದ ಶಿವಾನಂದ ಸ್ವಾಮೀಜಿ ಮಾತನಾಡಿ, ಫಕ್ಕಿರೇಶ್ವರ ಸ್ವಾಮಿಗಳು ಕಳೆದ ನಾಲ್ಕು ದಶಕಗಳಿಂದ ಆಧ್ಯಾತ್ಮಿಕ ಕ್ಷೇತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಯಾವುದೇ ಆಡಂಬರ, ಅಂತಸ್ತುಗಳಿಗೆ ಆಸೆ ಪಡದೆ, ಪರಂಪರೆಗೆ ಸೀಮಿತವಾಗದೆ, ಸರ್ವ ಜನಾಂಗದ ಪ್ರೀತಿಗೆ ಪಾತ್ರರಾದ ಸರಳತೆ ಹಾಗೂ ಜ್ಞಾನ ದೀವಿಗೆಯನ್ನು ಹೊತ್ತಿಸುವ ಮೂಲಕ ಜನರ ಪ್ರೀತಿ ಗಳಿಸಿದ್ದಾರೆ. ನಾಡಿನ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಓಂಕಾರೇಶ್ವರ ಹಿರೇಮಠದ ಫಕ್ಕೀರೇಶ್ವರ ಸ್ವಾಮಿಗಳ ಕೊಡುಗೆ ಅಪಾರ ಎಂದು ಹೇಳಿದರು.

ಜಿಲ್ಲಾ ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಡಾ| ರಾಜೇಂದ್ರ ಗಡಾದ ಮಾತನಾಡಿ, ಮೃಡಗಿರಿ ಅನ್ನದಾನೇಶ್ವರ ಮಠದ ಹಿಂದಿನ ಜಗದ್ಗುರುಗಳ ವಂಶಸ್ಥರಾದ ಫಕ್ಕೀರೇಶ್ವರ ಸ್ವಾಮಿಗಳು ಈ ನಾಡಿನಲ್ಲಿ ನಡೆಯುವ ಎಲ್ಲ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ತಮ್ಮ ಸರಳ, ಸಜ್ಜನಿಕೆಯಿಂದ ಅಪಾರ ಸಂಖ್ಯೆಯ ಭಕ್ತರ ಮನಸ್ಸನ್ನು ಗೆದ್ದಿದ್ದಾರೆ.

ವಿಶ್ವಶಾಂತಿಗಾಗಿ ಸತತ 23 ವರ್ಷಗಳ ಕಾಲ ಅನೇಕ ಕಡೆ ಮೌನ ಅನುಷ್ಠಾನ ಮಾಡಿರುವ ಶ್ರೀಗಳು, ನಾಡಿನಲ್ಲಿಯೇ ಮೊದಲ ಬಾರಿಗೆ ಮಹಿಳೆಯರಿಗೆ ರುದ್ರಪಠಣವನ್ನು ಕಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಭಾಗದಲ್ಲಿ ನಡೆದ ಕಳಸಾಬಂಡೂರಿ, ಮಹದಾಯಿ ನೀರಿನ ಹೋರಾಟ, ಕನ್ನಡ ಶಾಸ್ತ್ರೀಯ ಸ್ಥಾನಮಾನದ‌ ಹೋರಾಟ, ಪೋಸ್ಕೋ ಚಳವಳಿ, ಕಪ್ಪತ್ತಗುಡ್ಡ ಸಂರಕ್ಷಣಾ ಹೋರಾಟ, ರೈಲ್ವೆ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಎಂದರು.

ಮುದ್ರಣ ಭಾಸ್ಕರ ಬಸವರಾಜ ಶಾಬಾದಿಮಠ ಅವರು ಬರೆದ ಸುಚಿಂತನ ಹಾಗೂ ಜ್ಞಾನ ಕಲ್ಪ ವಚನ ಗ್ರಂಥಗಳನ್ನು ಬಿಡುಗಡೆ ಮಾಡಿದರು. ಓಂಕಾರೇಶ್ವರ ವನ, ಓಂಕಾರೇಶ್ವರ ಗ್ರಂಥಾಲಯ ಲೋಕಾರ್ಪಣೆಗೊಂಡವು. ಮಾಜಿ ಸೈನಿಕರಿಗೆ ಹಾಗೂ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಕೆ.ಎನ್‌. ದದೇಗಲ್ಲ, ಡಾ| ರಾಜೇಂದ್ರ ಗಡಾದ, ಜಿ.ವಿ. ಹಾವಣಗಿ, ಎಚ್.ಎಸ್‌. ವೆಂಕಟಾಪುರ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next