Advertisement

ಓಂಕಾರೇಶ್ವರ ರಥೋತ್ಸವ, ಕಲ್ಲೂರಪ್ಪನ ಬೆಟ್ಟದಲ್ಲಿ ಕೊಂಡೋತ್ಸವ ಸಂಭ್ರಮ

12:52 PM Mar 13, 2021 | Team Udayavani |

ಹುಣಸೂರು: ಮಹಾಶಿವರಾತ್ರಿ ಅಂಗವಾಗಿ ತಾಲೂಕಿನ ವಿವಿಧೆಡೆ ಗುರುವಾರ ರಾತ್ರಿಯಿಂದಲೇ ಜಾಗರಣೆ, ವಿಶೇಷ ಪೂಜೆ ನಡೆದರೆ, ಶುಕ್ರವಾರ ಹಲವೆಡೆ ರಥೋತ್ಸವ, ಕೊಂಡೋತ್ಸವ, ಉತ್ಸವಗಳು ಜರುಗಿದವು.

Advertisement

ಓಂಕಾರೇಶ್ವರ ರಥೋತ್ಸವ: ಹನಗೋಡು ರಸ್ತೆಯ ರಾಮೇನಹಳ್ಳಿಬೆಟ್ಟದ ಮೇಲಿನ ಶ್ರೀ ಓಂಕಾರೇಶ್ವರ ಸ್ವಾಮಿ ರಥೋತ್ಸವವು ಬೆಟ್ಟದ ಬುಡದಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಗುರುವಾರ ರಾತ್ರಿ ಬೆಟ್ಟದ ಮೇಲಿನ ದೇವಾಲಯದಲ್ಲಿ ವಿಶೇಷ ಹೋಮ, ಹವನ, ಭಜನೆಯೊಂದಿಗೆ ಭಕ್ತರು ಜಾಗರಣೆ ನಡೆಸಿದರು. ಭಕ್ತರು ಬೆಟ್ಟಹತ್ತಿ ದೇವರ ದರ್ಶನ ಮಾಡಿ, ಭಕ್ತಿಭಾವ ಮೆರೆದರು. ಹರಕೆ ಹೊತ್ತ ಮಂದಿ ಲಕ್ಷ್ಮಣತೀರ್ಥ ನದಿ ತಟದಲ್ಲಿ ಮುಡಿಕೊಟ್ಟು ಬಾಯಿಗೆ ಬೀಗ ಹಾಕಿಕೊಂಡು ಬೆಟ್ಟ ಹತ್ತಿ ಉರುಳುಸೇವೆ ಸಲ್ಲಿಸಿದರು.

ರಥೋತ್ಸವದಲ್ಲಿ ಶಾಸಕ ಎಚ್‌.ಪಿ.ಮಂಜುನಾಥ್‌, ಗೋವಿಂದನಹಳ್ಳಿ ಗ್ರಾಪಂ ಅಧ್ಯಕ್ಷ ಪ್ರಸನ್ನ ಕುಮಾರ್‌, ಉಪಾಧ್ಯಕ್ಷೆ ಷರೀನ್‌ತಾಜ್‌, ಸದಸ್ಯ ನಟರಾಜ್‌, ಯ.ರಾಜೇಶ್‌, ದೇವಾಲಯ ಸಮಿತಿ ಅಧ್ಯಕ್ಷ ಶಿವಾನಂದ ಇತರ ರಿದ್ದರು. ಬೆಟ್ಟದ ತಪ್ಪಲಿನಲ್ಲಿ ಆಯೋಜಿಸಿದ್ದ ಅನ್ನಸಂತರ್ಪಣೆಯಲ್ಲಿ 15 ಸಾವಿರಕ್ಕೂ ಹೆಚ್ಚು ಭಕ್ತರುಊಟ ಸವಿದರು. ಜಾತ್ರೆಯಲ್ಲಿ ಹುಣಸೂರಿನ ಗಾಡಿ ಕಾರ್ಖಾನೆ ದಿ.ನಾರಾಯಣಸ್ವಾಮಿ ಸ್ಮರಣಾರ್ಥ ಮಜ್ಜಿಗೆ, ಪಾನಕ ನೀಡಲಾಯಿತು.

ಕಲ್ಲೂರಪ್ಪನ ಬೆಟ್ಟದಲ್ಲಿ ಕೊಂಡೋತ್ಸವ: ಹನಗೋಡಿಗೆ ಸಮೀಪದ ಕಲ್ಲೂರಪ್ಪನಬೆಟ್ಟದ ಕಲ್ಲೂರೇಶ್ವರಸ್ವಾಮಿಗೆ ಹಬ್ಬದಂದು ವಿಶೇಷ ಪೂಜೆ ನಡೆಯಿತು. ಜಾಗರಣೆ ಅಂಗವಾಗಿ ರಾತ್ರಿ ಇಡೀ ಸಾಂಸ್ಕೃತಿಕ ಕಾರ್ಯಕ್ರಮಗಳುನೆರವೇರಿದವು. ಶುಕ್ರವಾರ ಬೆಳಗ್ಗೆ ದೀವಟಿಕೆ ಉತ್ಸವ,ಕೊಂಡೋತ್ಸವ ನಡೆಯಿತು.  ನಗರಕ್ಕೆ ಸಮೀಪದ ಮಹದೇಶ್ವರ ದೇವಸ್ಥಾನದಲ್ಲಿ ರಾತ್ರಿ ಭಜನೆ, ಹರಿಕತೆ ಹಾಗೂ ಬೆಳಗ್ಗೆ ಕೊಂಡೋತ್ಸವ, ಜಾತ್ರೆ ನಡೆಯಿತು.

ಕೊಳುವಿಗೆ ಶ್ರೀರಾಮಲಿಂಗೇಶ್ವರ ಉತ್ಸವ: ನಾಗರಹೊಳೆ ಉದ್ಯಾನವನದಂಚಿನ ಕೊಳುವಿಗೆಯ ಲಕ್ಷ್ಮಣತೀರ್ಥ ನದಿದಂಡೆಯಲ್ಲಿರುವ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶುಕ್ರವಾರ ಮುಂಜಾನೆ ಉತ್ಸವ ನಂತರ ಅನ್ನದಾಸೋಹ ನೆರವೇರಿತು. ಹನಗೋಡಿಗೆ ಸಮೀಪದ ಹೆಬ್ಟಾಳದ ಓಂಕಾರೇಶ್ವರದೇವಾಲಯದಲ್ಲಿಯೂ ಸಹ ವಿಶೇಷ ಪೂಜೆ, ಅನ್ನದಾಸೋಹ ನಡೆಯಿತು.

Advertisement

ವಿವಿಧೆಡೆ ಜಾಗರಣೆ-ಪೂಜೆ: ನಗರದ ಮಂಜುನಾಥಸ್ವಾಮಿ, ಶಿವ, ಸುಬ್ರಹ್ಮಣ್ಯ, ಕೃಷ್ಣ, ಗಣೇಶ, ಆಂಜನೇಯ ದೇವಾಲಯ ಸೇರಿದಂತೆ ಪಕ್ಕದ ಶಿರಡಿಸಾಯಿಬಾಬ ಮಂದಿರಗಳಲ್ಲಿ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಲಕ್ಷ್ಮಣತೀರ್ಥ ನದಿ ದಂಡೆ ಮೇಲಿರುವ ಚಂದ್ರಮೌಳೇಶ್ವರ ದೇವಾಲಯದಲ್ಲಿ ರುದ್ರಹೋಮ ನಡೆಯಿತು. ಕೋಟೆರಸ್ತೆಯ ಶಿವನಮಠ, ಅಯ್ಯಪ್ಪಸ್ವಾಮಿಬೆಟ್ಟ, ಮುನೇಶ್ವರಸ್ವಾಮಿ, ಕೆ.ಆರ್‌.ನಗರರಸ್ತೆ ಹಾಗೂ ಸಾಕೇತ ಬಡಾವಣೆಯ ಶನೇಶ್ವರ,ಕನ್ಯಕಾ ಪರಮೇಶ್ವರಿ ದೇವಾಸ್ಥಾನ, ಮಾರುತಿಬಡಾವಣೆಯ ಮಹದೇಶ್ವರ ದೇವರು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜೆ ನಡೆಯಿತು. ಬಿಳಿ ಕೆರೆಯ ಕೋಡಿ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಜನೆ ಆಯೋಜಿಸಲಾಗಿತ್ತು.

ಮುಂದಿನ ಜಾತ್ರೆಗೆ ಹೊಸ ತೇರು :

ರಾಮೇನಹಳ್ಳಿ ಓಂಕಾರೇಶ್ವರ ಜಾತ್ರಾಮಹೋತ್ಸವಕ್ಕೆ ಹೊಸ ರಥ ನಿರ್ಮಿಸಲು ನೆರವಾಗುವುದಾಗಿ ಶಾಸಕ ಎಚ್‌.ಪಿ.ಮಂಜುನಾಥ್‌ ತಿಳಿಸಿದರು. ಜಾತ್ರೆಗೆ ಭೇಟಿ ನೀಡಿದ್ದ ವೇಳೆ ಸಮಿತಿ ಅಧ್ಯಕ್ಷ ಶಿವಾನಂದ್‌ ತೇರು ಹಳೆಯದಾಗಿದ್ದು. ಹೊಸ ತೇರು ನಿರ್ಮಾಣಕ್ಕೆ ನೆರವಾಗಬೇಕೆಂಬ ಮನವಿಗೆ ಸ್ಪಂದಿಸಿದ ಶಾಸಕರು, ಅಧಿವೇಶನದ ನಂತರ ದೇವಸ್ಥಾನದ ಬಳಿಯೇ ಭಕ್ತರು ಹಾಗೂ ಗ್ರಾಮಸ್ಥರ ಸಭೆ ನಡೆಸಿ, ಮುಂದಿನ ಜಾತ್ರೆಗೆ ಹೊಸ ರಥ ನಿರ್ಮಿಸಲು ಯೋಜನೆ ರೂಪಿಸೋಣ ಎಂದರು. ದೇವಾಲಯಕ್ಕೆ ತೆರಳುವ ಬೆಟ್ಟದ ಮೇಲಿನ ಉಳಿಕೆ ರಸ್ತೆಗೆ ಕಾಂಕ್ರಿಟೀಕರಣ ಮಾಡಿಸಲಾಗುವುದೆಂದರು.

Advertisement

Udayavani is now on Telegram. Click here to join our channel and stay updated with the latest news.

Next