ಹೊಸದಿಲ್ಲಿ: ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ಬೂಸ್ಟರ್ ಡೋಸ್‌ನ ಕೂಗು ಕೂಡ ಜೋರಾಗತೊಡಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಹೊಸ ಶಿಫಾರಸನ್ನು ಅನುಸರಿಸುವುದಾದರೆ, ಭಾರತದಲ್ಲಿ ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಮೊದಲಿಗೆ ಬೂಸ್ಟರ್ ಡೋಸ್ ಸಿಗುವ ಸಾಧ್ಯತೆಯಿದೆ ಎಂದು ಲಸಿಕೆಗೆ ಸಂಬಂಧಿಸಿದ ತಜ್ಞರ ಸಮಿತಿ ಹೇಳಿದೆ.
ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ನಿಷ್ಕ್ರಿಯಗೊಳಿಸಲಾದ ವೈರಸ್ ಆಧರಿತ ಲಸಿಕೆಯನ್ನು ಪಡೆದವರು ಆದಷ್ಟು ಬೇಗ ಬೂಸ್ಟರ್ ಡೋಸ್ ಪಡೆಯಬೇಕಾಗುತ್ತದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಲಸಿಕೆಗಳ ಪೈಕಿ ಕೊವ್ಯಾಕ್ಸಿನ್ ಮತ್ತು ಚೀನದಲ್ಲಿ ತಯಾರಾದ ಎರಡು ಲಸಿಕೆಗಳು ಮಾತ್ರ ನಿಷ್ಕ್ರಿಯ ಗೊಳಿಸಿದ ವೈರಸ್ ಆಧರಿತ ಲಸಿಕೆಗಳಾಗಿವೆ. ಹೀಗಾಗಿ ಭಾರತದಲ್ಲಿ ಕೊವ್ಯಾಕ್ಸಿನ್ ಪಡೆದವರಿಗೆ ಆದ್ಯತೆ ಮೇರೆಗೆ ಬೂಸ್ಟರ್ ಡೋಸ್ ನೀಡುವ ಸಾಧ್ಯತೆಯಿದೆ ಎಂದು ಸಮಿತಿ ಹೇಳಿದೆ.
ಲಸಿಕೆ ಪರಿಣಾಮಕಾರಿಯಲ್ಲವೇ?: ಈ ನಡುವೆ ಮುಂಬರುವ ಪರಿಸ್ಥಿತಿಗಳಲ್ಲಿ ನಮ್ಮ ಲಸಿಕೆಯು ಪರಿಣಾಮಕಾರಿ ಆಗದೇ ಇರುವ ಸಾಧ್ಯತೆಯೂ ಇದೆ ಎಂದು ನೀತಿ ಆಯೋಗದ ಸದಸ್ಯ ಡಾ| ವಿ.ಕೆ.ಪೌಲ್ ಹೇಳಿದ್ದಾರೆ. ಈಗಿರುವ ರೂಪಾಂತರಿಗೆ ತಕ್ಕುದಾದ ಲಸಿಕೆಯನ್ನು ನಾವು ಅಭಿವೃದ್ಧಿಪಡಿಸಬೇಕಾಗಿದೆ. ಕೊರೊನಾ ರೂಪವು ಬದಲಾಗುತ್ತಿರುವ ಕಾರಣ ಲಸಿಕೆ ಪರಿಣಾಮ ಬೀರದೆಯೂ ಇರಬಹುದು ಎಂದಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಜಮೀನು ಏಕವ್ಯಕ್ತಿ ಕೋರಿಕೆ ಅರ್ಜಿಗಳ ಶೀಘ್ರ ವಿಲೇವಾರಿ: ಆರ್ ಅಶೋಕ್
7ರ ಬಾಲಕನಿಗೆ ಒಮಿಕ್ರಾನ್: ಪಶ್ಚಿಮ ಬಂಗಾಳದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಬುಧವಾರ ದೃಢಪಟ್ಟಿದ್ದು, ಅಬುಧಾಬಿಯಿಂದ ಬಂದಿದ್ದ 7 ವರ್ಷದ ಬಾಲಕನಿಗೆ ಸೋಂಕು ತಗಲಿದೆ. ತೆಲಂಗಾಣದಲ್ಲಿ ಇಬ್ಬರು ವಿದೇಶಿ ಪ್ರಜೆಗಳಿಗೆ ಈ ಸೋಂಕು ದೃಢಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಬುಧವಾರ ಮತ್ತೆ 4 ಪ್ರಕರಣ ಪತ್ತೆಯಾಗಿದೆ.
ಮುಂಬಯಿಯಲ್ಲಿ ಶಾಲೆ ಶುರು: ಬುಧವಾರದಿಂದ ಮುಂಬಯಿಯಲ್ಲಿ ಶಾಲೆಗಳು ಪುನಾರಂಭಗೊಂಡಿವೆ. 1-7ನೇ ತರಗತಿಗಳು ಆರಂಭವಾಗಿದ್ದು, ಹೂವು ಹಾಗೂ ಉಡುಗೊರೆಗಳ ಮೂಲಕ ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ದಾರೆ. ಕೆಲವು ಖಾಸಗಿ ಶಾಲೆಗಳು ಕ್ರಿಸ್ಮಸ್ ರಜೆ ಬಳಿಕ ಶಾಲಾರಂಭ ಮಾಡಲು ನಿರ್ಧರಿಸಿವೆ. ಈ ನಡುವೆ
ಮುಂಬಯಿಯಾದ್ಯಂತ ಕೊರೊನಾ ಸಂಬಂಧಿ ನಿರ್ಬಂಧಗಳನ್ನು ಡಿಸೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗಿದೆ.