Advertisement
ಸದ್ಯ ಈ ವೈರಸ್ ಎಷ್ಟು ಅಪಾಯ ತರಬಲ್ಲದು ಎಂಬ ಬಗ್ಗೆ ನಾನಾ ಗೊಂದಲಗಳಿವೆ. ಕೆಲವರು ಅಂಥ ಗಂಭೀರವಾದ ಪರಿಣಾಮ ಬೀರಲ್ಲ ಎಂದಿದ್ದರೆ, ಇನ್ನೂ ಕೆಲವರು ಒಂದು ವಾರ ಕಳೆದ ಮೇಲಷ್ಟೇ ಹೇಳಲು ಸಾಧ್ಯ ಎಂದಿದ್ದಾರೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು, ಈ ಹೊಸ ರೂಪಾಂತರಿ ಭಾರತದಲ್ಲಿ ಹೆಚ್ಚು ಹರಡದಂತೆ ತಡೆಯುವ ಅಗತ್ಯವಿದೆ. ನಿಯಂತ್ರಣಕ್ಕೆ ಬೇಕಾದ ಸಿದ್ಧತೆಗಳಾದ ವಿಮಾನ ನಿಲ್ದಾಣಗಳಲ್ಲಿ ಹೆಚ್ಚೆಚ್ಚು ಪರೀಕ್ಷೆ ನಡೆಸುವುದು, ಬೇಗನೆ ಪರೀಕ್ಷಾ ವರದಿ ನೀಡುವುದು, ಸಾಧ್ಯವಾದಷ್ಟು ಕಠಿನ ಐಸೊಲೇಶನ್ ನಿಯಮ ಜಾರಿ ತರಬೇಕಾದ ಅಗತ್ಯವಿದೆ.
Related Articles
Advertisement
ಬೆಂಗಳೂರಿನಲ್ಲಿಯೇ ಒಮಿಕ್ರಾನ್ ಪತ್ತೆಯಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಒಂದಷ್ಟು ಆತಂಕದ ಸನ್ನಿವೇಶ ನಿರ್ಮಾಣವಾಗಿದೆ. ಆದರೆ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಹೆದರಬೇಡಿ. ಸೋಂಕು ಪತ್ತೆಯಾಗಿರುವ ಇಬ್ಬರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನೂ ಪತ್ತೆ ಹಚ್ಚಿ ಪರೀಕ್ಷೆ ನಡೆಸಲಾಗಿದೆ. ದಕ್ಷಿಣ ಆಫ್ರಿಕಾದಿಂದ ಬಂದಿದ್ದ ವ್ಯಕ್ತಿಯ ಸಂಪರ್ಕಿತರಲ್ಲಿ ಯಾರಿಗೂ ಪಾಸಿಟಿವ್ ಬಂದಿಲ್ಲ ಎಂದು ತಿಳಿಸಿದೆ. ಇದು ಒಂದಷ್ಟು ಸಮಾಧಾನಕರ ಸಂಗತಿಯಾಗಿದೆ.
ಸದ್ಯದ ಮಟ್ಟಿಗೆ ಒಮಿಕ್ರಾನ್ ಬರದಂತೆ ತಡೆಯುವ ಶಕ್ತಿ ಸರಕಾರಗಳಿಗಾಗಲಿ ಅಥವಾ ಜನರಿಗಾಗಲಿ ಇಲ್ಲ. ಆದರೆ ನಮ್ಮ ಬಳಿ ಬರದಂತೆ ಮಾತ್ರ ನಾವೇ ನೋಡಿಕೊಳ್ಳಬಹುದು. ಅಂದರೆ ಸರಕಾರ ಈಗಾಗಲೇ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಅಲ್ಲದೆ ದಕ್ಷಿಣ ಆಫ್ರಿಕಾದ ಪ್ರಕರಣಗಳು ಮತ್ತು ಇಲ್ಲಿನ ಪ್ರಕರಣಗಳನ್ನು ನೋಡಿದರೆ ಒಮಿಕ್ರಾನ್‌ಗೆ ಹೆಚ್ಚು ಹರಡುವ ಶಕ್ತಿ ಇದೆಯೇ ಹೊರತು, ಆರೋಗ್ಯದ ಮೇಲೆ ಗಂಭೀರವಾದ ದುಷ್ಪರಿಣಾಮ ಆಗಿರುವ ವರದಿಗಳಿಲ್ಲ. ಇದನ್ನು ಸಚಿವ ಸುಧಾಕರ್ ಅವರೂ ಇಲ್ಲಿನ ಕೇಸ್‌ಗಳನ್ನು ಪರಿಶೀಲಿಸಿ ಹೇಳಿದ್ದಾರೆ. ಹೀಗಾಗಿ ಜನ ಆತಂಕಕ್ಕೆ ಈಡಾಗುವ ಬದಲು ಮುನ್ನೆಚ್ಚರಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಒಮಿಕ್ರಾನ್ ಬಂದಿದೆಯಂತೆ, ಇದು ಭಾರೀ ಅಪಾಯವಂತೆ ಎಂಬೆಲ್ಲ ವದಂತಿಗಳನ್ನು ನಂಬ ಬಾರದು ಮತ್ತು ಭಯವನ್ನು ಹರಡಬಾರದು.