ಹುಬ್ಬಳ್ಳಿ: ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ಅವಹೇಳನಕಾರಿ ಟ್ವಿಟ್ ಮಾಡುವ ಮೂಲಕ ತಮ್ಮ ಮೂರ್ಖತನ ಪ್ರದರ್ಶಿಸಿಕೊಂಡಿದ್ದಾರೆ ಎಂದು ವಿಧಾನ ಪರಿಷತ್‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.
50 ವರ್ಷದಿಂದ ದೇಶ ಕಂಡ ಅಪರೂಪದ ರಾಜಕೀಯ ಮುತ್ಸದಿಯೆಂದೇ ಖ್ಯಾತರಾದ ದೇವೇಗೌಡ ಅಂಥವರ ಬಗ್ಗೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರು ಇಂತಹ ಹೇಳಿಕೆ ನೀಡಿರುವುದು ಖಂಡನೀಯ ಹಾಗೂ ಮೂರ್ಖತನದ ಪರಮಾವಧಿ ಆಗಿದೆ.
ಭಾರತದ ಪ್ರಧಾನಮಂತ್ರಿಯಾಗಿ ಅಲ್ಪ ಕಾಲದಲ್ಲೇ ದೇಶದ ಸರ್ವತೋಮುಖ ಅಭಿವೃದ್ಧಿ ಹಾಗೂ ಜನರ ಬಗ್ಗೆ ಕಳಕಳಿಯನ್ನಿಟ್ಟುಕೊಂಡು ಉತ್ತಮ ಕಾರ್ಯ ಮಾಡಿದ ದೇವೇಗೌಡರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಓಮರ್ ಗಾಗಲಿ, ಅವರ ಕುಟುಂಬಕ್ಕಾಗಲಿ ಇಲ್ಲ.
ಮೂರು ತಲೆಮಾರಿನ ರಾಜಕಾರಣ ಮಾಡಿದ ಓಮರ್ ಕುಟುಂಬದವರಿಗೆ ಕಾಶ್ಮೀರವನ್ನು ಭಯೋತ್ಪಾದಕರ ತಾಣವನ್ನಾಗಿ ಮಾಡಿದ ಕೀರ್ತಿಯ ಪಾಲು ಸಲ್ಲಬೇಕು. ಇಂಥವರು ದೇವೇಗೌಡರ ಬಗ್ಗೆ ಮಾತನಾಡುವುದನ್ನು ದೇಶವೇ ಖಂಡಿಸುತ್ತದೆ. ಫರ್ವೇಜ್ ಮುಷರಫ್ರ ಬಗ್ಗೆ ಅವರವರ ವೈಯಕ್ತಿಕ ಕಾರಣಕ್ಕೆ ಬಳಸಿಕೊಂಡಿದ್ದು ಶೋಭೆ ತರಲ್ಲ.
ಕಾಶ್ಮೀರದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವಾಗ ತಂದೆ-ಮಗ ಬೇರೆ ದೇಶಕ್ಕೆ ಹೋಗಿ ಆಶ್ರಯ ಪಡೆದಿದ್ದು ಜನ ಮರೆತಿಲ್ಲ ಹಾಗೂ ಇವರು ಕಾಶ್ಮೀರಕ್ಕೆ ಅರೆಕಾಲಿಕ ರಾಜಕಾರಣಿಯಾಗಿ ಕೆಲಸ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂಥವರು ರಾಜ್ಯವೊಂದರ ಮುಖ್ಯಮಂತ್ರಿಯಾಗಿದ್ದರು ಎಂಬುದೇ ವಿಪರ್ಯಾಸ.
ಓಮರ್ ಅಬ್ದುಲ್ಲಾ ಕೂಡಲೇ ದೇಶದ ಜನರ ಕ್ಷಮೆ ಕೇಳಬೇಕು. ಇಂತಹ ಸರ್ವಾಧಿಕಾರಿಗಳು ಕಾಶ್ಮೀರ ಆಳಿದ್ದು ದೇಶದ ದೊಡ್ಡ ದುರಂತ ಎಂಬುದನ್ನು ಅಲ್ಲಿನ ಜನತೆ ಅರಿತುಕೊಳ್ಳಬೇಕು. ಮುಂದೆಯಾದರೂ ಇಂತಹವರಿಗೆ ಬುದ್ಧಿ ಕಲಿಸುವ ಕೆಲಸವನ್ನು ಜನ ಮಾಡಬೇಕೆಂದು ಹೊರಟ್ಟಿ ಒತ್ತಾಯಿಸಿದ್ದಾರೆ.