ಶ್ರೀನಗರ: ರಾಜಕೀಯ ಲಾಭಕ್ಕಾಗಿ ಮತ್ತು ಧರ್ಮದ ವಿರುದ್ಧ ದ್ವೇಷವನ್ನು ಹರಡುವ ಉದ್ದೇಶದಿಂದ ಈ ದೇಶದಲ್ಲಿ ಮುಸ್ಲಿಮರನ್ನು ಮಾತ್ರ ಗುರಿ ಮಾಡಲಾಗುತ್ತಿದೆ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸ್ಟಾರ್ ಏರ್ ಲೈನ್ ಸಂಸ್ಥೆಯಿಂದ ಪತ್ರಕರ್ತರಿಗೆ ವಿಶೇಷ ರಿಯಾಯಿತಿ ಘೋಷಣೆ
“ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸಬೇಡಿ, ಹಲಾಲ್ ಮಾಂಸ ಮಾರಾಟ ಮಾಡಬೇಡಿ, ಹಿಜಾಬ್ ಧರಿಸಬೇಡಿ ಎಂದು ವಿವಾದ ಎಬ್ಬಿಸಲಾಗುತ್ತಿದೆ. ಮತ್ತು ಇದು ಇನ್ನೂ ಮುಂದುವರಿದಿದೆ. ಮುಸ್ಲಿಮರು ಇತರ ಧರ್ಮದ ಅಥವಾ ಜೀವನಶೈಲಿಯ ಬಗ್ಗೆ ವಿರೋಧಿಸದೇ ಇರುವಾಗ, ಭಾರತದಲ್ಲಿ ಕೇವಲ ಮುಸ್ಲಿಮರನ್ನು ಮಾತ್ರ ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಒಮರ್ ಪ್ರಶ್ನಿಸಿರುವುದಾಗಿ ವರದಿ ಹೇಳಿದೆ.
ಬಾರಾಮುಲ್ಲಾದ ಶಾಲೆಯೊಂದರಲ್ಲಿ ಹಿಜಾಬ್ ವಿವಾದ ತಲೆಎತ್ತಿದೆ. ಈಗ ಈ ಜನರು (ಬಿಜೆಪಿ) ಕರ್ನಾಟಕದಂತೆ ಜಮ್ಮು-ಕಾಶ್ಮೀರದಲ್ಲಿಯೂ ರಾಜಕೀಯ ಲಾಭಕ್ಕಾಗಿ ಸಮಸ್ಯೆಯನ್ನು ಹುಟ್ಟುಹಾಕುತ್ತಿರುವುದಾಗಿ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಹಿಜಾಬ್ ಇಸ್ಲಾಂನ ಮೂಲಭೂತ ಹಕ್ಕು. ಇನ್ನೊಬ್ಬರ ಧಾರ್ಮಿಕ ವಿಚಾರದಲ್ಲಿ ಯಾರೂ ಕೂಡಾ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಒಂದು ವೇಳೆ ಇದು ದೇಶದಲ್ಲಿ ಕಾರ್ಯಗತಗೊಂಡಲ್ಲಿ, ಆಗ ನಮ್ಮ ನಿರ್ಧಾರವೂ ಕೂಡ ವಿಭಿನ್ನವಾಗಿರಲಿದೆ ಎಂದು ಒಮರ್ ಹೇಳಿದರು.
ರಂಜಾನ್ ತಿಂಗಳಲ್ಲಿ ಅನಾವಶ್ಯಕವಾಗಿ ಪವರ್ ಕಟ್ ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ಕಾಶ್ಮೀರದ ಜನರನ್ನು ಕೆರಳಿಸುತ್ತಿರುವುದಾಗಿ ಒಮರ್ ದೂರಿದ್ದಾರೆ.
ನನಗೆ ಅಚ್ಚರಿಯಾಗುತ್ತಿದೆ ಹಗಲು, ರಾತ್ರಿ ವಿದ್ಯುತ್ ಇದ್ದು, ಶೆಹ್ರಿ ಮತ್ತು ಇಫ್ತಾರ್ ಸಮಯದಲ್ಲಿ ಮಾತ್ರ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಶೆಹ್ರಿ ಮತ್ತು ಇಫ್ತಾರ್ ಸಮಯದಲ್ಲಿ ಮಾತ್ರ ಪವರ್ ಕಟ್ ಮಾಡಲಾಗುತ್ತಿದೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಸ್ಲಿಮರ ಮನೆಗಳನ್ನು ಬುಲ್ಡೋಜರ್ ನಿಂದ ತೆರವುಗೊಳಿಸುತ್ತಿರುವ ಸುದ್ದಿಯನ್ನು ರಾಷ್ಟ್ರೀಯ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸುತ್ತಿವೆ ಎಂದು ಒಮರ್ ಅಸಮಧಾನ ವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.