Advertisement

Olympics; ಪ್ಯಾರಿಸ್‌ನಲ್ಲಿ ಇಂಡಿಯಾ ಹೌಸ್‌ ಉದ್ಘಾಟನೆ

12:26 AM Jul 29, 2024 | Team Udayavani |

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ ಅದ್ಧೂರಿಯಾಗಿ ಆರಂಭಗೊಂಡ ಒಂದೇ ದಿನದಲ್ಲಿ ಫ್ರಾನ್ಸ್‌ ರಾಜಧಾನಿಯಲ್ಲಿ “ಇಂಡಿಯಾ ಹೌಸ್‌’ ತೆರೆಯಲ್ಪಟ್ಟಿತು. ರಿಲಯನ್ಸ್‌ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಎಂ. ಅಂಬಾನಿ ಇದನ್ನು ಉದ್ಘಾಟಿಸಿದರು.

Advertisement

ಐಒಸಿ ಸಮಿತಿ ಸದಸ್ಯ ಮಿಯಾಂಗ್‌ ಎನ್‌ ಜಿ, ಭಾರತೀಯ ಒಲಿಂಪಿಕ್‌ ಸಂಸ್ಥೆಯ ಆಧ್ಯಕ್ಷೆ ಪಿ.ಟಿ. ಉಷಾ, ಫ್ರಾನ್ಸ್‌ನ ಭಾರತೀಯ ರಾಯಭಾರಿ ಜಾವೇದ್‌ ಅಶ್ರಫ್, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಒಲಿಂಪಿಕ್ಸ್‌ ಸ್ವರ್ಣ ಪದಕ ವಿಜೇತ ಅಭಿನವ್‌ ಬಿಂದ್ರಾ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತಾಡಿದ ನೀತಾ ಅಂಬಾನಿ, ಭಾರತ ಒಲಿಂಪಿಕ್ಸ್‌ ಆತಿಥ್ಯ ವಹಿಸುವ ದಿನ ದೂರವಿಲ್ಲ ಎಂದರು.

ಬಾಕ್ಸಿಂಗ್‌: ನಿಖತ್‌ ಜರೀನ್‌,ಪ್ರೀತಿ ಪವಾರ್‌ ಮುನ್ನಡೆ
ಪ್ಯಾರಿಸ್‌, ಜು. 28: ಎರಡು ಬಾರಿಯ ವಿಶ್ವ ಚಾಂಪಿಯನ್‌ ಬಾಕ್ಸರ್‌ ನಿಖತ್‌ ಜರೀನ್‌ ಮತ್ತು ಪ್ರೀತಿ ಪವಾರ್‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ರವಿವಾರ ನಡೆದ ವನಿತೆಯರ 50 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ನಿಖತ್‌ ಜರೀನ್‌ ಜರ್ಮನಿಯ ಮ್ಯಾಕ್ಸಿ ಕರಿನಾ ವಿರುದ್ಧ ಭಾರೀ ಹೋರಾಟ ಸಂಘಟಿಸಿ 5-0 ಅಂತರದ ಗೆಲುವು ಸಾಧಿಸಿದರು.

Advertisement

ಏಷ್ಯನ್‌ ಗೇಮ್ಸ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ 28 ವರ್ಷದ ನಿಖತ್‌ ಜರೀನ್‌ ಅವರಿಗೆ ಪ್ಯಾರಿಸ್‌ನಲ್ಲಿ ಯಾವುದೇ ಶ್ರೇಯಾಂಕ ಲಭಿಸಿಲ್ಲ. ಇವರ ಮುಂದಿನ ಎದುರಾಳಿ, ಅಗ್ರ ಶ್ರೇಯಾಂಕದ ಚೀನಿ ಬಾಕ್ಸರ್‌ ವು ಯು. ಇವರಿಗೆ ಮೊದಲ ಸುತ್ತಿನ ಬೈ ಲಭಿಸಿತ್ತು. ನಿಖತ್‌ ಜರೀನ್‌-ವು ಯು ನಡುವಿನ ಪಂದ್ಯ ಗುರುವಾರ ನಡೆಯಲಿದೆ.
ಮೊದಲ ಒಲಿಂಪಿಕ್ಸ್‌ ಕಾಣುತ್ತಿರುವ ಪ್ರೀತಿ ಪವಾರ್‌ 54 ಕೆಜಿ ವಿಭಾಗದಲ್ಲಿ ವಿಯೆಟ್ನಾಮ್‌ನ ವೊ ಥಿ ಕಿಮ್‌ ಆ್ಯನ್‌ ವಿರುದ್ಧ 5-0 ಅಂತರದಿಂದ ಗೆದ್ದರು.

ರೋವಿಂಗ್‌: ಕ್ವಾರ್ಟರ್‌ ಫೈನಲ್‌ಗೆ ಬಲ್ರಾಜ್‌
ಭಾರತದ ರೋವರ್‌ ಬಲ್ರಾಜ್‌ ಪನ್ವರ್‌ ಒಲಿಂಪಿಕ್ಸ್‌ ಸ್ಪರ್ಧೆಯ ಪುರುಷರ ಸ್ಕಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ರೆಪಿಶೇಜ್‌-2 ಸುತ್ತಿನಲ್ಲಿ ದ್ವಿತೀಯ ಸ್ಥಾನಿಯಾದರು.

ಬಾಲ್ರಾಜ್‌ ಪನ್ವರ್‌ 7 ನಿಮಿಷ, 12.41 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದರು. ಮೊರಕ್ಕೊದ ಕ್ವೆಂಟಿನ್‌ ಆ್ಯಂಟೊನೆಲ್ಲಿ ಪ್ರಥಮ ಸ್ಥಾನಿಯಾದರು (7:10.00). ಇಂಡೋನೇಷ್ಯಾದ ಮೆಮೊ ತೃತೀಯ ಸ್ಥಾನ ಸಂಪಾದಿಸಿದರು (7:19.60).

ಪ್ರತೀ ರೆಪಿಶೇಜ್‌ ಸುತ್ತಿನಲ್ಲಿ ಮೊದಲೆರಡು ಸ್ಥಾನ ಪಡೆದವರು ಕ್ವಾರ್ಟರ್‌ ಫೈನಲ್‌ ಅರ್ಹತೆ ಸಂಪಾದಿಸುತ್ತಾರೆ. ಈ ಸ್ಪರ್ಧೆ ಮಂಗಳವಾರ ನಡೆಯುತ್ತದೆ.
ಶನಿವಾರದ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆಯುವ ಮೂಲಕ (7:07.11) ಬಲಾÅಜ್‌ ಪನ್ವರ್‌ ರೆಪಿಶೇಜ್‌ ಸುತ್ತಿಗೆ ಅರ್ಹತೆ ಪಡೆದಿದ್ದರು.

ಆರ್ಚರಿ: ವನಿತೆಯರಿಗೆ ಕ್ವಾರ್ಟರ್‌ ಫೈನಲ್‌ ಸೋಲು
ಭಾರತದ ವನಿತಾ ಆರ್ಚರಿ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ನೆದರ್ಲೆಂಡ್ಸ್‌ ವಿರುದ್ಧ 0-6 ಅಂತರದಿಂದ ಸೋತು ನಿರ್ಗಮಿಸಿದೆ.
ಅಂಕಿತಾ ಭಕತ್‌, ಭಜನ್‌ ಕೌರ್‌ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತ ತಂಡ 51-52, 49-54, 48-53 ಅಂತರದಿಂದ ಡಚ್‌ ಬಿಲ್ಗಾರರಿಗೆ ಶರಣಾಯಿತು. ಅರ್ಹತಾ ಸುತ್ತಿನಲ್ಲಿ 4ನೇ ಸ್ಥಾನ ಪಡೆದ ಭಾರತದ ಆರ್ಚರಿ ತಂಡ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆದಿತ್ತು.

ಆರ್ಚರಿಯಲ್ಲಿ ಅತ್ಯಧಿಕ ಸ್ಕೋರ್‌ ದಾಖಲಿಸಿದ ತಂಡಕ್ಕೆ 2 ಅಂಕ, ಸಮನಾದರೆ ತಲಾ ಒಂದಂಕವನ್ನು ನೀಡಲಾಗುತ್ತದೆ.

ಸುಮಿತ್‌ ನಾಗಲ್‌ಗೆ ಸೋಲಿನ ಆಘಾತ
ಪುರುಷರ ಟೆನಿಸ್‌ ಸಿಂಗಲ್ಸ್‌ನಲ್ಲಿ ಭಾರತದ ಸುಮಿತ್‌ ನಾಗಲ್‌ ಮೊದಲ ಸುತ್ತಿನಲ್ಲೇ ಸೋಲಿನ ಆಘಾತ ಅನುಭವಿಸಿದ್ದಾರೆ. ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್‌ನ ಕೊರೆಂಟಿನ್‌ ಮೌಟೆಟ್‌ 6-2, 2-6, 7-5 ಅಂತರದಿಂದ ಸುಮಿತ್‌ಗೆ ಸೋಲುಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next