Advertisement

Olympics: ವಿದೇಶಿ ತಂಡಗಳಲ್ಲಿ ಭಾರತೀಯ ಮೂಲದ ಆ್ಯತ್ಲೀಟ್ಸ್‌ ವಿವರ ಇಲ್ಲಿದೆ 

11:23 PM Jul 22, 2024 | Team Udayavani |

ಹೊಸದಿಲ್ಲಿ: ಈ ಬಾರಿ ಭಾರತದಿಂದ ಪ್ಯಾರಿಸ್‌ ಒಲಿಂಪಿಕ್ಸ್‌ ಸ್ಪರ್ಧೆಗೆ ಇಳಿದಿರುವ ಭಾರತೀಯ ಕ್ರೀಡಾಪಟುಗಳ ಸಂಖ್ಯೆ 117. ಆದರೆ ಇವರ ಸಂಖ್ಯೆ ಇನ್ನೂ ಹೆಚ್ಚಿದೆ. ಹೇಗೆನ್ನುವಿರಾ? ಭಾರತೀಯ ಮೂಲದ ಕ್ರೀಡಾಳುಗಳನೇಕರು ಬೇರೆ ಬೇರೆ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಪದಕ ಗೆದ್ದರೆ ಭಾರತಕ್ಕೂ ಹೆಮ್ಮೆ. ಇಂಥ ಕೆಲವು ಆ್ಯತ್ಲೀಟ್‌ಗಳ ಪರಿಚಯ ಮಾಡಿಕೊಳ್ಳೋಣ.

Advertisement

ರಾಜೀವ್‌ ರಾಮ್‌ (ಟೆನಿಸ್‌, ಯುಎಸ್‌ಎ)


ಟೆನಿಸ್‌ನಲ್ಲಿ ಅಮೆರಿಕವನ್ನು ಪ್ರತಿನಿಧಿ ಸುತ್ತಿರುವ ರಾಜೀವ್‌ ರಾಮ್‌ಗೆ ಈಗ 40 ವರ್ಷ. ಇವರ ಹೆತ್ತವರು ಬೆಂಗಳೂರಿನಿಂದ ಅಮೆರಿಕಕ್ಕೆ ತೆರಳಿದವರು. ಡೆನ್ವರ್‌ನಲ್ಲಿ ರಾಜೀವ್‌ ರಾಮ್‌ ಜನನವಾಯಿತು. ಬೊಟಾನಿಸ್ಟ್‌ ಆಗಿದ್ದ ತಂದೆ ರಾಘವ್‌ ಈಗಿಲ್ಲ. ತಾಯಿ ಸುಷ್ಮಾ ಸೈಂಟಿಫಿಕ್‌ ಟೆಕ್ನೀಶಿಯನ್‌. ಆದರೆ ರಾಮ್‌ ಟೆನಿಸ್‌ ರ್ಯಾಕೆಟ್‌ ಕೈಗೆತ್ತಿಕೊಂಡರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ವೀನಸ್‌ ವಿಲಿಯಮ್ಸ್‌ ಜತೆಗೂಡಿ ಮಿಶ್ರ ಡಬಲ್ಸ್‌ ಚಿನ್ನ ಜಯಿಸಿದ ಸಾಧನೆ ರಾಜೀವ್‌ ರಾಮ್‌ ಅವರದು. ಈ ಸಲವೂ ಪದಕದ ದೊಡ್ಡ ನಿರೀಕ್ಷೆ ಇದೆ.

ಪೃತಿಕಾ ಪಾವಡೆ (ಟಿಟಿ, ಫ್ರಾನ್ಸ್‌)


ಪೃತಿಕಾ ಪಾವಡೆ ಅವರ ತಂದೆ ಪುದುಚೇರಿಯವರು. ಆದರೆ 2003ರಲ್ಲಿ ಮದುವೆ ಬಳಿಕ ಪ್ಯಾರಿಸ್‌ನಲ್ಲಿ ನೆಲೆ ನಿಂತರು. ಇಲ್ಲಿಯೇ ಪೃತಿಕಾ ಜನನವಾಯಿತು. ಆರರ ಹರೆಯದಲ್ಲೇ ತಂದೆಯಿಂದ ಟಿಟಿ ಮಾರ್ಗದರ್ಶನ ಲಭಿಸಿತು. ಕೇವಲ 16ನೇ ವರ್ಷದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡರು. ಅದು ಕಳೆದ ಸಲದ ಟೋಕಿಯೊ ಕ್ರೀಡಾಕೂಟವಾಗಿತ್ತು. ಕೆಮೆಸ್ಟ್ರಿ ಮತ್ತು ಎನ್ವರ್ನ್ಮೆಂಟಲ್‌ ಸೈನ್ಸ್‌ ಓದುತ್ತಿರುವ ಪೃತಿಕಾ ವನಿತಾ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

Advertisement

ಕನಕ್‌ ಜಾ (ಟಿಟಿ, ಯುಎಸ್‌ಎ)


ಭಾರತ ಮೂಲದ ಮತ್ತೋರ್ವ ಟಿಟಿಪಟು ಅಮೆರಿಕವನ್ನು ಪ್ರತಿನಿಧಿಸುತ್ತಿದ್ದಾರೆ. ಇವರೇ, 24 ವರ್ಷದ ಕನಕ್‌ ಜಾ. ಇವರ ತಂದೆ ಕೋಲ್ಕತಾದವರು, ತಾಯಿ ಮುಂಬಯಿಯವರು. ಕನಕ್‌ ಜಾ ಅವರ ಸಹೋದರಿ ಪ್ರಾಚಿ ಕೂಡ ಟಿಟಿ ಆಟಗಾರ್ತಿ. ಕನಕ್‌ ಜಾ 4 ಬಾರಿ ಯುಎಸ್‌ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದಾರೆ. ಕಳೆದೆರಡು ಒಲಿಂಪಿಕ್ಸ್‌ನಲ್ಲೂ ಪಾಲ್ಗೊಂಡಿದ್ದಾರೆ.

ಶಾಂತಿ ಪೆರೀರ (ಸಿಂಗಾಪುರ, ಆ್ಯತ್ಲೆಟಿಕ್ಸ್‌)


ಶಾಂತಿ ಪೆರೀರ ಅವರು ಸಿಂಗಾಪುರದ ಸ್ಪ್ರಿಂಟ್‌ ಕ್ವೀನ್‌ ಎಂದೇ ಖ್ಯಾತಿ ಪಡೆದಿದ್ದಾರೆ. ಇವರ ಬೇರು ಕೇರಳದಲ್ಲಿದೆ. ಅಜ್ಜ ತಿರುವನಂತಪುರ ಸಮೀಪದ ವೆಟ್ಟಿಕಾಡ್‌ನ‌ವರು. ಇವರಿಗೆ ಸಿಂಗಾಪುರದಲ್ಲಿ ಉದ್ಯೋಗ ಲಭಿಸಿದ ಕಾರಣ ಅಲ್ಲಿಯೇ ನೆಲೆ ನಿಂತರು. ಕಳೆದ ಏಷ್ಯಾಡ್‌ನ‌ಲ್ಲಿ ವನಿತೆಯರ 100 ಮೀ. ಓಟದಲ್ಲಿ ಬೆಳ್ಳಿ ಗೆದ್ದು ಸಿಂಗಾಪುರದ 49 ವರ್ಷಗಳ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಪದಕದ ಬರಗಾಲ ನೀಗಿಸಿದ ಹೆಗ್ಗಳಿಕೆ ಶಾಂತಿ ಅವರದು. “ಗೋ ಶಾಂತಿ ಗೋ!’ ಎಂಬ ಮಕ್ಕಳ ಪುಸ್ತಕವನ್ನೂ ಬರೆದಿದ್ದಾರೆ.

ಅಮರ್‌ ಧೇಸಿ (ಕುಸ್ತಿ, ಕೆನಡಾ)


ಕುಸ್ತಿಪಟು ಅಮರ್‌ ಧೇಸಿ ಜನಿಸಿದ್ದು ಬ್ರಿಟಿಷ್‌ ಕೊಲಂಬಿಯಾದಲ್ಲಿ. ತಂದೆ ಪಂಜಾಬ್‌ನ ಜಾಲಂಧರ್‌ ಜಿಲ್ಲೆಯ ಸಂಗ್ವಾಲ್‌ನವರು. ಪಂಜಾಬ್‌ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಲಭಿಸಿದರೂ 1979ರಲ್ಲಿ ಕೆನಡಾಕ್ಕೆ ವಲಸೆ ಹೋದರು. ಅಲ್ಲಿ ರೆಸ್ಲಿಂಗ್‌ ಕ್ಲಬ್‌ ಒಂದನ್ನು ಆರಂಭಿಸಿದರು. ಇಲ್ಲಿಯೇ ಅಮರ್‌ ಧೇಸಿ ಹಾಗೂ ಅಣ್ಣ ಪರಮ್‌ವೀರ್‌ ಅಭ್ಯಾಸ ನಡೆಸಿದರು. ಅಮರ್‌ಗೆ ಸ್ಫೂರ್ತಿಯಾದವರು ಲಂಡನ್‌ ಗೇಮ್ಸ್‌ನಲ್ಲಿ ಕಂಚು ಗೆದ್ದ ಯೋಗೇಶ್ವರ್‌ ದತ್‌.

Advertisement

Udayavani is now on Telegram. Click here to join our channel and stay updated with the latest news.

Next