Advertisement

ಕೋವಿಡ್‌ 19 ಭೀತಿ ಲೆಕ್ಕಿಸದೆ ಒಲಿಂಪಿಕ್ಸ್‌ ಜ್ಯೋತಿ ವೀಕ್ಷಣೆ

10:01 AM Mar 28, 2020 | Sriram |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ ಜ್ಯೋತಿಗೆ ಜಪಾನ್‌ನಲ್ಲಿ ಭವ್ಯ ಸ್ವಾಗತ ಸಿಗದೇ ಇರಬಹುದು, ಆದರೆ ಇದನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳು ಮುಗಿಬಿದ್ದಿದ್ದಾರೆ. ಸಾವಿರಾರು ಮಂದಿ ನಿರ್ದಿಷ್ಟ ಅಂತರ ಕಾಯ್ದುಕೊಂಡು, ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಂತು ಜ್ಯೋತಿಯನ್ನು ಕಣ್ತುಂಬಿಸಿಕೊಂಡರು.

Advertisement

ಶನಿವಾರ ಮತ್ತು ರವಿವಾರ ದೇಶದ ಈಶಾನ್ಯ ಭಾಗಗಳಲ್ಲಿ ಒಲಿಂಪಿಕ್ಸ್‌ ಜ್ಯೋತಿ ಸಂಚರಿಸಿತು. ಸುಮಾರು 50 ಸಾವಿರದಷ್ಟು ಮಂದಿ ಇದನ್ನು ವೀಕ್ಷಿಸಿದರು. ಮಿಯಾಗಿಯ ಸೆಂಡೈ ಸ್ಟೇಷನ್‌ನಲ್ಲಿ ಜ್ಯೋತಿ ಆಗಮಿಸಿದಾಗ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು.

ಎಲ್ಲರೂ ಜ್ಯೋತಿಯಿಂದ ಬಹುತೇಕ 50 ಅಡಿ ಅಂತರ ಕಾಯ್ದುಕೊಂಡಿದ್ದರು. ಎಲ್ಲರೂ ಮಾಸ್ಕ್ ಧರಿಸಿದ್ದರು. ಜತೆಗೆ ಸೆಲ್ಫಿ ತೆಗೆದು ಸಂಭ್ರಮಿಸಿದರು ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

“ನಾನು ಸುಮಾರು 3 ಗಂಟೆ ಕಾಲ ಕ್ಯೂ ನಿಂತಿದ್ದೆ. ಒಲಿಂಪಿಕ್ಸ್‌ ಜ್ಯೋತಿಯ ದರ್ಶನವಾದಾಗ ಹೊಸ ಸ್ಫೂರ್ತಿ ಲಭಿಸಿದಂತಾಯಿತು’ ಎಂದು 70ರ ಹರೆಯದ ಮಹಿಳೆಯೊಬ್ಬರು ಹೇಳಿದ್ದಾರೆ.

ನಿರೀಕ್ಷಿತ ಸಂಖ್ಯೆಗಿಂತ ಹೆಚ್ಚಿನ ಜನರು ಸೇರಿದರೆ, ನೂಕುನುಗ್ಗಲು ಸಂಭವಿಸಿದರೆ ಈ ಕಾರ್ಯ ಕ್ರಮವನ್ನು ರದ್ದುಗೊಳಿಸುವುದಾಗಿ ಸಂಘಟಕರು ಹೇಳಿದ್ದರು. ಆದರೆ ಎಲ್ಲರೂ ಶಿಸ್ತಿನಿಂದ ಇದ್ದ ಕಾರಣ ವಾರಾಂತ್ಯದ ಕ್ರೀಡಾ ಜ್ಯೋತಿ ವೀಕ್ಷಣೆಯ ಕಾರ್ಯಕ್ರಮ ಯಶಸ್ವಿಗೊಂಡಿತು.

Advertisement

ಸದಸ್ಯ ರಾಷ್ಟ್ರಗಳ ಅಭಿಪ್ರಾಯ ಕೇಳಿದ ಐಒಸಿ
ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ತೀವ್ರ ಒತ್ತಡದಲ್ಲಿದೆ. ಟೋಕಿಯೊ ಒಲಿಂಪಿಕ್ಸ್‌ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುವುದು ಎಂಬ ಬಗ್ಗೆ ಭಾರೀ ಗೊಂದಲದಲ್ಲಿದೆ. ರವಿವಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನಿಟ್ಟಿರುವ ಐಒಸಿ, ತನ್ನೆಲ್ಲ ಸದಸ್ಯ ರಾಷ್ಟ್ರಗಳ ಜತೆ ಕೋವಿಡ್‌ 19 ವೈರಸ್‌ ತೀವ್ರತೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಆರಂಭಿಸಿದೆ.

“ನಿಮ್ಮ ದೇಶದಲ್ಲಿ ಕೊರೊನಾ ಎಷ್ಟರ ಮಟ್ಟಿಗೆ ಆತಂಕ ಸೃಷ್ಟಿಸಿದೆ, ಇದರಿಂದ ಆ್ಯತ್ಲೀಟ್‌ಗಳ ಕ್ರೀಡಾ ಅಭ್ಯಾಸಕ್ಕೆ ಹಾಗೂ ಒಲಿಂಪಿಕ್ಸ್‌ ತಯಾರಿಗೆ ಎಷ್ಟರ ಮಟ್ಟಿಗೆ ಹಿನ್ನಡೆಯಾಗಿದೆ…’ ಎಂಬ ಕುರಿತು ಮಾಹಿತಿ ಸಂಗ್ರಹಿಸತೊಡಗಿದೆ. ಸದಸ್ಯ ರಾಷ್ಟ್ರಗಳು ನೀಡುವ ಅಭಿಪ್ರಾಯವನ್ನೆಲ್ಲ ಒಟ್ಟುಗೂಡಿಸಿ ಟೋಕಿಯೊ ಒಲಿಂಪಿಕ್ಸ್‌ ಬಗ್ಗೆ ಅಂತಿಮ ನಿರ್ಧಾರವೊಂದಕ್ಕೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next