Advertisement

ಒಲಿಂಪಿಕ್‌ ಟೆಸ್ಟ್‌ ಹಾಕಿ ಸರಣಿ: ಭಾರತ ತಂಡಗಳ ಗೆಲುವಿನ ಆರಂಭ

10:51 AM Aug 19, 2019 | Team Udayavani |

ಟೋಕಿಯೊ: ಒಲಿಂಪಿಕ್‌ ಹಾಕಿ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಗಳೆರಡೂ ಗೆಲುವಿನ ಆರಂಭ ಪಡೆದಿವೆ. ಶನಿವಾರದ ಮುಖಾಮುಖೀಗಳಲ್ಲಿ ಮೊದಲು ವನಿತೆಯರು ಆತಿಥೇಯ ಜಪಾನ್‌ಗೆ 2-1ರಿಂದ ಆಘಾತವಿಕ್ಕಿದರೆ, ಬಳಿಕ ಪುರುಷರು ಮಲೇಶ್ಯ ಮೇಲೆ ಸವಾರಿ ಮಾಡಿ 6-0 ಅಂತರದ ಪ್ರಚಂಡ ಗೆಲುವು ಸಾಧಿಸಿದರು.

Advertisement

ಮಿಂಚಿದ ಗುರ್ಜೀತ್‌ ಕೌರ್‌
ಭಾರತದ ಪೆನಾಲ್ಟಿ ಕಾರ್ನರ್‌ ಸ್ಪೆಷಲಿಸ್ಟ್‌, 23ರ ಹರೆಯದ ಗುರ್ಜೀತ್‌ ಕೌರ್‌ ಎರಡೂ ಗೋಲು ಬಾರಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಆಕ್ರಮಣಕಾರಿಯಾಗಿ ಆಟ ಆರಂಭಿಸಿದ ಭಾರತಕ್ಕೆ ಮೊದಲ 10 ನಿಮಿಷದಲ್ಲೇ ಗೋಲು ಗಳಿಕೆಯ ಕೆಲವು ಅವಕಾಶ ಲಭಿಸಿತ್ತು. 9ನೇ ನಿಮಿಷದಲ್ಲಿ ಗುರ್ಜೀತ್‌ ಕೌರ್‌ ಖಾತೆ ತೆರೆಯುವ ಮೂಲಕ ಮುನ್ನಡೆ ಒದಗಿಸಿದರು. ಈ ಗೋಲು ಪೆನಾಲ್ಟಿ ಕಾರ್ನರ್‌ ಮೂಲಕ ಬಂತು.

ಜಪಾನ್‌ ಕೂಡ ಆಕ್ರಮಣಕಾರಿ ಆಟಕ್ಕೆ ಮುಂದಾದ್ದರಿಂದ 16ನೇ ನಿಮಿಷದಲ್ಲೇ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಯಿತು. ಅಕಿ ಮಿತ್ಸುಹಶಿ ಫೀಲ್ಡ್‌ಗೋಲ್‌ ಮೂಲಕ ಭಾರತದ ಮೇಲೆರಗಿದರು.

ಮಧ್ಯಾಂತರದ ವೇಳೆ ಪಂದ್ಯ 1-1 ಸಮಬಲದಲ್ಲಿತ್ತು. 3ನೇ ಕ್ವಾರ್ಟರ್‌ನಲ್ಲಿ ಭಾರತವೇ ಮೇಲುಗೈ ಸಾಧಿಸುತ್ತ ಹೋಯಿತು. ಪರಿಣಾಮ, 35ನೇ ನಿಮಿಷದಲ್ಲಿ ಗುರ್ಜೀತ್‌ ಬಾರಿಸಿದ ಗೋಲು. ಅವರು ಮತ್ತೂಂದು ಜಬರ್ದಸ್ತ್ ಪೆನಾಲ್ಟಿ ಕಾರ್ನರ್‌ ಹೊಡೆತದ ಮೂಲಕ ಭಾರತಕ್ಕೆ ಮುನ್ನಡೆ ತಂದಿತ್ತರು. ಈ ಮುನ್ನಡೆ ಕೊನೆಯ ತನಕ ಉಳಿದುಕೊಂಡಿತು.

16 ಆಟಗಾರ್ತಿಯರು
ಒಲಿಂಪಿಕ್‌ ಗೇಮ್‌ ನಿಯಮಾವಳಿಯಂತೆ ಎರಡೂ ತಂಡಗಳು 16 ಆಟಗಾರರನ್ನು ಕಣಕ್ಕಿಳಿಸಿದವು. ಬದಲಿ ಆಟಗಾರರಾಗಿ ಅವಕಾಶ ಪಡೆದರು. ಜಪಾನಿನ ಅಕಿ ಮಿತ್ಸುಹಶಿ ಬದಲಿ ಆಟಗಾರ್ತಿಯಾಗಿಯೇ ಬಂದು ಗೋಲು ಹೊಡೆದಿದ್ದರು.

Advertisement

ಇದೇ ಕೂಟದ ಪುರುಷರ ವಿಭಾಗದ ಪಂದ್ಯದಲ್ಲೂ ಭಾರತ ಗೆಲುವಿನ ಆರಂಭ ಮಾಡಿದೆ. ಮಲೇಶ್ಯವನ್ನು 6-0 ಗೋಲುಗಳಿಂದ ಮಣಿಸಿ ಮೆರೆದಾಡಿದೆ.

ಆರಂಭದ ನಿಮಿಷದಲ್ಲೇ ಮಲೇಶ್ಯ ಮೇಲೆ ಮುನ್ನುಗ್ಗಿ ಹೋದ ಭಾರತ, ಸಿಕ್ಕಿದ ಅವಕಾಶಗಳನ್ನೆಲ್ಲ ಬಳಸಿಕೊಂಡಿದ್ದರೆ ಇನ್ನೂ ಏಳೆಂಟು ಗೋಲುಗಳನ್ನು ಬಾರಿಸಬಹುದಿತ್ತು.

ಭಾರತದ ಪರ ಗುರ್ಜಿಂದರ್‌ ಸಿಂಗ್‌ 8ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಗುರುಸಾಹಿಬ್‌ಜೀತ್‌ ಸಿಂಗ್‌ (18ನೇ, 56ನೇ ನಿಮಿಷ) ಮತ್ತು ನಾಯಕ ಮನ್‌ದೀಪ್‌ ಸಿಂಗ್‌ (33ನೇ, 46ನೇ ನಿಮಿಷ) ತಲಾ 2 ಗೋಲು ಹೊಡೆದರು. ಕೊನೆಯ ಗೋಲನ್ನು ಎಸ್‌.ವಿ. ಸುನೀಲ್‌ ಸಿಡಿಸಿದರು (60ನೇ ನಿಮಿಷ).ಭಾರತ ರವಿವಾರ ನ್ಯೂಜಿಲ್ಯಾಂಡನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next