Advertisement

ಜಪಾನ್‌ಗೆ ಬಂತು ಒಲಿಂಪಿಕ್ಸ್‌ ಜ್ಯೋತಿ

10:11 AM Mar 22, 2020 | Sriram |

ಹಿಗಶಿಮತ್ಸುಶಿಮ (ಜಪಾನ್‌): ಒಲಿಂಪಿಕ್ಸ್‌ ಜ್ಯೋತಿ ಶುಕ್ರವಾರ ಜಪಾನ್‌ಗೆ ಆಗಮಿಸಿತು. ಭಾರೀ ಸಂಭ್ರಮದಲ್ಲಿ ನಡೆಯಬೇಕಿದ್ದ ಜ್ಯೋತಿಯನ್ನು ಸ್ವಾಗತಿಸುವ ಕಾರ್ಯಕ್ರಮ ಕೋವಿಡ್‌ 19  ವೈರಸ್‌ ಹಾವಳಿಯಿಂದಾಗಿ ಬಹಳ ನೀರಸವಾಗಿ ಸಾಗಿತು.
ಒಲಿಂಪಿಕ್ಸ್‌ ಜ್ಯೋತಿಯಿದ್ದ ವಿಶೇಷ ವಿಮಾನ ಮಿಯಗಿ ಪ್ರಾಂತ್ಯದ ಮತ್ಸುಶಿಮ ವಾಯುನೆಲೆಯಲ್ಲಿ ಬಂದಿಳಿಯಿತು. 2011ರಲ್ಲಿ ಭೂಕಂಪ, ಸುನಾಮಿ ಮತ್ತು ಅಣು ಸ್ಥಾವರ ಸ್ಫೋಟದಿಂದ ನಲುಗಿದ ಫ‌ುಕುಶಿಮದ ಪರಿಹಾರ ಕಾರ್ಯಾಚರಣೆಯ ನೆಲೆಯಾಗಿ ಮತ್ಸುಶಿಮ ಕಾರ್ಯಾಚರಿಸಿತ್ತು. ಫ‌ುಕುಶಿಮ ಈಗ ಮರಳಿ ಎದ್ದು ನಿಂತಿರುವುದನ್ನು ಜಗತ್ತಿಗೆ ತೋರಿಸಿಕೊಡುವ ಸಲುವಾಗಿ ಜಪಾನ್‌ ಒಲಿಂಪಿಕ್ಸ್‌ ಜ್ಯೋತಿಯ ರಿಲೆಯನ್ನು ಇಲ್ಲಿಂದಲೇ ಪ್ರಾರಂಭಿಸಲಿದೆ. ಹೀಗಾಗಿ ಇದನ್ನು “ರಿಕವರಿ ಒಲಿಂಪಿಕ್ಸ್‌’ ಎಂದು ಜಪಾನ್‌ ಬಣ್ಣಿಸುತ್ತಿದೆ.

Advertisement

ಚೆರ್ರಿ ಬ್ಲಾಸಮ್‌ ವಿನ್ಯಾಸ
ಜಪಾನಿನ ಮಾಜಿ ಒಲಿಂಪಿಯನ್‌ರಾದ ಸಾವೊರಿ ಯೋಶಿದ ಮತ್ತು ತಡಹಿರೊ ನೊಮುರ ವಿಮಾನದಿಂದ ಜ್ಯೋತಿಯನ್ನು ಸ್ವೀಕರಿಸಿ ಅಗ್ಗಿಷ್ಟಿಕೆಯತ್ತ ಒಯ್ದರು. ಜಪಾನ್‌ನಲ್ಲಿ ರಿಲೇಗೆ ಒಯ್ಯುವ ಒಲಿಂಪಿಕ್ಸ್‌ ಜ್ಯೋತಿಯನ್ನು ದೇಶದ ರಾಷ್ಟ್ರೀಯ ಪುಷ್ಪವಾದ “ಚೆರ್ರಿ ಬ್ಲಾಸಮ್‌’ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಜ್ಯೋತಿಯನ್ನು ಸ್ವಾಗತಿಸಲು ಆಯ್ದ ಕೆಲವು ಗಣ್ಯರು ಮಾತ್ರ ಉಪಸ್ಥಿತರಿದ್ದರು.

ಸ್ಥಳೀಯ 200 ಮಕ್ಕಳು ಒಲಿಂಪಿಕ್ಸ್‌ ಜ್ಯೋತಿಯನ್ನು ಸ್ವಾಗತಿಸುವ ಅದ್ದೂರಿ ಕಾರ್ಯಕ್ರಮದ ರೂಪುರೇಷೆಯನ್ನು ಜಪಾನ್‌ ಒಲಿಂಪಿಕ್ಸ್‌ ಸಂಘಟಕರು ಸಿದ್ಧಪಡಿಸಿದ್ದರು. ಆದರೆ ಕೊರೊನಾದಿಂದಾಗಿ ಈ ಕಾರ್ಯಕ್ರಮ ರದ್ದಾಯಿತು.

ಒಲಿಂಪಿಕ್ಸ್‌ ಮುಖ್ಯ ಸಂಘಟಕ ಯೊಶಿರೊ ಮೋರಿಯ ಪುಟ್ಟ ಭಾಷಣದ ಬಳಿಕ ಒಲಿಂಪಿಕ್ಸ್‌ ಜ್ಯೋತಿಯಿಂದ ಅಗ್ಗಿಷ್ಟಿಕೆಯನ್ನು ಬೆಳಗಿಸಲಾಯಿತು.

ರಿಲೇ ವೀಕ್ಷಣೆಗೆ ಅವಕಾಶ
ಮಾ. 26ರಿಂದ ಜಪಾನ್‌ನಲ್ಲಿ ಒಲಿಂಪಿಕ್ಸ್‌ ಜ್ಯೋತಿಯ ರಿಲೇ ಪ್ರಾರಂಭವಾಗಲಿದೆ. ಒಲಿಂಪಿಕ್ಸ್‌ ಕೂಟದ ಪೂರ್ವದಲ್ಲಿ ನಡೆಯುವ ಅತೀ ದೊಡ್ಡ ಮತ್ತು ಅತ್ಯಂತ ಮುಖ್ಯವಾಗಿರುವ ಕಾರ್ಯಕ್ರಮ ಜ್ಯೋತಿಯ ರಿಲೇ. ಇದನ್ನು ಯಾವ ಕಾರಣಕ್ಕೂ ರದ್ದುಪಡಿಸುವುದಿಲ್ಲ ಎಂದು ಜಪಾನ್‌ ಹೇಳಿದೆ.

Advertisement

ರಿಲೇಯನ್ನು ನೋಡಲು ಜನರಿಗೆ ಅವಕಾಶ ಇದೆ. ಆದರೆ ಇದೇ ವೇಳೆ ಜನರು ಗುಂಪುಗೂಡಬಾರದು ಎಂದು ಜಪಾನ್‌ ಸರಕಾರ ವಿನಂತಿಸಿಕೊಂಡಿದೆ. ಒಂದು ವೇಳೆ ಜನಜಂಗುಳಿ ವಿಪರೀತವಾದರೆ ಕಾರ್ಯಕ್ರಮವನ್ನು ಬದಲಾಯಿಸುವ ಸಾಧ್ಯತೆಯೂ ಇದೆ ಎಂದು ಒಲಿಂಪಿಕ್ಸ್‌ ಸಂಘಟಕರು ಎಚ್ಚರಿಕೆ ನೀಡಿದ್ದಾರೆ.

ರಿಲೇಯಲ್ಲಿ ಭಾಗವಹಿಸುವವರ ದೇಹದ ತಾಪಮಾನವನ್ನು ದಿನವೂ ಅಳೆಯಲಾಗುವುದು. ಜು. 24ರಂದು ಒಲಿಂಪಿಕ್ಸ್‌ ಪ್ರಾರಂಭವಾಗುವ ಮೊದಲು 121 ದಿನ ಒಲಿಂಪಿಕ್ಸ್‌ ಜ್ಯೋತಿಯ ರಿಲೇ ನಡೆಯಲಿದೆ. ಅಂತಿಮವಾಗಿ ಜ್ಯೋತಿ ಒಲಿಂಪಿಕ್ಸ್‌ ತಾಣವಾದ ಟೋಕಿಯೊಗೆ ಆಗಮಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next