Advertisement
77 ವರ್ಷದ ಬಲ್ಬಿರ್ ಸಿಂಗ್ ಶುಕ್ರವಾರ ಅಪರಾಹ್ನ ಪಂಜಾಬ್‌ನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು ಎಂಬುದಾಗಿ ಅವರ ಪುತ್ರ ಕಮಲ್ಬಿರ್ ಸಿಂಗ್ ಅಮೆರಿಕದಿಂದ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು. ಅಮೆರಿಕ ದಿಂದ ಪುತ್ರ ಹಾಗೂ ಮೊಮ್ಮಕ್ಕಳು ಬಂದ ಬಳಿಕ ಸೋಮವಾರ ಬಲ್ಬಿರ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಬಲ್ಬಿರ್ ಅಗಲಿದ್ದಾರೆ.
1968ರ ಒಲಿಂಪಿಕ್ಸ್ ಹಾಕಿ ಕಂಚಿನ ಪದಕ ವಿಜೇತ ಭಾರತ ತಂಡದ ಸದಸ್ಯನಾಗಿದ್ದ ಬಲ್ಬಿರ್ ಸಿಂಗ್, 1963ರಲ್ಲಿ ಮೊದಲ ಸಲ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅದು ಫ್ರಾನ್ಸ್ ವಿರುದ್ಧ ಲಿಯೋನ್‌ನಲ್ಲಿ ನಡೆದ ಸರಣಿಯಾಗಿತ್ತು. ಫಾರ್ವರ್ಡ್ ಆಟಗಾರನಾಗಿದ್ದ ಬಲ್ಬಿರ್ ಸಿಂಗ್ ಬೆಲ್ಜಿಯಂ, ಇಂಗ್ಲೆಂಡ್, ನೆದರ್ಲೆಂಡ್ಸ್, ನ್ಯೂಜಿಲ್ಯಾಂಡ್, ಪಶ್ಚಿಮ ಜರ್ಮನಿ ಮೊದಲಾದ ಕಡೆ ಪ್ರವಾಸ ತೆರಳಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಬಲ್ಬಿರ್ ಸಿಂಗ್ 1966ರ ಬ್ಯಾಂಕಾಕ್ ಏಶ್ಯನ್ ಗೇಮ್ಸ್ ಬಂಗಾರ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. 1968ರ ಮೆಕ್ಸಿಕೊ ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದಾಗಲೂ ತಂಡದಲ್ಲಿದ್ದರು. ಬಲ್ಬಿರ್ ಸಿಂಗ್ ನಿಧನಕ್ಕೆ ಹಾಕಿ ಇಂಡಿಯಾ ತನ್ನ ತೀವ್ರ ಸಂತಾಪ ವ್ಯಕ್ತಪಡಿಸಿದೆ.