Advertisement

ಮಂಗಳೂರಿನಲ್ಲೂ ಪತ್ತೆಯಾಯ್ತು ಆಲಿವ್‌ ರಿಡ್ಲೆ ಮೊಟ್ಟೆ

11:42 PM Jan 20, 2024 | Team Udayavani |

ಮಂಗಳೂರು: ಕಡಲತೀರಕ್ಕೆ ಬಂದು ಮೊಟ್ಟೆಗಳನ್ನಿಟ್ಟು ಹೋಗುವ ವಿಶಿಷ್ಟ ಬದುಕಿನ ಆಲಿವ್‌ ರಿಡ್ಲೆ ಕಡಲಾಮೆ ಮೊಟ್ಟೆಗಳು ಮಂಗಳೂರಿನಲ್ಲೂ ಪತ್ತೆಯಾಗಿವೆ. ಇದುವರೆಗೆ ಈ ಆಮೆಗಳ ಮೊಟ್ಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿ ರುವುದು ದಾಖಲಾಗಿಲ್ಲ.

Advertisement

ಸುರತ್ಕಲ್‌ ಆಸುಪಾಸಿನ ಕಡಲತೀರದ ಮೂರು ಕಡೆಗಳಲ್ಲಿ ಆಲಿವ್‌ ರಿಡ್ಲೆ ಅಮೆಗಳು ಬಂದು ಮೊಟ್ಟೆ ಇರಿಸಿ ಹೋಗಿರುವುದನ್ನು ಅರಣ್ಯ ಇಲಾಖೆ ಸಿಬಂದಿ ಪತ್ತೆ ಮಾಡಿದ್ದು, ಸಂರಕ್ಷಣೆಗೂ ಕ್ರಮ ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಕುಂದಾಪುರದಲ್ಲಿ ಆಲಿವ್‌ ರಿಡ್ಲೆ ಆಮೆಗಳು ಬಂದು ಮೊಟ್ಟೆ ಇರಿಸಿ ಹೋಗುವುದು ದಾಖಲಾಗುತ್ತಿತ್ತು. ಮಂಗಳೂರಿನಲ್ಲಿ ಬೀಚ್‌ಗಳಲ್ಲಿ ಮಾನವ ಚಟುವಟಿಕೆ ಹೆಚ್ಚಿರುವ ಕಾರಣ ಎಲ್ಲೂ ಕಂಡುಬರುತ್ತಿರಲಿಲ್ಲ. ಹಾಗಾಗಿ ಅರಣ್ಯ ಇಲಾಖೆ ಈ ಬಾರಿ ಮುನ್ನೆಚ್ಚರಿಕೆ ವಹಿಸಿ ಕಡಲ ತೀರದಲ್ಲಿ ಮೂರು ಕಣ್ಗಾವಲು ತಂಡ ರಚಿಸಿತ್ತು. ತಂಡದವರು ರಾತ್ರಿ ಕಡಲ ತೀರದಲ್ಲಿ ಕಾವಲು ನಡೆಸುತ್ತಿದ್ದರು. ಮಾನವ ಚಟುವಟಿಕೆ ಮೇಲೆ ನಿಯಂತ್ರಣ ಇದ್ದ ಕಾರಣ ಮೂರು ಕಡೆಗಳಲ್ಲಿ ಮೊಟ್ಟೆ ಇರಿಸಿರುವುದು ಪತ್ತೆಯಾಗಿದೆ. ಅವುಗಳಲ್ಲಿ ಎರಡು ಕಡೆ ಉಬ್ಬರದಲೆಗಳು ಬಡಿಯುವ ಕಾರಣ ಅವುಗಳನ್ನು ಅಲ್ಲಿಂದ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

ರಾತ್ರಿಯೇ ಮೊಟ್ಟೆ ಇರಿಸುವಿಕೆ
ಆಲಿವ್‌ ರಿಡ್ಲೆ ಆಮೆ ನಾಚಿಕೆ ಸ್ವಭಾವ ಹಾಗೂ ನಿಧಾನವಾಗಿ ಸಂಚರಿಸುವ ಗುಣವುಳ್ಳದ್ದು. ಮಧ್ಯರಾತ್ರಿ, ಮುಂಜಾವ ತೀರಕ್ಕೆ ದೊಡ್ಡ ಅಲೆಗಳ ಸಂದರ್ಭ ಒಟ್ಟಿಗೆ ಬಂದು ಮೊಟ್ಟೆ ಇರಿಸಿ ಮರಳುತ್ತವೆ. ಅಚ್ಚರಿ ಎಂದರೆ ಮೊಟ್ಟೆ ಇರಿಸಿದ ಬಳಿಕ ಅವು ಇತ್ತ ಕಡೆ ಬರುವುದೇ ಇಲ್ಲ, ಮೊಟ್ಟೆಗಳು ತಾವಾಗಿ ಒಡೆದು ಮರಿಯಾಗುತ್ತವೆ.ಉಬ್ಬರದ ಆಲೆಗಳು ಬಡಿದರೆ ಮೊಟ್ಟೆಗಳು ಶಿಲೀಂಧ್ರದ ಸೋಂಕಿಗೊಳಗಾಗಿ ಹಾಳಾಗುವ ಸಾಧ್ಯತೆ ಇರುವುದರಿಂದ ಅವುಗಳನ್ನು ಪ್ರತ್ಯೇಕಿಸಿ ಅದೇ ಜಾಗದ ಮರಳನ್ನೇ ತಂದು ಅಷ್ಟೇ ಹೊಂಡ ಮಾಡಿ ಇರಿಸಲಾಗಿದೆ. ಬಳಿಕ ಮರಳು ಮುಚ್ಚಲಾಗಿದೆ. ಅದರ ಮೇಲೆ ನಾಯಿಗಳು, ಮನುಷ್ಯರು ಹೋಗಿ ಹಾಳು ಮಾಡದಂತೆ ಮೆಷ್‌ ಹಾಕಿ ಸುರಕ್ಷೆಯನ್ನೂ ಒದಗಿಸಲಾಗಿದೆ. ಮೊಟ್ಟೆ ಒಡೆದು ಮರಿಯಾಗುವುದಕ್ಕೆ ಸುಮಾರು 45 ದಿನಗಳ ಕಾಲಾವಕಾಶದ ಅಗತ್ಯವಿದೆ.

ಸ್ಥಳೀಯರಲ್ಲಿ ಜಾಗೃತಿ
ಕಡಲಾಮೆ ಮೊಟ್ಟೆಗಳ ಸಂರಕ್ಷಣೆ ಬಗ್ಗೆ ಕಡಲ ಕಿನಾರೆಯ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಅಲ್ಲದೆ ಕಣ್ಗಾವಲು ತಂಡದಲ್ಲಿ ಸ್ಥಳೀಯರೇ ಇದ್ದಾರೆ. ಇಂತಹ ಕಡಲಾಮೆ ಮೊಟ್ಟೆ ಇರಿಸಿದ್ದನ್ನು ಪತ್ತೆ ಮಾಡಿ ತಿಳಿಸಿದರೆ ಬಹುಮಾನವನ್ನೂ ಘೋಷಿಸಲಾಗಿದೆ. ಹಿಂದೆ ಇದರ ಬಗ್ಗೆ ನಮ್ಮ ಸಿಬಂದಿಗೇ ಸರಿಯಾದ ಮಾಹಿತಿ ಇಲ್ಲ, ಈಗ ಅವರಲ್ಲಿ ಕೂಡ ಉತ್ಸಾಹ ಇದೆ ಎಂದು ಡಿಸಿಎಫ್‌ ಮರಿಯಪ್ಪ ತಿಳಿಸುತ್ತಾರೆ. ಒಂದು ಆಮೆ ಒಮ್ಮೆಗೆ 100ರಷ್ಟು ಮೊಟ್ಟೆ ಇರಿಸುತ್ತದೆ. ಸಾಮಾನ್ಯವಾಗಿ ನವೆಂಬರ್‌, ಡಿಸೆಂಬರ್‌ನಲ್ಲಿ ಮೊಟ್ಟೆ ಇರಿಸುವು ದಾದರೂ ಹವಾಮಾನ ಬದ ಲಾವಣೆಯಾಗುತ್ತಿರುವ ಕಾರಣ ದಿಂದಲೋ ಏನೋ ಈ ಬಾರಿ ಡಿಸೆಂಬರ್‌ನಲ್ಲಿ ಮೊದಲ ಬಾರಿ ಸುರತ್ಕಲ್‌ನಲ್ಲಿ ಪತ್ತೆಯಾಗಿದ್ದರೆ ಜನವರಿಯಲ್ಲೂ ಎರಡು ಕಡೆ ಪತ್ತೆಯಾಗಿವೆ.

ಆಲಿವ್‌ ರಿಡ್ಲೆ ಕಡಲಾಮೆಗಳು ಮೊಟ್ಟೆ ಇರಿಸಿದ್ದನ್ನು ನಮ್ಮ ಕಡೆ ಪತ್ತೆ ಮಾಡುವುದು ಕಷ್ಟ. ಒಡಿಶಾದಲ್ಲಿ ಸಾಮೂಹಿಕವಾಗಿ ಅವು ಬಂದು ಮೊಟ್ಟೆ ಇರಿಸುತ್ತವೆ. ಆದರೆ ನಮ್ಮ ಕರಾವಳಿಯಲ್ಲಿ ಕೆಲವೇ ಆಮೆಗಳು ಬಂದು ಎಲ್ಲೋ ಒಂದು ಕಡೆ ಮೊಟ್ಟೆ ಇಡುವುದರಿಂದ ಅವುಗಳನ್ನು ಹುಡುಕಿ ಸಂರಕ್ಷಿಸುವುದು ಸವಾಲು. ಸದ್ಯ ಮೂರು ಕಡೆ ಮೊಟ್ಟೆಗಳು ಪತ್ತೆಯಾಗಿದ್ದು ಸಂರಕ್ಷಿಸುತ್ತಿದ್ದೇವೆ.
– ಆ್ಯಂಟನಿ ಮರಿಯಪ್ಪ, ಡಿಸಿಎಫ್‌, ಮಂಗಳೂರು

Advertisement

– ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next