“ರಿವಾಲ್ವರ್ ದಾದಿ’ ಅಂತಲೇ ಹೆಸರು ಮಾಡಿರುವ ಈ ಹಿರಿಯ ಜೀವದ ಹೆಸರು ಚಂದ್ರೋ ತೋಮರ್. ವಯಸ್ಸು 80. ಶೂಟಿಂಗ್‌ನಲ್ಲಿ ಗೆದ್ದು ಈಕೆ ಪಡೆದ ಮೆಡಲ್ಲುಗಳ ಸಂಖ್ಯೆ 146! ಈ ಅಜ್ಜಿ ಏಕೆ ಪಿಸ್ತೂಲ್ ಕೈಗೆತ್ತಿಕೊಂಡಳು? ಜಗತ್ತಿನ ಅತಿ ಹಿರಿಯ ಶಾರ್ಪ್ ಶೂಟರ್ ಹೇಗಾದಳು? ಒಂದು ಸ್ಫೂರ್ತಿದಾಯಕ ತುಣುಕು ನಿಮ್ಮ ಮುಂದೆ…
ಪಿಸ್ತೂಲ್ ಮೇಲೆ ಈ ಅಜ್ಜಿಗೆ ಅಪಾರ ಪ್ರೀತಿ. ವಯಸ್ಸು ಮೊನ್ನೆ ತಾನೆ ಎಂಬತ್ತು ಮುಟ್ಟಿದೆ. ಹಾಗಂದಮಾತ್ರಕ್ಕೆ ಈ ಅಜ್ಜಿಯ ಕೈಗಳು ಕಂಪಿಸಿದ್ದನ್ನು ಊರಲ್ಲಿ ಯಾರೂ ಕಂಡಿಲ್ಲ. ಈಕೆಯ ಕಣ್ಣಿನ ದೃಷ್ಟಿಗೆ ಮಸುಕು ಬಡಿದಿಲ್ಲ. ಐವತ್ತು ಮೀಟರ್ ದೂರದಲ್ಲಿ ಯಾವುದೇ ವಸ್ತುವನ್ನಿಟ್ಟರೂ, ಈ ಅಜ್ಜಿ ಅದನ್ನು ಪಿಸ್ತೂಲ್‌ನಿಂದ ಶೂಟ್ ಮಾಡುವಳು. ಅದನ್ನು ಚಪ್ಪಂಚೂರುಗೈದು ಅಚ್ಚರಿ ಹುಟ್ಟಿಸುವಳು! ಇಲ್ಲಿಯ ತನಕ ಗುರಿ ತಪ್ಪದ ಈ ಅಜ್ಜಿ, ಪ್ರಪಂಚದ ಅತಿ ಹಿರಿಯ ಶಾರ್ಪ್ ಶೂಟರ್!
“ರಿವಾಲ್ವರ್ ದಾದಿ’ ಅಂತಲೇ ಹೆಸರು ಮಾಡಿರುವ ಈ ಹಿರಿಯ ಜೀವದ ಹೆಸರು ಚಂದ್ರೋ ತೋಮರ್. ಉತ್ತರ ಪ್ರದೇಶದ “ಜೊಹ್ರಿ’ ಎಂಬ ಪುಟ್ಟ ಹಳ್ಳಿ ಈಕೆಯದು. ಇವಳಿಗೆ 6 ಮಕ್ಕಳು, 15 ಮೊಮ್ಮಕ್ಕಳು… ಈ ಭೂಮಿ ಮೇಲೆ ವಾಸಿಸುತ್ತಾ ಎಂಟು ದಶಕ ಆಗಿದ್ದೇನೋ ನಿಜ, ಆದರೆ ಪಿಸ್ತೂಲನ್ನು ಮೊದಲ ಬಾರಿಗೆ ಕೈಯಲ್ಲಿ ಹಿಡಿದಾಗ ಈಕೆಯ ವಯಸ್ಸು 67!
ಮೊಮ್ಮಗಳ ಕಾರಣಕ್ಕೆ ಚಂದ್ರೋ ತೋಮರ್, ಶೂಟಿಂಗ್ ಕಲಿತಳಂತೆ. “ಹೇಗೆ?’ ಎಂದರೆ, ಅಜ್ಜಿ ಒಂದು ಪುಟ್ಟ ಕತೆ ಹೇಳುತ್ತಾಳೆ: ಮೊಮ್ಮಗಳು ನಮ್ಮ ಹಳ್ಳಿಯ ಸಮೀಪದ ಪಟ್ಟಣದಲ್ಲಿ ಶೂಟಿಂಗ್ ಕ್ಲಬ್‌ನ ತರಗತಿಗೆ ಸೇರಿಕೊಂಡಳು. ಆಕೆಯನ್ನು ನಿತ್ಯ ಅಲ್ಲಿಗೆ ಬಿಟ್ಟು ಬರುವುದಕ್ಕೆ, ಕರಕೊಂಡು ಬರುವುದಕ್ಕೆ ಅಪ್ಪ- ಅಮ್ಮನಿಗೆ ಸಮಯ ಇರುತ್ತಿರಲಿಲ್ಲ. ಆ ಕೆಲಸವನ್ನು ನಾನೇ ವಹಿಸಿಕೊಂಡೆ. ನಾನು ಆಕೆಯ ಜೊತೆಗೆ ಹೋದಾಗ, ಟೈಂ ಪಾಸ್ ಆಗದೆ, ಶೂಟಿಂಗ್ ಕ್ಲಬ್‌ನ ಕಲ್ಲುಬೆಂಚಿನ ಮೇಲೆ ಕೂರುತ್ತಿದ್ದೆ. ಆ ದಿನಗಳಲ್ಲಿ ಗಡಿಯಾರ ನಿಧಾನವಾಗಿ ಓಡುತ್ತಿತ್ತು!
ಒಂದು ದಿನ ಕಲ್ಲು ಬೆಂಚಿನ ಮೇಲೆ ಹಾಗೆ ತೂಕಡಿಸುವುದನ್ನು ಕಂಡು, ಕ್ಲಬ್‌ನ ಕೋಚ್ ಫಾರೂಖ್ ಪಠಾಣ್ ನನ್ನನ್ನು ಕರೆದ. ಪಿಸ್ತೂಲನ್ನು ನನ್ನ ಕೈಗಿಟ್ಟ. ನನಗಾಗ ವಯಸ್ಸು ಅರವತ್ತೇಳು. ಎದೆ ನಡುಗಿತ್ತು, ಮೊದಲ ಬಾರಿಗೆ ಪಿಸ್ತೂಲ್ ಮುಟ್ಟಿದಾಗ. “ಅಲ್ಲೊಂದು ಬಲೂನ್ ಇದೆಯಲ್ಲ… ಅದಕ್ಕೆ ಗುರಿ ಮಾಡಿ, ಶೂಟ್ ಮಾಡು’ ಎಂದು ನನ್ನ ಕೈ ಹಿಡಿದು ಗುರಿ ನೆಟ್ಟುಕೊಟ್ಟ. ಬೇಡವೆಂದರೂ ಕೇಳಲಿಲ್ಲ. ನಾನು “ಢಂ’ ಅನ್ನಿಸಿದೆ. ಅಷ್ಟೇ… ಬಲೂನ್ ಢಬ್ ಎಂದಿತ್ತು! ಕೋಚ್ ಫಾರೂಕ್, ಅವತ್ತೇ ನನ್ನನ್ನೂ ಶೂಟಿಂಗ್ ತರಗತಿಗೆ ಸೇರಿಸಿಕೊಂಡುಬಿಟ್ಟ!
* *
ಇನ್ನೊಂದು ಘಟನೆ. ದೆಹಲಿ ಪೊಲೀಸ್‌ನ ಡಿಐಜಿಗೂ, ಈ ಅಜ್ಜಿಗೂ ಒಂದು ಸ್ಪರ್ಧೆ ಬಿತ್ತು. ಆ ಸ್ಪರ್ಧೆಯಲ್ಲಿ ಅಜ್ಜಿಯೇ ಗೆದ್ದಿದ್ದರು. ಸೋತು, ಮರ್ಯಾದೆ ಕಳೆದುಕೊಂಡ ಡಿಐಜಿ, ಅಜ್ಜಿಯ ಜತೆ ನಿಂತು ಫೋಟೋ ತೆಗೆಸಿಕೊಳ್ಳಲೂ ನಿರಾಕರಿಸಿದ್ದರಂತೆ. ಆಯೋಜಕರು ಒತ್ತಾಯಿಸಿದ್ದಕ್ಕೆ ಕೋಪಿಸಿಕೊಂಡು, ಹೊರ ನಡೆದಿದ್ದರಂತೆ.
ಪಿಸ್ತೂಲ್ ವಿಶ್ವಕಪ್‌ನಲ್ಲಿ ಪಾಲ್ಗೊಂಡ ಭಾರತದ ಏಕೈಕ ಮಹಿಳೆ ಚಂದ್ರೋ ತೋಮರ್. ಅಲ್ಲೂ ಈ ಅಜ್ಜಿ ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾಳೆ. ಈಕೆಯ ಮನೆಯಲ್ಲಿ ನೇತುಬಿದ್ದಿರುವ 146 ಪದಕಗಳು, ಅಜ್ಜಿಯ ಶಾರ್ಪ್ ದೃಷ್ಟಿಗೆ ಸಾಕ್ಷಿ ತೋರಿಸುತ್ತಿವೆ. ಎಲ್ಲಿ ತಾನು ಪಿಸ್ತೂಲ್ ಪ್ರಯೋಗ ಕಲಿತಳ್ಳೋ, ಅದೇ ಕ್ಲಬ್‌ಗ ಅಜ್ಜಿ ಈಗ ಹೆಡ್ ಕೋಚ್. ನಿತ್ಯ ನೂರಾರು ಹೆಣ್ಮಕ್ಕಳಿಗೆ ಪಿಸ್ತೂಲ್ ಹೇಳಿಕೊಟ್ಟು, ಆತ್ಮರಕ್ಷಣಾ ಕಲೆಯ ಪಾಠ ಮಾಡುತ್ತಾಳೆ. ಈ ನಡುವೆ ಭಾರತದ ಯಾವುದೋ ತುದಿಯಲ್ಲಿ ಪಿಸ್ತೂಲ್ ಚಾಂಪಿಯನ್‌ಶಿಪ್ ನಡೆಯುವ ಬಗ್ಗೆ ಸುದ್ದಿ ಬರುತ್ತದೆ. ಅಲ್ಲಿಗೂ ಹೋಗಿಬರುತ್ತಾಳೆ. ಅಜ್ಜಿ ಹಾಗೆ ಚಾಂಪಿಯನ್ ಆಗಿದ್ದು, ಹತ್ತಾರು ಸಲ!
“ನಾನು ಗುಂಡು ಹಾರಿಸುತ್ತೇನೆ, ನನ್ನ ಉಸಿರಿರುವ ತನಕ…’ ಎನ್ನುವುದು ಅಜ್ಜಿಯ ಸ್ಫೂರ್ತಿದಾಯಕ ಮಾತು.
– ಪುರುಷೋತ್ತಮ