ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವೃದ್ಧರೊಬ್ಬರು, ತನ್ನಿಂದ ಯಾರಿಗೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಸ್ತೆ ಬದಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಆರ್.ಬಿ.ಲೇಔಟ್‌ನ ಗೋವಿಂದರಾಜು (60) ಮೃತರು. ಶುಕ್ರವಾರ ರಾತ್ರಿ ವಾಯುವಿಹಾರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟ ಅವರು 2 ಕಿ.ಮೀ ದೂರದ ಕೆಂಬತ್ತಹಳ್ಳಿ ಮುಖ್ಯರಸ್ತೆಯ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೋವಿಂದರಾಜು, ಇಬ್ಬರು ಮಕ್ಕಳೊಂದಿಗೆ ಆರ್.ಬಿ.ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ಕೆಲ ತಿಂಗಳುಗಳಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಮಕ್ಕಳಿಬ್ಬರೂ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರಾದರೂ ತನಗೆ ಬಂದಿರುವ ಕಾಯಿಲೆಯಿಂದ ಅವರಿಗೆ ಆರ್ಥಿಕ ಹೊರೆ ಆಗಬಾರದು ಎಂಬ ಕಾರಣಕ್ಕೆ ಗೋವಿಂದರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಶುಕ್ರವಾರ ರಾತ್ರಿ ಮಕ್ಕಳ ಜತೆ ಊಟ ಮಾಡಿದ ಗೋವಿಂದರಾಜು ಅವರು ಬಳಿಕ ವಾಯುವಿಹಾರಕ್ಕೆ ಹೋಗಿ ಬರುವುದಾಗಿ ಮಕ್ಕಳಿಗೆ ಹೇಳಿ ಮನೆಯಿಂದ ಹೊರಟಿದ್ದಾರೆ. ಬಳಿಕ ಮನೆಯಿಂದ ಸುಮಾರು ಎರಡು ಕಿ.ಮೀ. ದೂರ ಬಂದು ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ ಈ ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ಸಾರ್ವಜನಿಕರು ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಮಾಲೀಕರಿಗೆ ತೊಂದರೆ ಬೇಡ: ಗೋವಿಂದರಾಜು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹೀಗಾಗಿ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಮನೆಯಲ್ಲಿರುವ ಮಕ್ಕಳು ಮತ್ತು ಮನೆ ಮಾಲೀಕರಿಗೆ ಅನಗತ್ಯ ತೊಂದರೆ ಉಂಟಾಗಬಹುದು ಎಂದು ಭಾವಿಸಿ ಮನೆಯಿಂದ ಹೊರಗೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೋಣನಕುಂಟೆ ಪೊಲೀಸರು ತಿಳಿಸಿದ್ದಾರೆ.