ಕುಷ್ಟಗಿ: ಸೂಜಿ ಹಾಕಿಸಿಕೊಂಡು ಸತ್ ಹೋದ್ರ ಏನ್ ಮಾಡ್ಲಿ.. ಸೂಜಿ ಮಾಡಕ ಬಂದೋರು ನಾಲ್ಕು ಜನ ಹಾಳ್ಯಾಗ ಬರೆದುಕೊಡ್ರೀ ನಾನೇನಾದ್ರು ಸೂಜಿ ಮಾಡಿಸಿಕೊಂಡು ನಾ.. ಸತ್ತರ ನಿಮ್ಮ ಜವಾಬ್ದಾರಿ ನಿಮ್ಮನ್ನ ಹಿಡಕೊಂಡ್ ಹೋಗಬೇಕು..
ಇದು ಕುಷ್ಟಗಿ ತಾಲೂಕಿನ ಅಡವಿಬಾವಿ ಗ್ರಾಮದ ವಯೋವೃಧ್ಧೆ ಹನಮವ್ವ ತಳವಾರ ಅವರು, ಕೋವಿಡ್ ಲಸಿಕಾಕರಣದ ಸಿಬ್ಬಂದಿಗೆ ಲಸಿಕೆ ಹಾಕಿಸಿಕೊಳ್ಳದೇ ವಾದಿಸಿ ರಂಪಾಟ ಸೃಷ್ಟಿಸಿದ ಪರಿ ಇದು.
ಕೋವಿಡ್ ಲಸಿಕಾ ಮೇಳದ ನೋಡಲ್ ಅಧಿಕಾರಿ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಅಮೀನ್ ಅತ್ತಾರ, ತಾ.ಪಂ. ಇಓ ಡಾ. ಜಯರಾಮ್ ಚೌವ್ಹಾಣ ಸೇರಿದಂತೆ ತಾ.ಪಂ. ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ 112 ಜನರಿಗೆ ಕೋವಿಡ್ ಲಸಿಕೆ ಹಾಕಿಸಿದರು. ಇದೇ ವೇಳೆ ಇಬ್ಬರು ಲಸಿಕಾಕರಣ ತಂಡಕ್ಕೆ ಕಿರಿಕ್ ಮಾಡಿದರು.
ವೃದ್ಧೆ ಹನಮವ್ವ ತಳವಾರ್ ಅವರಿಗೆ ಲಸಿಕೆ ಹಾಕಿಸಿಕೊಳ್ಳಲು ಎಷ್ಟೇ ಮನವೋಲೈಸಿದರೂ ಲಸಿಕೆ ಹಾಕಿಸಿಕೊಳ್ಳಲಿಲ್ಲ. ಇಂತಹ ಸೂಜಿ ಬಾಳ ಹಾಕಿಸಿಕೊಂಡೀನಿ ಈ ಸೂಚಿ ಬೇಡವೇ ಬೇಡ ಎಂದಾಗ ಆರೋಗ್ಯ ಸಿಬ್ಬಂದಿ ಒಮ್ಮೆ ಮಾಡಿಸಿಕೊಳ್ಳಿ ಎಂದಾಗ ಒಂದೂ ಬೇಡ, ಅರ್ಧವೂ ಬೇಡ ಈ ಎಣ್ಣಿ ಆಗಿ ಬರಲ್ಲ ಇನ್ನ ನಮ್ಮ ಮಕ್ಕಳಿಗೆ ಹಾಕಸ್ತೀನಿ ನಾ ಹಾಕಿಸಿಕೊಳ್ಳುವುದಿಲ್ಲ ವಲ್ಲೇ ಪಾ ಎಪ್ಪಾ..ನಾ ಸೂಜಿ ಮಾಡ್ಸಂಗೀಲ್ಲ. ಇಷ್ಟು ಬಲವಂತ ಮಾಡಕತ್ತೀರಿ ಅಂದ್ರ ಇದರಲ್ಲಿ ನಿಮಗ ಏನಾ ಸಿಗಕತೈತೀ ಎಂದು ವಾದಿಸಿದರು. ವಯೋವೃದ್ಧೆ ಹನಮವ್ವಳ ವಾದಕ್ಕೆ ಸುಸ್ತಾದ ಅಧಿಕಾರಿಗಳು ಲಸಿಕೆ ಹಾಕದೇ ವಾಪಸ್ಸಾದರು.
ಸೂಜಿ ಹಾಕ್ಸಂಗಿಲ್ಲ ಅಂತ ಪ್ರತಿಜ್ಞೆ ಮಾಡೀನಿ..
ಇದೇ ವೇಳೆ ಅದೇ ಗ್ರಾಮದ ಹನಮಪ್ಪ ಹನುಮಸಾಗರ ಅವರು, ಎರಡು ಎತ್ತು ಒಂದು ಬಂಡಿ, ಒಂದು ಎಮ್ಮಿ ಕಾಳು ಎಷ್ಟು ಅದಾವು ಎಲ್ಲವೂ ತಗೋರಿ ಲಸಿಕೆ ಮಾತ್ರ ಬೇಡ ನಮಗ ಕಡಾ ಬೇಡ್ರಿ ಈ ಸೂಜಿ ನಮಗ ಆಗಿ ಬರಂಗೀಲ್ಲ ಈ ಸೂಜಿ ಮಾಡಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿನೀ ಲಸಿಕಾ ತಂಡಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು.
ಕಾಲು ಪೆಟ್ಟು ಮಾಡಿಕೊಂಡ ಪಿಡಿಓ :
ಅಡವಿಬಾವಿಯಲ್ಲಿ ಕೋವಿಡ್ ಲಸಿಕಾಕರಣದ ಮೇಳದಲ್ಲಿ ಪಿಡಿಓ ವೆಂಕಟೇಶ ನಾಯಕ್, ಲಸಿಕೆ ಹಾಕಿಸಿಕೊಳ್ಳದ ವ್ಯಕ್ತಿಗೆ ಮನವೋಲೈಸಲು ಮುಂದಾದರು. ಆಗ ವ್ಯಕ್ತಿ ತಪ್ಪಿಸಿಕೊಂಡು ಓಡಲು ಯತ್ನಿಸಿದಾಗಾ ಪಿಡಿಓ ವೆಂಕಟೇಶ ನಾಯಕ್ ಸದರಿ ವ್ಯಕ್ತಿಯನ್ನು ಹಿಡಿಯಲು ಹೋಗಿ ಮುಗ್ಗರಿಸಿ ಬಿದ್ದರು. ಪಿಡಿಓ ವೆಂಕಟೇಶಗೆ ಮೊಣಕಾಲಿಗೆ ತರಚು ಗಾಯಗಳಾಗಿದೆ.
-ಮಂಜುನಾಥ ಮಹಾಲಿಂಗಪುರ ಕುಷ್ಟಗಿ