Advertisement

Covid ಕಾಲದಲ್ಲಿ ಸಹಾಯ ಮಾಡಿದ ಪೊಲೀಸ್ ಸಿಬ್ಬಂದಿಗೆ ಮೊಮ್ಮಗನ ಮದುವೆಯಲ್ಲಿ ಸನ್ಮಾನಿಸಿದ ಅಜ್ಜಿ

10:56 AM Oct 31, 2020 | keerthan |

ಕಾಪು: ಕೋವಿಡ್ 19 ಸೋಂಕು ತಾಗಿ ಆಸ್ಪತ್ರೆಯಲ್ಲಿದ್ದಾಗ, ತನ್ನೊಂದಿಗೆ ಆಸ್ಪತ್ರೆಯಲ್ಲಿದ್ದ ಅಜ್ಜಿಯನ್ನೂ ಪ್ರೀತಿಯಿಂದ ಆರೈಕೆ ಮಾಡಿ, ಮಾನಸಿಕ ಸ್ಥೈರ್ಯ ತುಂಬಿದ ಕಾಪು ಪೊಲೀಸ್ ಠಾಣಾ ಹೆಡ್ ಕಾನ್‌ಸ್ಟೇಬಲ್ ಸುಧಾಕರ ಭಂಡಾರಿ ಅವರನ್ನು ಸ್ವತಃ ಅಜ್ಜಿಯೇ ಕರೆದು, ಮೊಮ್ಮಗನ ಮದುವೆ ಮಂಟಪದಲ್ಲಿ ಸಮ್ಮಾನಿಸಿದ ಅಪರೂಪದ ಘಟನೆ ಅ.30ರಂದು ನಡೆದಿದೆ.

Advertisement

ಕಾಪು ಪೊಲೀಸ್ ಠಾಣಾ ಹೆಡ್ ಕಾನ್ಸ್‌ಟೇಬಲ್ ಸುಧಾಕರ ಭಂಡಾರಿ ಅವರು ಕೋವಿಡ್ ಪಾಸಿಟಿವ್ ಬಂದು ಉಡುಪಿ ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ಸಂದರ್ಭದಲ್ಲಿ ಸಾಸ್ತಾನದ ಎಡಬೆಟ್ಟು ಚೇಂಪಿಯ ನಿವಾಸಿ, ನಿವೃತ್ತ ಗ್ರಾಮ ಕರಣಿಕ ಜನಾರ್ದನ ಆಚಾರ್ಯ ಮತ್ತವರ ಮನೆಯವರೂ ಉಡುಪಿ ಟಿಎಂಎ ಪೈ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ದಾಖಲಾಗಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕುಟುಂಬ ಸದಸ್ಯರೆಲ್ಲಾ ಗುಣಮುಖರಾಗಿ ಮನೆಗೆ ತೆರಳಿದ್ದು, ಜನಾರ್ದನ ಆಚಾರ್ಯ ಅವರ ತಾಯಿ 87 ವರ್ಷದ ಜಾನಕಿ ಆಚಾರ್ಯ ಅವರು ಮತ್ತೆ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿಯುವ ಅನಿವಾರ್ಯತೆಗೆ ಸಿಲುಕಿದ್ದರು. ಮನೆಯವರಿಗೆ ಅತ್ತ ಮನೆಗೂ ಹೋಗಲಾಗದೇ, ತಾಯಿಯೊಂದಿಗೆ ಕುಳಿತುಕೊಳ್ಳಲೂ ಆಗದೇ ಸ್ಥಿತಿ ಎದುರಾದಾಗ ಪೊಲೀಸ್ ಸುಧಾಕರ್ ಅವರು ಜಾನಕಿ ಆಚಾರ್ಯ ಅವರಿಗೆ ನೆರವಿಗೆ ಧಾವಿಸಿದ್ದರು.

ಆಸ್ಪತ್ರೆಯಲ್ಲಿ ಇರುವಷ್ಟು ದಿನಗಳ ಕಾಲ ಸುಧಾಕರ್ ಅವರು ಅವರನ್ನು ನೋಡಿಕೊಂಡಿದ್ದು, ಮನೆಯವರ ಒಡನಾಟವಿಲ್ಲದೇ ಮಾನಸಿಕವಾಗಿ ನೊಂದಿದ್ದ ಅಜ್ಜಿಗೆ ಧೈರ್ಯ ತುಂಬಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆ ಸ್ವತಃ ಸುಧಾಕರ್ ಅವರೇ ಜಾನಕಿ ಆಚಾರ್ಯ ಅವನ್ನು ಆಸ್ಪತ್ರೆಯ ನಾಲ್ಕು ಮಹಡಿಯ ಮೇಲಿನ ಕೋಣೆಯಿಂದ ಕೆಳಗಿನವರೆಗೆ ತಂದು ಬಿಟ್ಟು, ಮನೆಯವರಿಗೆ ಒಪ್ಪಿಸಿದ್ದರು. ಪೊಲೀಸ್ ಸಿಬಂದಿಯ ಸೇವೆಯು ಅಜ್ಜಿ ಮತ್ತು ಅಜ್ಜಿಯ ಮನೆಯವರ ಮೆಚ್ಚುಗೆಗೆ ಪಾತ್ರವಾಗಿತ್ತು.

Advertisement

ಎಂಟು ಮಕ್ಕಳ ತುಂಬು ಸಂಸಾರವನ್ನು ಹೊಂದಿರುವ ಜಾನಕಿ ಆಚಾರ್ಯ ಅವರ ಕಷ್ಟ ಕಾಲದಲ್ಲಿ ತನ್ನ ನೆರವಿಗೆ ಧಾವಿಸಿದ್ದ ಪೊಲೀಸ್ ಸಿಬಂದಿಯ ಸೇವೆಯನ್ನು ಗಮನದಲ್ಲಿರಿಸಿಕೊಂಡಿದ್ದು ಸುಧಾಕರ್ ಅವರನ್ನು ಮಗನೆಂದೇ ಕರೆಯಲಾರಂಭಿಸಿದ್ದರು. ಅದೇ ಪೀತಿಯಿಂದ ಅಜ್ಜಿ ಸುಧಾಕರ್ ಭಂಡಾರಿ ಅವರರಿಗೆ ಸ್ವತಃ ದೂರವಾಣಿ ಕರೆ ಮಾಡಿ, ತನ್ನ ಮೊಮ್ಮಗನ ಮದುವೆಗೆ ಆಮಂತ್ರಿಸಿದ್ದರು.

ಅಜ್ಜಿಯ ಪ್ರೀತಿಯ ಕರೆಗೆ ಓಗೊಟ್ಟು ಮದುವೆಗೆ ತೆರಳಿದ ಸುಧಾಕರ್ ಭಂಡಾರಿ ಅವರನ್ನು ಮದುವೆ ಮನೆಯಲ್ಲಿ ಎಲ್ಲರಿಗೆ ಪರಿಚಯಿಸಿಕೊಟ್ಟು ಸಮ್ಮಾನಿಸುವ ಮೂಲಕ ಉಪಕಾರ ಸ್ಮರಣೆ ಮಾಡಿಕೊಂಡಿದ್ದಾರೆ. ಅಜ್ಜಿಯ ಉಪಕಾರ ಸ್ಮರಣೆಗೆ ಸುಧಾಕರ್ ಭಂಡಾರಿ ಅವರೂ ಸಂತುಷ್ಟರಾಗಿದ್ದು, ಮೂರು ತಿಂಗಳ ಬಳಿಕ ಅಜ್ಜಿ ತನ್ನನ್ನು ಕರೆದು ಗೌರವಿಸಿರುವುದಕ್ಕೆ ಹೆಮ್ಮೆ ಪಟ್ಟಿದ್ದಾರೆ. ಇಂತಹ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪೊಲೀಸ್ ಇಲಾಖೆ, ಕೋವಿಡ್ ಆಸ್ಪತ್ರೆಯ ಸಿಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next