Advertisement

ಹಳೆ ವಾಹನಗಳು ಗುಜರಿಗೆ! ನೂತನ ಗುಜರಿ ನೀತಿ ಪ್ರಕಟಿಸಿದ ಸಚಿವ ನಿತಿನ್‌ ಗಡ್ಕರಿ

03:29 AM Mar 19, 2021 | Team Udayavani |

ಹೊಸದಿಲ್ಲಿ : ಹದಿನೈದು ವರ್ಷ ಹಳೆಯ ವಾಣಿಜ್ಯ ಮತ್ತು 20 ವರ್ಷ ಹಳೆಯ ವೈಯಕ್ತಿಕ ಬಳಕೆಯ ವಾಹನಗಳನ್ನು
ಗುಜರಿಗೆ ಹಾಕಿದರೆ ಹೊಸ ವಾಹನ ಖರೀದಿ ವೇಳೆ ಶೇ. 5ರಷ್ಟು ರಿಯಾಯಿತಿ ಸಿಗಲಿದೆ.

Advertisement

ಇದು ಕೇಂದ್ರ ಸರಕಾರದ ಹೊಸ ಗುಜರಿ ನೀತಿಯ ಪ್ರಮುಖ ಅಂಶ. ಗುರುವಾರ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೊಸ ಗುಜರಿ ನೀತಿ ಪ್ರಕಟಿಸಿದ್ದಾರೆ.

ಗುಜರಿ ನೀತಿಯಂತೆ, 20 ವರ್ಷ ಪೂರೈಸಿದ ವೈಯಕ್ತಿಕ ಬಳಕೆಯ ವಾಹನಗಳು ಮತ್ತು 15 ವರ್ಷ ಪೂರೈಸಿದ ವಾಣಿಜ್ಯ ಬಳಕೆಯ ವಾಹನಗಳು ಫಿಟ್ನೆಸ್‌ ಪರೀಕ್ಷೆ ಪಾಸಾಗಬೇಕು. ಫೇಲ್‌ ಆದರೆ ಗುಜರಿಗೆ ಹಾಕಿ ಅಲ್ಲಿಂದ ಪ್ರಮಾಣಪತ್ರ ಪಡೆಯಬೇಕು.

ಮಾಲಕರಿಗೆ ಉತ್ತೇಜನ
ವಾಹನ ಗುಜರಿಗೆ ಹಾಕುವುದರಿಂದ ಮಾಲಕರಿಗೆ ನಷ್ಟವಾಗುತ್ತದೆ. ಇದಕ್ಕಾಗಿ ಈ ನೀತಿಯಲ್ಲಿ ಹೊಸ ವಾಹನ ಖರೀದಿಗೆ ಪ್ರೋತ್ಸಾಹ ನೀಡುವ ಬಗ್ಗೆ ಪ್ರಸ್ತಾವಿಸಲಾಗಿದೆ. ಹಳೆ ವಾಹನ ಗುಜರಿಗೆ ಹಾಕಿರುವ ಪ್ರಮಾಣಪತ್ರವನ್ನು ಹೊಸ ವಾಹನ ಖರೀದಿ ವೇಳೆ ತೋರಿಸಿದರೆ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹಳೇ ವಾಹನ ಗಳ ಗುಜರಿ ಮೌಲ್ಯವನ್ನೂ ನಿಗದಿ ಮಾಡಲಾಗಿದೆ. ಹೊಸ ವಾಹನದ ಎಕ್ಸ್‌ ಶೋರೂಂ ದರದ ಶೇ. 4ರಿಂದ ಶೇ. 6ರಷ್ಟನ್ನು ಗುಜರಿಗೆ ಹಾಕುವ ವಾಹನಕ್ಕೆ ನೀಡಬೇಕು.

ಯಾವಾಗಿನಿಂದ ಜಾರಿ?
2021ರ ಅ. 1 : ಫಿಟ್ನೆಸ್‌ ಪರೀಕ್ಷೆಗೆ ನಿಯಮಗಳು ಮತ್ತು ಗುಜರಿ ಕೇಂದ್ರಗಳು ಜಾರಿಗೆ ಬರುವ ದಿನ

Advertisement

2022ರ ಎ. 1 : 15 ವರ್ಷ ಮೀರಿದ ಸರಕಾರಿ ಮತ್ತು ಸಾರ್ವಜನಿಕ ಉದ್ದಿಮೆಗಳ ವಾಹನ ಗುಜರಿಗೆ ಹಾಕಲು ಕೊನೇ ದಿನ

2023ರ ಎ. 1 : ಭಾರೀ ಗಾತ್ರದ ವಾಣಿಜ್ಯ ವಾಹನಗಳಿಗೆ ಫಿಟ್ನೆಸ್‌ ಪರೀಕ್ಷೆ ಕಡ್ಡಾಯ.

2024ರ ಜೂ. 1 : ಇತರ ವರ್ಗದ ವಾಹನಗಳಿಗೆ ಕಡ್ಡಾಯ ಫಿಟ್ನೆಸ್‌ ಪರೀಕ್ಷೆ ಹಂತ ಹಂತವಾಗಿ ಆರಂಭವಾಗುವ ದಿನಾಂಕ.

ಮುಖ್ಯಾಂಶಗಳು
– ನೋಂದಣಿ ಅವಧಿ ಮುಗಿದ ಬಳಿಕ ಎಲ್ಲ ವಾಹನಗಳು ಕಡ್ಡಾಯವಾಗಿ ಫಿಟ್ನೆಸ್‌ ಪರೀಕ್ಷೆಗೆ ಒಳಗಾಗಬೇಕು.
– ವಾಣಿಜ್ಯ ಬಳಕೆಯ ವಾಹನಗಳು 15 ವರ್ಷ ಪೂರೈಸಿದ ಕೂಡಲೇ ಫಿಟ್ನೆಸ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು.
– ವೈಯಕ್ತಿಕ ಬಳಕೆಯ ವಾಹನಗಳಿಗೆ 20 ವರ್ಷ ಪೂರೈಸಿದ ಮೇಲೆ ಫಿಟ್ನೆಸ್‌ ಪರೀಕ್ಷೆ.
– ಫಿಟ್ನೆಸ್‌ ಪರೀಕ್ಷೆಯಲ್ಲಿ ಫೇಲ್‌ ಆಗುವ ವಾಹನಗಳ “ಜೀವಿತಾವಧಿ’ ಪೂರ್ಣ; ಅಂದರೆ ಗುಜರಿಗೆ.
– ಹಳೆ ವಾಹನಗಳ ಬಳಕೆ ನಿಲ್ಲಿಸುವ ಸಲುವಾಗಿ ಮರು ನೋಂದಣಿ ಶುಲ್ಕ ಹೆಚ್ಚಳ.
– ಗುಜರಿ ಪ್ರಕ್ರಿಯೆ ಸರಾಗವಾಗಿ ನಡೆಯಲು ದೇಶಾದ್ಯಂತ ಫಿಟ್ನೆಸ್‌ ಪರೀಕ್ಷಾ ಕೇಂದ್ರ ಸ್ಥಾಪನೆ.

ಟೋಲ್‌ ಬೂತ್‌ ತೆರವು
ಇನ್ನೊಂದು ವರ್ಷದಲ್ಲಿ ದೇಶದ ಎಲ್ಲ ಟೋಲ್‌ ಸಂಗ್ರಹ ಕೇಂದ್ರಗಳನ್ನು ತೆರವು ಮಾಡಲಾಗುತ್ತದೆ ಎಂದು ಸಚಿವ ಗಡ್ಕರಿ ತಿಳಿಸಿದ್ದಾರೆ. ಇದಕ್ಕೆ ಬದಲಾಗಿ ಜಿಪಿಎಸ್‌ ಆಧರಿತ ವ್ಯವಸ್ಥೆ ಬರಲಿದ್ದು, ಎಲ್ಲ ವಾಹನಗಳು ತಡೆರಹಿತವಾಗಿ ಸಂಚರಿಸಬಹುದಾಗಿದೆ ಎಂದಿದ್ದಾರೆ. ರಷ್ಯಾದ ಸಹಕಾರದಿಂದ ಈ ವ್ಯವಸ್ಥೆಯನ್ನು ಜಾರಿ ಮಾಡಲಿದ್ದೇವೆ. ಟೋಲ್‌ ಶುಲ್ಕವನ್ನು ಬಳಕೆದಾರರ ಖಾತೆಯಿಂದ ನೇರವಾಗಿ ಕಡಿತ ಮಾಡಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next