ಎಲ್ಲ ಹೊಸತಾಗುತ್ತ ಹಳೆಯ ತನ್ನತನವ ಹೊಸತಾಗಲಿಸುವ ಈ ಪ್ರಕ್ರಿಯೆಯೇ ನನ್ನನ್ನು ಪ್ರತಿ ಬಾರಿಯೂ ಊರಿಗೆ ಹೋದಾಗ ಕಾಡುವ ತಹತಹಿಕೆ. ಅಂಕೋಲಕ್ಕೆ ಹೋಗುವುದೆಂದಾದ್ರೆ ಬರೀ ಊರಿಗೆ ಹೋದಂತಲ್ಲ, ಅದೊಂದು ಟೈಮ್ ಟ್ರಾವೆಲ…. ಕಾಲದಗರ್ಭದೊಳಕ್ಕೆ ಹೊಕ್ಕು ಹೊರಬಂದಂತೆ. ಕಾಲವನ್ನೇ ನಿಲ್ಲಿಸಿದಂತೆ ನಿಧಾನಕ್ಕೆ ತಿರುಗುತ್ತಿರುವ ಮುಳ್ಳುಗಳಿಗೆ ಜೋತುಬಿದ್ದು ರಿಮ್ಮನೆ ಬೀಸಿ
Advertisement
ಒಗೆದು ಹೊರಬಿದ್ದಂತೆ. ಹೌದು. ಭಾರತ ಬಹಳಷ್ಟು ಬದಲಾಗಿದೆ. ಬೆಂಗಳೂರಿನ ಗುರುತೇ ಮರೆತು ಹೋಗಿದೆ. ಹುಬ್ಬಳ್ಳಿಯ ಧೂಳಿಗೆ ಕರೀ ಮಣ್ಣ ಬಣ್ಣವೇ ಮರೆಯಾಗಿ ಎಲ್ಲ ಕೆಂಪಾಗಿದೆ. ಶಿರಸಿಯ ರಸ್ತೆಗಳಲ್ಲಿ ಕಾಲುಗಳಿಗಿಂತ ಕಾರುಗಳೇ ಹೆಚ್ಚಿವೆ. ಏನೋ ಒಂದಿಷ್ಟು ಹೊಸ ಅಂಗಡಿ, ಕೆಲರಸ್ತೆಗಳ ಚರಂಡಿಗಳ ಮುಚ್ಚಿಗೆ, ಬಸ್ಸಿನ ಬೋರ್ಡು, ಬಣ್ಣ, ಸುಣ್ಣ ಬಿಟ್ಟರೆ ಅಂಕೋಲದ ಕಾಲ ಹಾಗೆಯೇ ಇದೆ. ಈ ಊರಿಗೊಂದು ವಿಚಿತ್ರ ಕ್ಯಾರೇ ಎನ್ನದ ನಿರಾಳತೆಯಿದೆ.ವೈರಾಗ್ಯವೂ ಜೀವನೋತ್ಸಾಹವೂ ಒಟ್ಟೊಟ್ಟಿಗೆ ಇರಬಲ್ಲಂತ ಎಡಬಿಡಂಗಿತನವಿದೆ. ಅದಕ್ಕೇ ಏನೋ, ನನಗೆ ಊರಿಗೆ ಹೋಗಿ ಬಂದಂತೆ ಎನಿಸುವುದು ಅಂಕೋಲೆಯ ಮರಳದಂಡೆಯಲ್ಲಿ ಅರ್ಧ ಕಾಲು ಹೂತು ಹೋದಂತೆ ಕುಳಿತಾಗ ಮಾತ್ರ. ಆ ಬಂಡೆಗಳ ಬೆಡಗು ಈಗಲೂ ಹಾಗೆಯೇ ಇದೆ.
ಊರು, ಜನ, ಜೀವನ ಬದಲಾಗುವುದು ಪ್ರಕೃತಿ ಸಹಜ. ಎಲ್ಲವೂ ಅದರದ್ದೇ ಆದ ವೇಗ, ತಾಳಕ್ಕೆ ತಕ್ಕಂತೆ ಪರಿವರ್ತಿತಗೊಳ್ಳುತ್ತ ಸಾಗುತ್ತವೆ. ಆದರೆ, ಕೆಲವು ಊರುಗಳಿಗೆ ಭೂಮಿ ವೇಗಕ್ಕಿಂತ ನಿಧಾನಕ್ಕೆ ಚಲಿಸುವ ತಾಕತ್ತಿದೆ. ಎಲ್ಲ ಪರಿವರ್ತನೆಯ ಆಪೋಷಣೆಗೊಂಡು ತನ್ನದೇ ಸಮತೋಲನದಲ್ಲಿ ತಿರುಗುವ ಗತಿಯಿದೆ. ಕಾಲನ ತಡೆ ಹಿಡಿದು ಇಂದಿಗೂ ಇಪ್ಪತ್ತು ವರ್ಷಗಳ ಹಿಂದಿನ ನೋಟಕ್ಕೆ ಬಹಳಷ್ಟೇನೂ ಕಳಕೊಳ್ಳದೆ ಎಲ್ಲವೂ ಸಿಗುವ ಊರಾಗಿ ಬೆಳೆದು, ಹಳ್ಳಿಯ ಹೊಳಪಿಗೆ ಹೊರತಾಗಿರದೆ ಊರೊಂದು ಇದೆ ಎಂದಾದಲ್ಲಿ ಅಂಥದ್ದೊಂದು ಊರೆಂಬ ಇಂದಿನ ಕಾಲದಲಿ Éಉತ್ಪ್ರೇಕ್ಷೆಯೇನೋ. ಆಧುನಿಕ ಜಗತ್ತು ಅದನ್ನು ಶುದ್ಧ ಅಸಡ್ಡೆಯಿಂದ ಕಾಣಬಹುದೇನೋ. ಆದರೆ, ಅದುವೇ ಖುಷಿಯ ಕಣಜ ನನಗೆ. ಊರು ಬದಲಾಗಿದೆ. ಬೆಳೆದಿದೆ. ಆದರೂ ಎಲ್ಲೂ ಊರು ಬದಲಾಗಿಲ್ಲ. ಇಂದಿಗೂ ಎದೆಯಾಳದಲ್ಲಿನ ಅಂಕೋಲೆ ಒಳಗೂ ಹೊರಗೂ ಹಾಗೆಯೇ ಇದೆ.
ಈ ಅಂಕೋಲೆಯ ಉಮೇದಿ ಬಿಟ್ಟರೆ ಜಗತ್ತಲ್ಲಿ ಬದಲಾಗದೆ ಉಳಿದಿದ್ದು ಬಹುಶಃ ಕೆಎಸ್ಸಾರ್ಟಿಸಿ ಬಸ್ಸು. ಬಸ್ಸು ಒಂದು ಬಗೆಯಲ್ಲಿ ಎಲ್ಲರನ್ನೂ ಎಲ್ಲವನ್ನೂ ಸಮಗೊಳಿಸುವ ಇಕ್ವಾಲೈಝರ್. ಯಾರ್ಯಾರನ್ನೋ ಎÇÉೆಲ್ಲಿಗೋ ತಲುಪಿಸುವ ಬಸ್ಸಿಗೆ ಟಿಕೇಟಿನ ದರವಷ್ಟೇ ಮುಖ್ಯ. ನಿನ್ನ ನೈಕಿ ಶೂಗೂ, ಅವಳ ಹವಾಯಿ ಚಪ್ಪಲಿಗೂ ಅದೇ ಮೆಟ್ಟಿಲು. ನೀ ಇಳಿಯುವ ಹತ್ತುವ ಕಾಯಕಕ್ಕೆ ರೈಟ್ ರೈಟ್ ಎನ್ನುವ ದೊಣ್ಣೆನಾಯಕನ ಗಮ್ಯವಾವುದೋ.
ಎಂಜಿನಿಯರಿಂಗ್ ಮುಗಿದ ಬಳಿಕ ನಡುವೆ ಕೆಲವೊಮ್ಮೆ ಬೆಂಗಳೂರಿಂದ ಮನೆಗೆ ಬಂದಿದ್ದು ಬಿಟ್ಟರೆ ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ನಾನು ಸುಮಾರು 17-18 ವರ್ಷಗಳಲ್ಲಿ ಓಡಾಡಿಯೇ ಇರಲಿಲ್ಲ. ಪ್ರತೀ ಬಾರಿ ಊರಿಗೆ ಬಂದಾಗಲೂ ಚಿಕ್ಕಪುಟ್ಟ ಕಾರು ಪ್ರಯಾಣವೇ ಆದ್ದರಿಂದ, ಬಸ್ಸುಗಳಲ್ಲಿನ ವಾಂತಿ ಪ್ರಯಾಣದ ಸುಖವೇನೂ ಬಯಸಿ ಬಯಸಿ ಕರೆಸಿಕೊಳ್ಳುವ ಭಾಗ್ಯವಲ್ಲವಾದ್ದರಿಂದ ಆ ಬಗ್ಗೆ ಗಮನ ಕೂಡ ಹರಿಸಿರಲಿಲ್ಲ. ಆದರೆ, ಈ ಬಾರಿ ಶಿರಸಿಯಿಂದ ಹುಬ್ಬಳ್ಳಿಗೆ ಬಸ್ಸಿನಲ್ಲಿಯೇ ಹೋಗುವ ಸಾಹಸ ಕೈಗೊಂಡೆ. ಹೌದು. ಓಡಿ ಬಸ್ಸು ಹಿಡಿವ, ಅಲ್ಲಿ ಸೀಟು ಹಿಡಿಯುವ ಚತುರತೆ ಎಲ್ಲ ಜೀವನಾವಶ್ಯಕ ತರಬೇತಿಗಳೆಲ್ಲ ಮರೆತು ಹೋಗಿವೆಯೇನೋ ಎಂಬ ಭಯವಿತ್ತು. ಆದರೆ, ಇವೆಲ್ಲ ಸೈಕಲ್ ಬ್ಯಾಲೆನ್ಸಿನಂತೆ. ಬೇಕೆಂದಾಗ ತಟ್ಟನೆ ನೆನಪಾಗುತ್ತವೆ. ಆ ವರ್ಷಗಳ ಮೇಲೆ ಕೆಎಸ್ಸಾರ್ಟಿಸಿ ಬಸ್ ಹತ್ತುವುದೇ ಪುಳಕಕ್ಕೆ ಕಾರಣವಾಗಬಹುದೆಂದು ನನ್ನ ಕನಸು ಮನಸಿನಲ್ಲಿಯೂ ಯಾವತ್ತೂ ಖಂಡಿತ ಎಣಿಸಿರಲಿಲ್ಲ. ಯಾರು ಎಷ್ಟೇ ಕಾಲೆಳೆಯಲಿ, ಬಸ್ ಕಂಡಕ್ಟರನೊಬ್ಬ ಆಗಲೂ ಈಗಲೂ ಮುಂದಕ್ಕೆ ಹೋಗ್ರೀ ಎಂದೇ ಹೇಳುತ್ತಿರುವನು. ಬಸ್ಸು ಮುಂಚಿನಂತೆ ಕಿಕ್ಕಿರಿದು ತುಂಬಿರುವುದಿಲ್ಲ ಈಗ. ಆದರೆ, ಈಗಲೂ ಬಸ್ಸಿನ ಕಿಟಕಿ ಸರಳುಗಳಿಗೆ ಕಬ್ಬಿಣದ ತಣ್ಣಗಿನ ಅದೇ ಹಳೆಯ ವಾಸನೆಯಿದೆ. ಆ ಸಂದಿ ಮೂಲೆಗಳಲ್ಲಿ ಅವವೇ ಯಾರೋ ತುಪ್ಪಿಟ್ಟ ಎಲೆಯಡಿಕೆಯ ಕಲೆಗಳಿವೆ. ಸೀಟು ಕೊಂಚ ಹೆಚ್ಚಿಗೆ ಮೆತ್ತಗಿದೆ. ಕಾಲೇಜು ಹುಡುಗಿಯರ ಪೌಡರ್ ವಾಸನೆ, ಹೂ ಮಾರುವವರ ಎಣ್ಣೆ ತಲೆಯ ಘಮ, ಪಕ್ಕದ ಗೂಡಂಗಡಿಗಳಿಂದ ನಡುನಡುವೆ ಗವ್ವೆಂದು ಅಡರುವ ಸಿಗರೇಟಿನ ಹೊಗೆ ಎಲ್ಲ ಹಾಗೆಯೇ ಇದೆ. ರಸ್ತೆ ಪಕ್ಕದ ಮಾವಿನ ಚಿಗುರು ಕೆಂಪುಧೂಳಿನಿಂದ ಮೆತ್ತಿ ಹೋಗಿದೆ. ಮುಂಚೆಲ್ಲ ಫೆಬ್ರವರಿ, ಮಾರ್ಚಿನ ವಸಂತಾಗಮನದ ಎದುರಲ್ಲಿ ಇಷ್ಟೊಂದು ಧೂಳಿರಲಿಲ್ಲ. ಈಗ ಉದ್ದಕ್ಕೂ ಇಕ್ಕೆಲಗಳಲ್ಲಿ ಕೆಂಪಾದವೋ, ಎಲ್ಲ ಕೆಂಪಾದವೋ…
ಈ 18 ವರ್ಷಗಳಲ್ಲಿ 5 ರೂಪಾಯಿ ಎಳನೀರು 30 ರೂಪಾಯಿಯಾಗಿದೆ. ಆದರೆ, ಬಸ್ಸಿನ ದರ ಮಾತ್ರ ಬರೀ ಮೂರುಪಟ್ಟಷ್ಟೇ ಹೆಚ್ಚಿದೆ. ಕಂಡಕ್ಟರ್ ಮುಂಚಿನಂತೆ ಗುಲಾಬಿ, ಬಿಳಿ, ಹಳದಿಯ ಚೀಟಿ ಕೊಡುವುದಿಲ್ಲ. ಬದಲಿಗೆ ಪ್ರಿಂಟೆಡ್ ರಸೀತಿ ಹಿಡಿಸುತ್ತಾನೆ. ಅಂತೆಯೇ ಕೆಸ್ಸಾರ್ಟಿಸಿ ಬಸ್ಸು ಎಲ್ಲ ಬದಲಾಗಿಯೂ, ಏನೂ ಬದಲಾಗದೆ ಹಾಗೆಯೇ ಇದೆ.
ಚಿತ್ರಕೃಪೆ- ನಾಗರಾಜ ವೈದ್ಯ